ಬೆಂಗಳೂರು, ಜನವರಿ 22: ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ (Bengaluru’s public toilets) ಪೈಕಿ ಹೆಚ್ಚಿನವು ಸರಕ್ಷತಾ ಕಳವಳಕ್ಕೆ ಕಾರಣವಾಗಿವೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಸಾರ್ವಜನಿಕ ಶೌಚಾಲಯಗಳಲ್ಲಿ ಸರಿಯಾದ ಚಿಲಕದ ವ್ಯವಸ್ಥೆ ಇಲ್ಲದಿರುವುದು, ಲೈಟ್ ಹಾಗೂ ಇತರ ಮೂಲಸೌಕರ್ಯ ಕೊರತೆ ಇರುವುದು ಗೊತ್ತಾಗಿದೆ. ‘Nguvu Change’ನ ಅರ್ಚನಾ ಕೆಟಿಆರ್ ಅವರು ನಡೆಸಿದ ‘ದಿ ಬಿಗ್ ಬೆಂಗಳೂರು ಟಾಯ್ಲೆಟ್ ಸರ್ವೇ’ಯಲ್ಲಿ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದುಸ್ಥಿತಿ ಬಯಲಿಗೆ ಬಂದಿದೆ.
ಸಮೀಕ್ಷೆಗೆ ಒಳಪಟ್ಟ ಸಾರ್ವಜನಿಕ ಶೌಚಾಲಯಗಳ ಪೈಕಿ ಶೇ 75ರಷ್ಟರಲ್ಲಿ ಚಿಲಕ ಇಲ್ಲದಿರುವುದು, ಸರಿಯಾದ ಬಾಗಿಲುಗಳು ಇಲ್ಲದಿರುವುದು ಕಂಡುಬಂದಿದೆ. ಪುರುಷ ಮತ್ತು ಮಹಿಳಾ ಶುಚಿತ್ವ ಸಿಬ್ಬಂದಿ ಶೌಚಾಲಯಗಳಲ್ಲೇ ವಾಸಿಸುವಂಥ ಪ್ರಕರಣಗಳೂ ಕಂಡುಬಂದಿದ್ದು, ಇವುಗಳ ವಿಡಿಯೋ ದಾಖಲೆ ಕೂಡ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಶೇ 66ರಷ್ಟು ಶೌಚಾಲಯಗಳಲ್ಲಿ ಸಮರ್ಪಕವಾದ ಲೈಟ್ ವ್ಯವಸ್ಥೆ ಇಲ್ಲ. ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಮಹಿಳೆಯರು ರಾತ್ರಿ ಬಳಸುವುದಕ್ಕಂತೂ ಯೋಗ್ಯವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಸಾರ್ವಜನಿಕ ಶೌಚಾಲಯಗಳಲ್ಲಿ ದರ ವಿಧಿಸುವಾಗಲೂ ಲಿಂಗ ತಾರತಮ್ಯ ಮಾಡಲಾಗುತ್ತಿದೆ. ಪುರುಷರಿಗೆ 2 ರೂ. ಹಾಗೂ ಮಹಿಳೆಯರಿಗೆ 5 ರೂ. ವಿಧಿಸಲಾಗುತ್ತಿದೆ. ಇದು ಸಾರ್ವಜನಿಕ ಶೌಚಾಲಯಗಳಲ್ಲಿ ತಾರತಮ್ಯಕ್ಕೆ ಸ್ಪಷ್ಟ ನಿದರ್ಶನ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ನೈರುತ್ಯ ರೈಲ್ವೆ ವಲಯದ ಟ್ರೇನ್ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: 46 ಕೋಟಿ ರೂ. ದಂಡ ಸಂಗ್ರಹ
ಸಮೀಕ್ಷೆಗೆ ಒಳಪಟ್ಟ ಶೇ 91ರಷ್ಟು ಮಹಿಳಾ ಶೌಚಾಲಯಗಳಲ್ಲಿ ಕಸದ ಬುಟ್ಟಿಗಳಿಲ್ಲ. ಇದರಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿಲೇವಾರಿ ಮಾಡಲು ಅವರಿಗೆ ಕಷ್ಟವಾಗುತ್ತಿದೆ. ಟಿಶ್ಯೂ ಪೇಪರ್ಗಳು, ಸ್ಯಾನಿಟರಿ ನ್ಯಾಪ್ಕಿನ್ಗಳು, ಪ್ಲಾಸ್ಟಿಕ್ಗಳು ಎಲ್ಲೆಂದರಲ್ಲಿ ಎಸೆದಿರುತ್ತವೆ. ಹೆಚ್ಚಿನ ಕಡೆಗಳಲ್ಲಿ ಶೌಚಾಲಯದ ಡ್ರೈನೇಜ್ ಪೈಪ್ಗಳು ಬ್ಲಾಕ್ ಆಗಿವೆ ಎಂದು ಸಮೀಕ್ಷಾ ವರದಿ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ