
ಬೆಂಗಳೂರು, ಜನವರಿ 17: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಮತ್ತೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಕಳೆದ ಫೆಬ್ರವರಿ 9ರಂದು ಬಿಎಂಆರ್ಸಿಎಲ್ (BMRCL) ಅಧಿಕಾರಿಗಳು ಶೇ 105.5 ರಷ್ಟು ಒನ್ ಟು ಡಬಲ್ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದರವನ್ನು ಶೇ 71.5 ಕ್ಕೆ ಇಳಿಸಲಾಗಿತ್ತು. ಈ ಗೊಂದಲದ ನಡುವೆಯೇ ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಅಣಿಯಾಗಿದ್ದು, ಇದನ್ನು ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ.
ಪ್ರತಿವರ್ಷ ಫೆಬ್ರವರಿಯಲ್ಲಿ 5% ಸ್ವಯಂಚಾಲಿತ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋಗೆ ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು ಹಾಗೂ ಅಧಿಕಾರಿಗಳ ತಪ್ಪು ಲೆಕ್ಕ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ಗೆ ಕಳುಹಿಸಲಾಗಿದೆ.
ಇದನ್ನೂ ಓದಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್ನಲ್ಲಿ ಇಂದಿನಿಂದ 7ನೇ ರೈಲು ಸಂಚಾರ
ಇತ್ತ, ಸೇವ್ ಬೆಂಗಳೂರು ಕಮಿಟಿ ಹಾಗೂ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಬಿಎಂಆರ್ಸಿಎಲ್ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಮುಂದಿನ ತಿಂಗಳಿಂದ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದೆ. ಪದೇಪದೇ ದರ ಏರಿಕೆ ಪ್ರಯಾಣಿಕರ ಮೇಲೆ ಭಾರೀ ಹೊರೆ ಆಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 am, Sat, 17 January 26