
ಬೆಂಗಳೂರು, ಆ.24: ಸೆಪ್ಟೆಂಬರ್ 2ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್(Sunil Kumar) ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಕಳೆದ ಬಾರಿ 1 ಕೋಟಿ 5 ಲಕ್ಷ ಸದಸ್ಯತ್ವ ಮಾಡಲಾಗಿತ್ತು. ಇನ್ನು ಸೆಪ್ಟೆಂಬರ್ 25ರ ವರೆಗೂ ಮೊದಲ ಹಂತದಲ್ಲಿ ಹಾಗೂ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 25 ರವರೆಗೆ ಎರಡನೇ ಹಂತದ ಅಭಿಯಾನ ನಡೆಯಲಿದೆ. ಬೂತ್, ಜಿಲ್ಲಾ ಮಟ್ಟ ಮತ್ತು ವಿಧಾನಸಭಾ ಕ್ಷೇತ್ರವಾರು ಮಟ್ಟದಲ್ಲಿ ಕೂಡಾ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಮಿಸ್ಡ್ ಕಾಲ್ ಮೂಲಕ ಕೂಡ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಕಾಂಗ್ರೆಸ್ ಚುನಾವಣಾ ಹೊಂದಾಣಿಕೆ ಮಾಡಿದೆ. ಎನ್ಸಿ ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ಮರು ಜಾರಿ ಮಾಡುವುದಾಗಿ ಹೇಳಿಕೊಂಡಿದೆ. ಈಗ 370ನೇ ವಿಧಿ ಬಗ್ಗೆ ಕಾಂಗ್ರೆಸ್ ನಿಲುವೇನು?. ಈ ಬಗ್ಗೆ ರಾಹುಲ್ ಗಾಂಧಿ ದೇಶದ ಜನತೆಗೆ ಉತ್ತರ ಕೊಡಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇದ್ಯಾ?, ಸೈನಿಕರ ಮೇಲಿನ ಕಲ್ಲು ತೂರಾಟವನ್ನು ಕಾಂಗ್ರೆಸ್ ಸಮರ್ಥಿಸಕೊಳ್ಳುತ್ತಾ?. ಯಾವ ವಿಚಾರಧಾರೆಯಿಂದ ನೀವು ನ್ಯಾಷನಲ್ ಕಾನ್ಫರೆನ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ: ಬಿಜೆಪಿ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಹದಗೆಟ್ಟಿದೆ. ಕಾರ್ಕಳದಲ್ಲಿ ಡ್ರಗ್ಸ್ ಕೊಟ್ಟು ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಯುವಕರ ಕೈಗೆ ಡ್ರಗ್ಸ್, ಅಮಲು ಪದಾರ್ಥಗಳು ಹೇಗೆ ತಲುಪಿದವು?. ಹುಬ್ಬಳ್ಳಿ ಘಟನೆ ಆದಾಗ ಲವ್ ಜಿಹಾದ್ ಅಂದಾಗ ಸಿಎಂ ಆದಿಯಾಗಿ ಎಲ್ಲರೂ ಅಲ್ಲಗಳೆದಿದ್ದರು. ಇಲ್ಲಿ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಯಾವ ಶಕ್ತಿಯ ಕೈವಾಡ ಇದೆ. ಸಂತ್ರಸ್ಥೆಗೆ ಸರ್ಕಾರ ಹೆಚ್ಚಿನ ಚಿಕಿತ್ಸೆ ಕೊಡಬೇಕು, ಕುಟುಂಬಕ್ಕೆ ಭದ್ರತೆ ಕೊಡಬೇಕು. ರಾಜ್ಯದ ಜನರಿಗೆ ಧೈರ್ಯದ ಜೊತೆಗೆ ಕ್ರಿಮಿನಲ್ಗಳಿಗೆ ಎಚ್ಚರಿಕೆಯನ್ನೂ ಸರ್ಕಾರ ಕೊಡಬೇಕಿತ್ತು. ಸಿಎಂಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವುದೇ ಆದ್ಯತೆಯಾಗಿದೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ