ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಏನು ನಡೆಯಿತು ಎಂಬ ಸತ್ಯ ಕರ್ನಾಟಕದ ಜನತೆಗೆ ಗೊತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಪಶ್ಚಾತ್ತಾಪ ವಿಚಾರವಾಗಿ ನಾನು ರಂಭಾಪುರಿಶ್ರೀ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ ಎಂದು ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಲಿಂಗಾಯತ ಧರ್ಮ ವಿಚಾರದಲ್ಲಿ ಪಶ್ಚಾತ್ತಾಪವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಲಿಂಗಾಯತ ಧರ್ಮದ ವಿಚಾರದಲ್ಲಿ ಏನಾಯಿತು ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಮತ್ತು ಜಗದ್ಗುರುಗಳ ನಡುವೆ ನಡೆದಿರುವ ಮಾತುಕತೆ ಅದು. ರಂಭಾಪುರಿ ಪೀಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಶ್ಚಾತ್ತಾಪವಾಗಿದೆ ಎಂದು ಹೇಳಿದ್ದಾರೆಂದು ಶ್ರೀಗಳು ಹೇಳಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರೂ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಹಿಂದೂತ್ವ ಯಾರೊಬ್ಬರ ಆಸ್ತಿಯಲ್ಲ, ರಾಹುಲ್ ಗಾಂಧಿ ಕೂಡ ಹಿಂದೂ: ಡಿಕೆ ಶಿವಕುಮಾರ
ಹೀಗಾಗಿ ಅವರವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಆದ ಕಾರಣ ಏನೂ ಹೇಳುವುದಿಲ್ಲ. ಆದರೆ ಆ ಸಂದರ್ಭದಲ್ಲಿ ಏನು ನಡೆಯಿತು ಎಂದ ಸತ್ಯ ಎಲ್ಲರಿಗೂ ಗೊತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇನ್ನೂ ಭದ್ರತೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಅವರಿಗೆ ಭ್ರದ್ರತೆಯನ್ನು ಹೆಚ್ಚಿಸುವಂತೆ ಈಗಾಗಲೇ ಆದೇಶ ಕೊಟ್ಟಿದ್ದೇನೆ ಎಂದು ತಿಳಿಸಿದರು.
ನಾನು ರಂಭಾಪುರಿಶ್ರೀ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ: ಸಿದ್ದರಾಮಯ್ಯ
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಪಶ್ಚಾತ್ತಾಪ ವಿಚಾರವಾಗಿ ನಾನು ರಂಭಾಪುರಿಶ್ರೀ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ ಎಂದು ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಏನಾಯ್ತು ಅಂತ ವಿವರಿಸಿದ್ದೇನೆ. ಆಗ ನಾನು ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ. ಇದು ಅಪಪ್ರಚಾರ ಆಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶಾಮನೂರು ಶಿವಶಂಕರಪ್ಪರವರು ಒಂದು ಅರ್ಜಿ ಕೊಟ್ಟಿದ್ದರು. ವೀರಶೈವ ಧರ್ಮ ಮಾಡಿ ಅಂತ ಅರ್ಜಿಯನ್ನು ಕೊಟ್ಟಿದ್ದರು. ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಹಿಂದೂ ರಾಷ್ಟ್ರ ಮಾಡಬೇಕೆಂಬುದು ಬಿಜೆಪಿ ಅಜೆಂಡಾ
ಬಿಜೆಪಿಯವರು ಹಿಂದುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಕೋಮುವಾದ ಅಜೆಂಡಾ ಇಟ್ಕಂಡು ಎಲ್ಲವನ್ನೂ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರ ಮಾಡಬೇಕೆಂಬುದು ಅವರ ಅಜೆಂಡಾ, ಅದನ್ನು ಮಾಡಲು ಹೋಗ್ತಾ ಇದ್ದಾರೆ. ಆದರೆ ಸಂವಿಧಾನದಲ್ಲಿ ಎಲ್ಲ ಧರ್ಮವನ್ನು ಸಮಾನಾಗಿ ಕಾಣಬೇಕು. ಸಮಾನಾಗಿ ಗೌರವಿಸಬೇಕು. ಎಲ್ಲರಿಗೂ ಕೂಡ ಕಾನೂನು ರಕ್ಷಣೆ ಕೊಡಬೇಕು. ತಾರತಮ್ಯ ಮಾಡಬಾರದು ಅಂಥ ಹೇಳುತ್ತಾರೆ. ಆದರೆ ಬಿಜೆಪಿಯವರು ತಾರತಮ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರು ಮಂಗಳೂರಿಗೆ ಪ್ರವೀಣ್ ನೆಟ್ಟರ್ ಮನೆಗೆ ಹೋಗಿದ್ದರು.
ಹೋಗಬೇಕು ಪರಿಹಾರವನ್ನು ಕೊಡಬೇಕು. ಆದರೆ ಇನ್ನಿಬ್ಬರು ಮುಸಲ್ಮಾನರು ಸತ್ತಿದ್ದಾರಲ್ಲ ಅವರ ಮನೆಗೂ ಹೋಗಬೇಕು, ಪರಿಹಾರವನ್ನು ಕೊಡಬೇಕಲ್ವಾ? ತೆರಿಗೆ ಹಣದಲ್ಲಿ ಸರ್ಕಾರದಿಂದ ಪರಿಹಾರ ಕೊಡ್ತಾ ಇದ್ದಾರೆ, ಎಲ್ಲರಿಗೂ ಕೊಡಬೇಕು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಇನ್ಯಾರೆ ಇರಲಿ ಎಲ್ಲರಿಗೂ ಪರಿಹಾರ ಕೊಡಬೇಕು ಎಂದು ರಾಜ್ಯ ಸರ್ಕಾರದ ನಡೆ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.