ಸಿ ವರ್ಗದ ದೇಗುಲಗಳ ತಸ್ತಿಕ್ ಮೊತ್ತ 60 ಸಾವಿರ ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ
48 ಸಾವಿರ ರೂಪಾಯಿಯಿಂದ 60 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಹೆಚ್ಚಳ ಆದೇಶ ಅನ್ವಯವಾಗಲಿದೆ. ಮುಜರಾಯಿ ಇಲಾಖೆಯ ಸಿ ವರ್ಗದ ದೇಗುಲಗಳ ತಸ್ತಿಕ್ ಹಣ ಪ್ರಸಕ್ತ ವರ್ಷದಿಂದ ಹೆಚ್ಚಿಸಿ ಆದೇಶ ನೀಡಲಾಗಿದೆ.
ಬೆಂಗಳೂರು: ತಸ್ತಿಕ್ ಮೊತ್ತ 60 ಸಾವಿರ ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಸಿ ವರ್ಗದ ದೇಗುಲಗಳಲ್ಲಿ ಪ್ರಸ್ತುತ ತಸ್ತಿಕ್ ಮೊತ್ತ 48 ಸಾವಿರ ಇತ್ತು. 48 ಸಾವಿರ ರೂಪಾಯಿಯಿಂದ 60 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಹೆಚ್ಚಳ ಆದೇಶ ಅನ್ವಯವಾಗಲಿದೆ. ಮುಜರಾಯಿ ಇಲಾಖೆಯ ಸಿ ವರ್ಗದ ದೇಗುಲಗಳ ತಸ್ತಿಕ್ ಹಣ ಪ್ರಸಕ್ತ ವರ್ಷದಿಂದ ಹೆಚ್ಚಿಸಿ ಆದೇಶ ನೀಡಲಾಗಿದೆ. ಅಷ್ಟೇ ಅಲ್ಲದೆ, ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ “ಉಚಿತ ಸಾಮೂಹಿಕ ವಿವಾಹ – ಸಪ್ತಪದಿ” ಕಾರ್ಯಕ್ರಮವನ್ನು ಮರುಚಾಲನೆಗೊಳಿಸಲು ಆದೇಶ ಹೊರಡಿಸಲಾಗಿದೆ.
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಉಚಿತ “ಸಪ್ತಪದಿ ಸಾಮೂಹಿಕ ವಿವಾಹ” ಯೋಜನೆಯನ್ನು ಪ್ರಾರಂಭಿಸಿತ್ತು. ವಧು ಮತ್ತು ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜೊತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡುವುದು ಈ ಯೋಜನೆಯ ವಿಶೇಷವಾಗಿದೆ.
ಕೊವಿಡ್ 19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲು ಆಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ, ಮತ್ತೆ ಸಾಮೂಹಿಕ ವಿವಾಹವನ್ನು ಪ್ರಾರಂಭಿಸುವಂತೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅ. ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಏಪ್ರಿಲ್ ಮತ್ತು ಮೇ, 2022 ರ ಆಯ್ದ ಎ ದರ್ಜೆಯ ದೇವಸ್ಥಾನಗಳಲ್ಲಿ, ಕೊವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ – ಸಪ್ತಪದಿ ನಡೆಸಲು ಅದೇಶಿಸಲಾಗಿದೆ.
ಕರ್ನಾಟಕ ಸಪ್ತಪದಿ ವಿವಾಹ ಯೋಜನೆಗೆ ಅರ್ಹತೆಯ ಮಾನದಂಡಗಳು ಈ ರೀತಿ ಇದೆ:
- ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ಮತ್ತು ಕಾನೂನುಬದ್ಧ ನಿವಾಸಿಗಳಾಗಿರಬೇಕು
- ಆಯ್ದ ದೇವಸ್ಥಾನಗಳಲ್ಲಿ ಮಾತ್ರ ಮದುವೆ ನಡೆಯಲಿದೆ
- ವಧು ಮತ್ತು ವರನ ಪೋಷಕರು ಇಬ್ಬರೂ ಸಮಾರಂಭದಲ್ಲಿ ಹಾಜರಿದ್ದರೆ ಮಾತ್ರ ಮದುವೆ ನಡೆಯುತ್ತದೆ
- ಪ್ರೇಮ ವಿವಾಹ ಮಾಡಿಕೊಳ್ಳುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ
- ವಧುವಿನ ವಯಸ್ಸು 18 ವರ್ಷ ಅಥವಾ ಮೇಲ್ಪಟ್ಟಿರಬೇಕು
ಸಪ್ತಪದಿ ವಿವಾಹ ಯೋಜನೆ 2022 ನೋಂದಣಿ ಹೇಗೆ?
ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಸಿಎಂ ಆಗಿದ್ದಾಗ ಮೊದಲು ಸಪ್ತಪದಿ ವಿವಾಹ ಯೋಜನೆಯನ್ನು 10 ಜನವರಿ 2020 ರಂದು ಪ್ರಾರಂಭಿಸಿದ್ದರು. ಈ ಯೋಜನೆಯಡಿ ಮದುವೆಯಾಗಬಯಸುವವರು ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ಕ್ಕೆ ದೇವಸ್ಥಾನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್ಲಾ ಜೋಡಿಗಳು ಮದುವೆಯ ನಿಗದಿತ ದಿನಾಂಕಕ್ಕಿಂತ 30 ದಿನಗಳ ಮೊದಲು ದೇವಸ್ಥಾನದಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್ಲಾ ಅರ್ಹ ದಂಪತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಯ್ಕೆಯಾದ ಜೋಡಿ ಮಾತ್ರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಬಹುದು.
ಇದನ್ನೂ ಓದಿ: ಕಠಿಣ ಕಾನೂನು ಪಾಲನೆಗೆ ಮುಂದಾದ ಮುಜರಾಯಿ ಇಲಾಖೆ: ದೇಗುಲ ಮಳಿಗೆಗಳಲ್ಲಿ ಮುಸ್ಲಿಮರಿಗಿಲ್ಲ ಅವಕಾಶ
ಇದನ್ನೂ ಓದಿ: ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಾ? ಆಕಾಶಗಂಗೆಯಲ್ಲಾ? ಗೊಂದಲ ಇತ್ಯರ್ಥಕ್ಕೆ ದಾಖಲೆ ಸಮೇತ ಸಭೆ ಕರೆದ ಮುಜರಾಯಿ ಇಲಾಖೆ