ಬೆಂಗಳೂರು: ನಗರ ಅಪರಾಧ ವಿಭಾಗ (City Crime Branch) ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರ ವಿಚಾರಣೆ ವೇಳೆ ಹಲವು ಆಘಾತಕಾರಿ ಮಾಹಿತಿ ಪತ್ತೆಯಾಗಿದೆ. ಅಲ್ಖೈದಾ (Al Aaeda) ಉಗ್ರಗಾಮಿ ಸಂಘಟನೆಗೆ ಸೇರಲು ಇವರಿಬ್ಬರು ಏಕೆ ಮುಂದಾಗಿದ್ದರು ಎನ್ನುವ ಬಗ್ಗೆ ಪೊಲೀಸರು ಇದೀಗ ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆ ವೇಳೆ ಬೆಳಕಿಗೆ ಬಂದ ಮೂರು ಮುಖ್ಯ ಅಂಶಗಳು ಹುಬ್ಬೇರುವಂತೆ ಮಾಡಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ಸರ್ಕಾರ ತೆಗೆದುಹಾಕಿದೆ. ಈ ಮೂಲಕ ಕಾಶ್ಮೀರಕ್ಕೆ ಇದ್ದ ಸವಲತ್ತು ಕಿತ್ತುಕೊಳ್ಳಲಾಗಿದೆ. ನಮ್ಮಿಂದ ಕಾಶ್ಮೀರವನ್ನು ಕಿತ್ತುಕೊಂಡವರ ವಿರುದ್ಧ ನಾವು ಹೋರಾಡಲೇಬೇಕು ಎನ್ನುವ ನಿಲುವಿಗೆ ಇವರು ಬಂದಿದ್ದರು.
ವಿಚಾರಣೆ ವೇಳೆ ಬೆಳಕಿಗೆ ಬಂದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ 2047ಕ್ಕೆ ವಿಶ್ವದಾದ್ಯಂತ ಮುಸ್ಲಿಂ ರಾಷ್ಟ್ರಗಳೇ ಇರಬೇಕು, ಮುಸ್ಲಿಂ ಕಾನೂನು ಎಲ್ಲೆಡೆ ಮಾನ್ಯವಾಗಬೇಕು ಎನ್ನುವ ಅಭಿಪ್ರಾಯಕ್ಕೂ ಇವರು ಬಂದಿದ್ದರು. ಈ ಆಶಯ ಈಡೇರಿಸಿಕೊಳ್ಳಲು ಹೋರಾಟ ಮಾಡಬೇಕು ಎಂದುಕೊಂಡಿದ್ದ ಅವರು ಶಸ್ತ್ರ ಕೈಗೆತ್ತಿಕೊಳ್ಳಲು ಮುಂದಾಗಿದ್ದರು.
ಇದನ್ನೂ ಓದಿ: ಶಂಕಿತ ಉಗ್ರರ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿ ಪತ್ತೆ: ಮೊಬೈಲ್ ಡೇಟಾ ಡಿಕೋಡ್ ಮಾಡಲು ಪೊಲೀಸರ ಯತ್ನ
ಭಾರತದಲ್ಲಿ ಇಸ್ಲಾಂ ಧರ್ಮವು ಸಂಕಷ್ಟದಲ್ಲಿದೆ. ಇಸ್ಲಾಂ ಧರ್ಮವನ್ನು ಉಳಿಸಿಕೊಳ್ಳಲು ಹೋರಾಡಲೇಬೇಕಿದೆ. ಪವಿತ್ರ ಕುರಾನ್ ತೋರಿಸಿರುವ ಮಾರ್ಗದ ಪ್ರಕಾರವೇ ಜಿಹಾದ್ಗಾಗಿ ತಯಾರಾಗಬೇಕಿದೆ ಎಂದು ಶಂಕಿತರು ಅಭಿಪ್ರಾಯ ಹೊಂದಿದ್ದರು ಎಂದು ಹೇಳಲಾಗಿದೆ. ಹಲವು ಟೆಲಿಗ್ರಾಮ್ ಗ್ರೂಪ್ಗಳನ್ನು ಶಂಕಿತ ಉಗ್ರ ಆಖ್ತರ್ ಹುಸೇನ್ ನಿರ್ವಹಿಸುತ್ತಿದ್ದ. ಆದರೆ ಈ ಪೈಕಿ ಬಹಳಷ್ಟು ಗ್ರೂಪ್ಗಳು ಡಿಲೀಟ್ ಆಗಿದ್ದು, ಅವುಗಳಲ್ಲಿ ಹರಿದಾಡಿರಬಹುದಾದ ಸಂದೇಶಗಳನ್ನು ಪತ್ತೆ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ.
Published On - 1:14 pm, Wed, 27 July 22