ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ದಿನವೇ ರಾಜ್ಯದ ಕೆಲವೆಡೆ ಮಂದಿರ ಉದ್ಘಾಟನೆ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವೇ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಕಡೆ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಬೆಂಗಳೂರಿನಲ್ಲಿಯೂ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ದಿನವೇ ರಾಜ್ಯದ ಕೆಲವೆಡೆ ಮಂದಿರ ಉದ್ಘಾಟನೆ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Jan 22, 2024 | 12:35 PM

ಬೆಂಗಳೂರು, ಜ.22: ಅಯೋಧ್ಯೆಯಲ್ಲಿ ಮರ್ಯಾದಪುರುಷ ಶ್ರೀರಾಮನ ಮಂದಿರ ಉದ್ಘಾಟನೆಗೆ ಕೆಲವೇ ಕ್ಷಣಗಳು ಬಾಕಿ ಇದ್ದು (Ayodhya Ram Mandir) ರಾಜ್ಯದೆಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ರಾಮನಾಮ ಮೊಳಗುತ್ತಿದೆ ಮತ್ತೊಂದೆಡೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವೇ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಕಡೆ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಮ ಮಂದಿರ ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ

ಇಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿಯೂ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿಯಲ್ಲಿ ಶ್ರೀರಾಮ ಟ್ರಸ್ಟ್ ವತಿಯಿಂದ ಸೀತಾ-ರಾಮ, ಲಕ್ಷ್ಮಣ, ಆಂಜನೇಯ ದೇವಾಲಯ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸೀತಾ-ರಾಮ, ಲಕ್ಷ್ಮಣ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಮಂಡ್ಯದಲ್ಲೂ ಇಂದು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮನ ಪ್ರತಿಷ್ಠಾಪನೆ

ಮಂಡ್ಯದ ಲೇಬರ್ ಕಾಲೋನಿಯಲ್ಲಿದ್ದ ರಾಮ ಮಂದಿರವನ್ನು ಜೀರ್ಣೋದ್ಧಾರ ಮಾಡಿ ಈ ಮಂದಿರದಲ್ಲಿ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ ರಾಮನ ವಿಗ್ರಹದ ಪ್ರತಿಷ್ಠಾಪನೆ ಇಂದು ನೆರವೇರಲಿದೆ.

ರಾಮನ ಮೂರ್ತಿ ಜೊತೆ ಸೀತೆ, ಲಕ್ಷ್ಮಣ ಹಾಗೂ ಹನುಮಂತನ ವಿಗ್ರಹಗಳ ಕೆತ್ತನೆ ಮಾಡಲಾಗಿದ್ದು, ಒಂದು ವರ್ಷದ ಹಿಂದೆಯೇ ಈ ಮೂರ್ತಿಗಳನ್ನ ಕೆತ್ತನೆ ಮಾಡಿಸಲಾಗಿತ್ತು. ಸದ್ಯ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಂದೇ ಮಂಡ್ಯದಲ್ಲಿಯೂ ರಾಮನ ಪ್ರತಿಷ್ಠಾಪನೆ ಮಾಡಬೇಕು ಎಂದು ದೇವಾಲಯದ ಟ್ರಸ್ಟ್ ತೀರ್ಮಾನಿಸಿತ್ತು. ಅದರಂತೆ, ಇಂದು ಅದ್ದೂರಿಯಾಗಿ ದೇಗುಲ ಲೋಕಾರ್ಪಣೆಗೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಮಮಂದಿರ ಪ್ರಾಂಗಣದಲ್ಲಿ ಮಗ ನಿಖಿಲ್​ನೊಂದಿಗೆ ಕಾಣಿಸಿದ ಹೆಚ್ ಡಿ ಕುಮಾರಸ್ವಾಮಿ

ಬಾಗಲಕೋಟೆಯಲ್ಲಿ ಪಂಚಮುಖಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಅಯೋಧ್ಯೆ ರಾಮಮಂದಿರ ಹೋರಾಟದ ಕರಸೇವಕರು ಹಾಗೂ ಬಾಗಲಕೋಟೆ ನಗರದ ರಾಮ ಭಕ್ತರು ಸೇರಿಕೊಂಡು ಬಾಗಲಕೋಟೆಯ ‌ಕೆಂಪು ರಸ್ತೆ ಬಳಿ ಹನುಮ ದೇವಸ್ಥಾನ ಕಟ್ಟಿಸಿದ್ದಾರೆ. ಅಯೋಧ್ಯೆ ರಾಮಮಂದಿರ ಮಾದರಿಯಲ್ಲೇ ಪಂಚಮುಖಿ ಹನುಮಾನ ದೇಗುಲ‌ ಸಿದ್ದವಾಗಿದೆ. ಈ ದೇಗುಲ‌‌ ಕಟ್ಟಿಸೋದಕ್ಕೆ ರಾಮಮಂದಿರವೇ ಪ್ರೇರಣೆಯಾಗಿದೆ. ಐವತ್ತು ವರ್ಷದ ಹಿಂದೆ ಮುಚಖಂಡಿ ಕ್ರಾಸ್‌ನ ಮರದ ಅಡಿಯಲ್ಲಿ ಬಾಲಹನುಮನ ಮೂರ್ತಿ ಕಂಡುಬಂದಿತ್ತು. ಆಗ ಅಲ್ಲೊಂದು ಚಿಕ್ಕ‌ದೇವಸ್ಥಾನ ಕಟ್ಟಿಸಲಾಗಿತ್ತು.

ಬಾಗಲಕೋಟೆ ಸ್ಥಳಾಂತರ ಹಿನ್ನೆಲೆ ಕೆಂಪು ರಸ್ತೆ ಬಳಿ ತಗಡಿನ ಶೆಡ್ ನಿಂದ ದೇಗುಲ ಕಟ್ಟಿಸಲಾಗಿತ್ತು. ಈಗ ಪಕ್ಕದಲ್ಲೇ ರಾಮಮಂದಿರ‌ ಮಾದರಿಯಲ್ಲಿ ಐದು‌ ಗೋಪುರದ ‌ಆಂಜನೇಯ ದೇಗುಲ ಸಿದ್ದವಾಗಿದೆ. ಇಂದು ಈ ದೇವಸ್ಥಾನದ ಉದ್ಘಾಟನೆ ಕಾರ್ಯ ನೆರವೇರಲಿದೆ.

ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆ

ಇಂದು ರಾಯಚೂರಿನ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ. ಈ ಮೂರ್ತಿ ಏಕಶಿಲಾ ವಿಗ್ರಹವಾಗಿದ್ದು, ಏಳು ಜನ ಭಕ್ತರಿದ್ದ ಟ್ರಸ್ಟ್ ನಿರ್ಮಿಸಿದೆ. ರಾಮ ಭಂಟ ಹನುಮನ 32 ಅಡಿ ವಿಗ್ರಹದ ಎದುರೇ ಪ್ರಭು ಶ್ರೀರಾಮನ 36 ಅಡಿ ಎತ್ತರದ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಈ ಹಿಂದೆ ರಾಮ, ಲಕ್ಷ್ಮಣ ವನವಾಸದ ವೇಳೆ ಆಂಧ್ರದ ಮಾದಾವರಂ ಬಳಿಯ ಅರಣ್ಯಕ್ಕೆ ಆಗಮಿಸಿದ್ದರು. ಆಗ ರಾಮ-ಲಕ್ಷ್ಮಣ ಬಂಡೆ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದರು. ಅದೇ ಬಂಡೆಯ ಕಲ್ಲನ್ನ(ಶಿಲೆ) ರಾಯರ ಮೂಲ ಬೃಂದಾವನಕ್ಕೆ ಬಳಕೆ ಮಾಡಲಾಗಿದೆ. ಹೀಗಾಗಿ ನಿತ್ಯ ರಾಯರಿಗೂ ಮೊದಲು‌ ಮಂತ್ರಾಲಯದಲ್ಲಿ ಮೂಲ ರಾಮ ದೇವರ ಪೂಜೆ ನೆರವೇರತ್ತೆ. ಹಾಗಾಗಿ ಮಂತ್ರಾಲಯದಲ್ಲಿ ಅಭಯ ಶ್ರೀರಾಮನ ಸ್ಥಾಪನೆಗೆ ಶ್ರೀ ಸುಬುಧೇಂದ್ರ ತೀರ್ಥರ ಸಲಹೆ ನೀಡಿದ್ದು ಇಂದು ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ