ಶಂಕಿತ ಉಗ್ರರ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿ ಪತ್ತೆ: ಮೊಬೈಲ್ ಡೇಟಾ ಡಿಕೋಡ್ ಮಾಡಲು ಪೊಲೀಸರ ಯತ್ನ
ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ನ ದಾಖಲೆಯಲ್ಲಿ ಜಿಹಾದ್ ಬಗ್ಗೆ ವಿವರ, ಕೊಲ್ಲುವುದು, ಷರಿಯಾ ಕಾನೂನಿನ ವಿವರಗಳು ಇವೆ. ಈ ಕುರಾನ್ಗೆ ಅನುಗುಣವಾಗಿಯೇ ನಾವು ಬದುಕಬೇಕು ಎಂದೆಲ್ಲಾ ಅದರಲ್ಲಿ ವಿವರಗಳಿದ್ದವು.
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡ ಶಂಕಿತ ಉಗ್ರ ಅಖ್ತರ್ ಮತ್ತು ಅವನ ಸಹಚರನ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿಗಳು ಪತ್ತೆಯಾಗಿವೆ ಪೊಲೀಸರು ತಿಳಿಸಿದ್ದಾರೆ. ಇವು ಅಲ್ಖೈದಾ ಉಗ್ರಗಾಮಿ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುವ ವ್ಯಕ್ತಿ ಕಳಿಸಿದ್ದ ದಾಖಲೆಗಳು ಎಂದು ಪೊಲೀಸರು ಹೇಳಿದ್ದಾರೆ. ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ನ ದಾಖಲೆಯಲ್ಲಿ ಜಿಹಾದ್ ಬಗ್ಗೆ ವಿವರ, ಕೊಲ್ಲುವುದು, ಷರಿಯಾ ಕಾನೂನಿನ ವಿವರಗಳು ಇವೆ. ಈ ಕುರಾನ್ಗೆ ಅನುಗುಣವಾಗಿಯೇ ನಾವು ಬದುಕಬೇಕು ಎಂದೆಲ್ಲಾ ಅದರಲ್ಲಿ ವಿವರಗಳಿದ್ದವು.
ಸೇಲಂನಲ್ಲಿ ಸೆರೆಸಿಕ್ಕ ಜುಬಾ ಮತ್ತು ತಿಲಕ್ ನಗರದಲ್ಲಿ ಸೆರೆ ಸಿಕ್ಕ ಆಖ್ತರ್ ಇಬ್ಬರನ್ನು ನೇಮಿಸಿಕೊಂಡಿದ್ದವ ಒಬ್ಬನೇ ವ್ಯಕ್ತಿ. ಅಖ್ತರ್ ಮಾದರಿಯಲ್ಲೆ ಜುಬಾ ಸಹಿತ ಅಲ್ ಖೈದಾ ಗೆ ನೇಮಕಾತಿ ಅಗಿದ್ದ. ಫೇಸ್ಬುಕ್, ಟ್ವಿಟ್ಟರ್, ಟೆಲಿಗ್ರಾಮ್, ವಾಟ್ಸ್ಯಾಪ್ ಮತ್ತು ಸ್ನಾಪ್ಚಾಟ್ ಮೂಲಕ ಸಂಪರ್ಕ ಬೆಳೆಸಿಕೊಂಡಿದ್ದ. ನಂತರದ ದಿನಗಳಲ್ಲಿ ಜುಬಾ ಜೊತೆ ಸಂಪೂರ್ಣ ಸಂಪರ್ಕ ಎರ್ಪಟ್ಟಿತ್ತು. ಜುಬಾ ತಾನು ಅಲ್ಖೈದಾ ಸೇರಲು ಸಿದ್ದನಿದ್ದೇನೆ ಎಂದಿದ್ದಾನೆ. ಜಿಹಾದ್ಗಾಗಿ ಅಲ್ಖೈದಾಗೆ ಸೇರಲು ಆತ ಸಿದ್ಧನಾಗಿದ್ದ. ಇಬ್ಬರಿಗೂ ಬಕ್ರೀದ್ ಬಳಿಕ ಕಾಶ್ಮೀರಕ್ಕೆ ಬರಲು ತಿಳಿಸಿಲಾಗಿತ್ತು. ಮುಂದಿನ ಹದಿನೈದು ದಿನದ ಒಳಗೆ ಕಾಶ್ಮೀರಕ್ಕೆ ಹೊರಡಲು ಅವರು ಸಿದ್ಧವಾಗಿದ್ದರು.
ಅಲ್ಖೈದಾ ಉಗ್ರಗಾಮಿ ಸಂಘಟನೆಗೆ ಸೇರಲೆಂದು ಇಬ್ಬರು ಶಂಕಿತರು ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧರಾಗಿದ್ದರು. ಕಾಶ್ಮೀರಕ್ಕೆ ಸೇರಿಕೊಂಡ ಬಳಿಕ ಅಲ್ಲಿಂದ ಪಾಕ್ ಆಕ್ರಮಿತ ಕಾಶ್ಮೀರದ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಕರೆಸಿಕೊಳ್ಳಲು ಉಗ್ರರನ್ನು ನೇಮಿಸಿಕೊಳ್ಳುವ ವ್ಯಕ್ತಿಗಳು ಸಂಚು ರೂಪಿಸಿದ್ದರು. ಆದರೆ ಇದೀಗ ಪೊಲೀಸರ ವಶದಲ್ಲಿರುವವರಿಗೆ ಕಾಶ್ಮೀರದಿಂದ ಎತ್ತಕಡೆ ತೆರಳಬೇಕು ಎಂಬ ಮಾಹಿತಿ ನೀಡಿರಲಿಲ್ಲ. ಒಮ್ಮೆ ಕಾಶ್ಮೀರ ತಲುಪಿದ ನಂತರ ಅಲ್ಲಿಂದ ಮುಂದೆ ಯಾವ ಸ್ಥಳಕ್ಕೆ ತಲುಪಬೇಕು ಎಂದು ತಿಳಿಸಲಾಗುವುದು ಎಂದಷ್ಟೇ ಅವರಿಗೆ ಉಗ್ರರ ನೇಮಕಾತಿ ಮಾಡಿಕೊಳ್ಳುವವರು ವಿವರಿಸಿದ್ದರು.
ಇಬ್ಬರೂ ಶಂಕಿತರನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕಾತಿಯ ನಂತರ ಇಬ್ಬರನ್ನೂ ಮಾತನಾಡಲು ತಿಳಿಸಲಾಗಿತ್ತು. ಅದರಂತೆ ಕೆಲ ದಿನಗಳ ಹಿಂದೆ ಒಮ್ಮೆ ಫೋನ್ ಮೂಲಕ ಅವರು ಮಾತನಾಡಿಕೊಂಡಿದ್ದರು. ಹೊರಡುವ ದಿನ ಮತ್ತೊಮ್ಮೆ ಮಾತನಾಡಿಕೊಳ್ಳುವ ಹಂಚಿಕೆಯಿತ್ತು. ಈ ನಡುವಣ ಅವಧಿಯಲ್ಲಿ ಅವರು ಫೋನ್ ಕಾಲ್ ಅಥವಾ ಮೆಸೇಜ್ ಮೂಲಕ ಸಂಪರ್ಕ ಹೊಂದುವಂತಿಲ್ಲ ಎಂದು ಹೇಳಲಾಗಿತ್ತು.
ಶಂಕಿತ ಅಖ್ತರ್ ಮೊಬೈಲ್ನಿಂದ ಹೋಗಿದ್ದ ಒಂದು ಕರೆಯ ಮೇಲೆ ಸಿಸಿಬಿ ಪೊಲೀಸರಿಗೆ ಅನುಮಾನ ಬಂದು ಹೆಚ್ಚಿನ ತನಿಖೆ ನಡೆಸಲಾಯಿತು. ತನಿಖೆ ವೇಳೆ ಇಬ್ಬರು ಅಲ್ಖೈದಾ ಬಗ್ಗೆ ಮಾತನಾಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.
ಶಂಕಿತರ ಬಳಿ ಎರಡು ಮೊಬೈಲ್ಗಳು ಪತ್ತೆಯಾಗಿದ್ದವು. ಒಂದು ಮೊಬೈಲ್ ಅನ್ನು ಕುಟುಂಬ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಬಳಸಲು ಮೀಸಲಿಟ್ಟಿದ್ದರು. ಮತ್ತೊಂದು ಮೊಬೈಲ್ ಅನ್ನು ಮೊಬೈಲ್ ಸೋಷಿಯಲ್ ಮೀಡಿಯಾ ಮತ್ತು ಉಗ್ರವಾದಕ್ಕೆ ಬಳಕೆ ಮಾಡುತ್ತಿದ್ದರು. ಉಗ್ರವಾದಿಗಳನ್ನು ಸಂಪರ್ಕಿಸಲು ಬಳಸುತ್ತಿದ್ದ ಮೊಬೈಲ್ನಿಂದ ಬೇರೆ ಯಾರಿಗೂ ಕರೆ ಮಾಡುತ್ತಿರಲಿಲ್ಲ. ಈ ನಂಬರ್ ಅನ್ನು ಸ್ಥಳೀಯವಾಗಿಯೂ ಯಾರಿಗೂ ಕೊಟ್ಟಿರಲಿಲ್ಲ. ಅಖ್ತರ್ನ ಸ್ವಂತ ಅಣ್ಣ ಮತ್ತು ಅವನದೇ ಕೊಠಡಿಯಲ್ಲಿದ್ದ ಇತರ ಮೂವರಿಗೂ ಅಖ್ತರ್ನ ಇನ್ನೊಂದು ಮುಖದ ಪರಿಚಯ ಇರಲಿಲ್ಲ. ಇದೀಗ ಪೊಲೀಸರು ಅಖ್ತರ್ ಅಣ್ಣನನ್ನು ವಿಚಾರಣೆಗೆ ಕರೆಸಿದ್ದಾರೆ.
ಮೊಬೈಲ್ನಲ್ಲಿದ್ದ ಹಲವು ದಾಖಲೆಗಳನ್ನು ಡಿಲೀಟ್ ಮಾಡಿದ್ದ ಅಖ್ತರ್ ಫೇಸ್ಬುಕ್ ಅಕೌಂಟ್ ಅನ್ನೂ ಡೀಅಕ್ಟಿವೇಟ್ ಮಾಡಿದ್ದ. ಸದ್ಯ ವೈಜ್ಞಾನಿಕವಾಗಿ ಸೈಬರ್ ಎಕ್ಸ್ಪರ್ಟ್ಗಳ ಮೂಲಕ ಎಲ್ಲ ದತ್ತಾಂಶವನ್ನು ಹೊರ ತೆಗೆಯಲು ಯತ್ನಿಸಲಾಗುತ್ತಿದೆ. ಶಂಕಿತರ ಉಗ್ರರನ್ನು ಮುಂದಿನ ದಿನಗಳಲ್ಲಿ ಅಲ್ಖೈದಾ ಉಗ್ರಗಾಮಿ ಸಂಘಟನೆಗೆ ನೇಮಕ ಮಾಡಲು ಹಲವು ಪ್ರಯತ್ನಗಳ ನಡೆದಿದ್ದವು ಎಂದು ಪೊಲೀಸರು ಅವರ ಮೊಬೈಲ್ನಿಂದ ಸಂಗ್ರಹಿಸಿದ ದಾಖಲೆಗಳನ್ನು ಆಧರಿಸಿ ಆರೋಪ ಮಾಡಿದ್ದಾರೆ.
ಜಿಹಾದ್ಗಾಗಿ ಪ್ರಾಣ ಕೊಡಬೇಕು, ಜಗತ್ತಿನಲ್ಲಿ ಷರಿಯತ್ ಕಾನೂನು ಜಾರಿಯಾಗಲು ಹೋರಾಡಬೇಕು ಎಂದೆಲ್ಲಾ ಅವರಿಗೆ ಸಂದೇಶಗಳನ್ನು ಕಳಿಸಿ ಮನವೊಲಿಸಲು ಯತ್ನಿಸಲಾಗಿತ್ತು.
Published On - 2:57 pm, Tue, 26 July 22