ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪನವರ ಪದಚ್ಯುತಿಗೆ ಹುನ್ನಾರ ನಡೀತಿದೆ ಎಂದು ನಿನ್ನೆ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ವಿಧಾನಸಭೆಯಲ್ಲಿ ತಿರುಗೇಟು ನೀಡಿದರು.
‘‘ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಮೇಲೆ ವ್ಯಾಮೋಹ ಇನ್ನೂ ಹೋಗಿಲ್ಲ. ಹಿಂದೆ, ರಾಜ್ಯದಲ್ಲಿ ಬಿಜೆಪಿ ಇಬ್ಭಾಗವಾಗಿದ್ದರಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಸಾಧ್ಯವಾಯಿತು. ಆದರೆ, ಸಿಎಂ ಆದ ನಂತರ ಸಿದ್ದರಾಮಯ್ಯ ಮಾಡಿದ್ದೇನು? ಅವರ ಅವಧಿಯಲ್ಲೇ ಗುಂಪುಗಾರಿಗೆ ಹೆಚ್ಚಾಯಿತು, ಹಾಗಾಗಿ ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ,’’ ಎಂದು ಈಶ್ವರಪ್ಪ ಕಿಚಾಯಿಸಿದರು.
‘‘ಸಿದ್ದರಾಮಯ್ಯನವರೇ, ನಿಮ್ಮ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಖುದ್ದಾಗಿ, ‘ನಮ್ಮ ನಾಯಕರೇ ನನ್ನ ಬೆಂಬಲಕ್ಕಿಲ್ಲ ಎಂದು ಗೋಳಾಡುತ್ತಿದ್ದಾರೆ, ಸಿಬಿಐ ತನಿಖೆ ಮಾಡಿಸುವಂತೆ ಅಂಗಲಾಚುತ್ತಿದ್ದಾರೆ,’ ಅವರ ಹೇಳಿಕೆಯಿಂದ ನಿಮಗೆ ನಾಚಿಕೆಯಾಗಬೇಕು. ನಿಮ್ಮಿಂದಲೇ ಧರ್ಮಗಳ ನಡುವೆ ಗಲಭೆಗಳು ಆಗುತ್ತಿರುವುದು. ಹಿಂದೂ–ಮುಸ್ಲಿಮರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ಮೊನ್ನೆ ನಡೆದಿದ್ದು ಕೋಮು ಗಲಭೆಯಲ್ಲ, ಅದು ಮತಾಂಧರ ದೊಂಬಿ,’’ ಎಂದು ಈಶ್ವರಪ್ಪ ಹೇಳಿದರು.
‘‘ಸರ್ಕಾರ ಬಿದ್ದುಹೋಗಲಿ ಎಂದು ಕುತಂತ್ರ ಮಾಡ್ತಿರೋದು ಕಾಂಗ್ರೆಸ್. ನಮ್ಮ ಸರಕಾರಕ್ಕೇನೂ ಅಪಾಯವಿಲ್ಲ ಉಳಿದಿರುವ ಅವಧಿಗೆ ಬಿಎಸ್ವೈ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಸಿದ್ದರಾಮಯ್ಯ ಹಾಗೆ ಟ್ವೀಟ್ ಮಾಡುತ್ತಿರುವುದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು,’’ ಎಂದು ಈಶ್ವರಪ್ಪ ಹೇಳಿದರು.