
ಬೆಂಗಳೂರು, (ಮೇ 19): ಬೆಂಗಳೂರಿನಲ್ಲಿ (Bengaluru) ಭಾನುವಾರ(ಮೇ 18) ಸುರಿದ ಧಾರಾಕಾರ ಮಳೆ (Rain) ಕೆಲವು ಏರಿಯಾಗಳ ನಿವಾಸಿಗಳು ಬೋಟ್‌ಗಳಲ್ಲಿ ಸಂಚರಿಸುವಂತೆ ಮಾಡಿದೆ. ಮನೆಗಳಿಗೆ ನೀರು ನುಗ್ಗಿದ್ರೆ ಸಿಲಿಕಾನ್ ಸಿಟಿ ಜನ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಕೆಲವು ಬಡಾವಣೆಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದ್ರೆ, ರಸ್ತೆಗಳೆಲ್ಲಾ ಇನ್ನೂ ಮುಳುಗಡೆಯಾಗಿವೆ. ವರ್ಷಧಾರೆಯ ಈ ಆತಂಕದ ಮಧ್ಯೆ ರಾಜ್ಯ ಹವಾಮಾನ ಇಲಾಖೆ ಮುಂದಿನ 4 ದಿನಗಳ ಕಾಲ ವ್ಯಾಪಕ ಮಳೆಯಾಗುವ ಎಚ್ಚರಿಕೆ ನೀಡಿದೆ. ಇಂದು (ಮೇ 19) ಮತ್ತು ನಾಳೆ(ಮೇ 20) ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೂ ಆಲರ್ಟ್ ಘೋಷಿಸಲಾಗಿದೆ ಇದರಿಂದ ಐಟಿ ಕಂಪನಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಸೂಚನೆ ನೀಡಲಾಗಿದೆ.
ಮಳೆ ಹಿನ್ನೆಲೆಯಲ್ಲಿ ಉದ್ಯೋಗಿಗಳ ಹಿತದೃಷ್ಟಿಯಿಂದ ಮನೆಯಲ್ಲೇ ಕೆಲಸ ನಿರ್ವಹಿಸಲು ಕೆಲ ಐಟಿ ಕಂಪನಿಗಳು ಸೂಚಿಸಿದ್ದು, ಕಲಸಕ್ಕೆ ಬರಲು ಸಾಧ್ಯವಾದರೆ ಬರಬಹುದು. ಇಲ್ಲವಾದಲ್ಲಿ ವರ್ಕ್ ಫ್ರಂ ಹೋಂ ಮಾಡುವಂತೆ ತಮ್ಮ ಉದ್ಯೋಗಿಳಿಗೆ ತಿಳಿಸಲಾಗಿದೆ.
ಈಗಾಗಲೇ ನಗರದ ಅನೇಕ ಕಡೆಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಕ್ಲಿಯರ್ ಮಾಡಲು ಬಿಬಿಎಂಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಹೀಗಾಗಿ ಇಂದು ಹಲವು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂಗೆ ಅವಕಾಶ ನೀಡಿದ್ದವು. ಆದ್ರೆ, ಮಳೆ ಸಹ ಇನ್ನು ಕೆಲ ದಿನಗಳು ಮುಂದುವರಿಯುವ ಸಾಧ್ಯತೆಗಳು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಾಳೆಯೂ (ಮೇ 20) ಸಹ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿವೆ.
ಕರ್ನಾಟಕದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇನ್ನೂ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ನಿನ್ನೆಯಂತೆ ಬೆಂಗಳೂರಲ್ಲಿ ಇಂದೂ ಕೂಡ ಧಾರಾಕಾರ ಮಳೆಯಾಗಲಿದೆ. ಮೇ 21ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಭಾನುವಾರ ಸುರಿದ ಒಂದೇ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ಮಳೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಕಂಪ್ಲೀಟ್ ಫೇಲ್ ಆಗಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿತ್ತಿದ್ದಾರೆ. ಮುಂದಿನ ದಿನ ಹೀಗೆ ಮಳೆಯಾದ್ರೆ ಬೆಂಗಳೂರಿನ ಸ್ಥಿತಿ ಏನು ಎಂದು ಜನರು ಆತಂಕಕ್ಕೀಡಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.