ನಮ್ಮ ಮೆಟ್ರೋ ಪಿಂಕ್ ಲೈನ್ ಕಾಮಗಾರಿ: ಮತ್ತೊಂದು ಸುರಂಗ ಕೊರೆದು ಹೊರ ಬಂದ ಟಿಬಿಎಂ ತುಂಗಾ
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಕಾರ, ಒಟ್ಟು 20,992 ಮೀಟರ್ ಸುರಂಗ ಕಾಮಗಾರಿಯ ಪೈಕಿ 18832.30 ಮೀಟರ್ ಪೂರ್ಣಗೊಂಡಿದೆ. ಸುರಂಗ ಕಾಮಗಾರಿಗೆ ನಿಯೋಜಿಸಲಾದ ಒಂಬತ್ತು ಟಿಬಿಎಂಗಳ ಪೈಕಿ ಏಳು ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಿವೆ.
ಬೆಂಗಳೂರು, ಡಿಸೆಂಬರ್ 6: ನಗರದ ನಮ್ಮ ಮೆಟ್ರೊ (Namma Metro) ರೈಲು ಕಾಮಗಾರಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಸುರಂಗ ಕೊರೆಯುವ ಯಂತ್ರ (TBM) ತುಂಗಾ ತನ್ನ ಎರಡನೇ ಕಾರ್ಯಾಚರಣೆ ಮುಗಿಸಿ ಕಾಡುಗೊಂಡನಹಳ್ಳಿ (KG Halli) ನಿಲ್ದಾಣದಲ್ಲಿ ಹೊರಬಂದಿದೆ. ಈ ಸಾಧನೆಯೊಂದಿಗೆ 89.70 ರಷ್ಟು ಸುರಂಗ ಕಾಮಗಾರಿ ಬುಧವಾರ ಪೂರ್ಣಗೊಂಡಿದೆ. ಕೆಜಿ ಹಳ್ಳಿ ನಿಲ್ದಾಣದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ ಟಿಬಿಎಂ ತುಂಗಾ ಎರಡನೇ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸುತ್ತಿದ್ದಂತೆ ಸಂಭ್ರಮಾಚರಣೆ ಮಾಡಿದರು.
ಟಿಬಿಎಂ ತುಂಗಾ ತನ್ನ ಕಾರ್ಯಾಚರಣೆಯನ್ನು 2022 ರ ಅಕ್ಟೋಬರ್ 31 ರಂದು ವೆಂಕಟೇಶಪುರ ನಿಲ್ದಾಣದಿಂದ ಪ್ರಾರಂಭಿಸಿತ್ತು. ಡಿಸೆಂಬರ್ 6 ರ ಬುಧವಾರ 1,184.4 ಮೀಟರ್ ಸುರಂಗ ಕೊರೆಯುವ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಎಂಜಿ ರಸ್ತೆ ಮತ್ತು ಟ್ಯಾನರಿ ರಸ್ತೆ ಮೂಲಕ ಹಾದುಹೋಗುವ ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ 21.26 ಕಿಮೀ ಪಿಂಕ್ ಲೈನ್ ಮಾರ್ಗದ 24 ಸುರಂಗ ನಿರ್ಮಾಣ ಕಾರ್ಯಗಳ ಪೈಕಿ ಇದು 21 ನೇಯದ್ದಾಗಿದೆ.
ಟಿಬಿಎಂ ತುಂಗಾ ಎರಡನೇ ಕಾರ್ಯಾಚರಣೆ
2021 ರ ಜುಲೈ 31ರಂದು ಸುರಂಗ ನಿರ್ಮಾಣ ಕಾರ್ಯಕ್ಕಾಗಿ ಜರ್ಮನ್ ನಿರ್ಮಿತ ಹೆರೆಂಕ್ನೆಕ್ಟ್ ಯಂತ್ರವನ್ನು ಬೆಂಗಳೂರಿನಲ್ಲಿ ಮೊದಲು ನಿಯೋಜಿಸಲಾಯಿತು. ಇದು ವೆಂಕಟೇಶಪುರ ನಿಲ್ದಾಣ ಮತ್ತು ಟ್ಯಾನರಿ ರಸ್ತೆ ನಡುವಿನ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ಸುಮಾರು 13 ತಿಂಗಳುಗಳನ್ನು ತೆಗೆದುಕೊಂಡಿತು.
ವೆಂಕಟೇಶಪುರ ನಿಲ್ದಾಣ ಮತ್ತು ಕೆಜಿ ಹಳ್ಳಿ ನಿಲ್ದಾಣದ ನಡುವಿನ ಸುರಂಗ ಕಾಮಗಾರಿ ಪೂರ್ಣಗೊಂಡಿದ್ದು, ಶೇ 89.70ರಷ್ಟು ಸುರಂಗ ಕಾಮಗಾರಿ ಪೂರ್ಣಗೊಂಡಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಕಾರ, ಒಟ್ಟು 20,992 ಮೀಟರ್ ಸುರಂಗ ಕಾಮಗಾರಿಯ ಪೈಕಿ 18832.30 ಮೀಟರ್ ಪೂರ್ಣಗೊಂಡಿದೆ. ಸುರಂಗ ಕಾಮಗಾರಿಗೆ ನಿಯೋಜಿಸಲಾದ ಒಂಬತ್ತು ಟಿಬಿಎಂಗಳ ಪೈಕಿ ಏಳು ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ
ಪಿಂಕ್ ಲೈನ್ ಬೆಂಗಳೂರಿನ ಮೆಟ್ರೋದಲ್ಲಿ 13.92 ಕಿಮೀ ಮತ್ತು 6.98 ಕಿಮೀ ಎತ್ತರದ ವಿಭಾಗಗಳೊಂದಿಗೆ ಉದ್ದವಾದ ಸುರಂಗ ಮಾರ್ಗ ವಿಭಾಗಗಳಲ್ಲಿ ಒಂದಾಗಿದೆ. ಪಿಂಕ್ ಲೈನ್‌ನಲ್ಲಿ 18 ನಿಲ್ದಾಣಗಳಿವೆ ಅವುಗಳಲ್ಲಿ 12 ಭೂಗತ ಮತ್ತು ಆರು ಸಾಮಾನ್ಯ ನಿಲ್ದಾಣಗಳಾಗಿವೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಟಿಬಿಎಂ ರುದ್ರ ಲಕ್ಕಸಂದ್ರದಿಂದ ಲ್ಯಾಂಗ್‌ಫೋರ್ಡ್ ಟೌನ್ ನಡುವೆ 718 ಮೀಟರ್‌ನ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ