ಪಠ್ಯ ಪುಸ್ತಕ ಪರಿಷ್ಕರಣೆ: ಕುವೆಂಪು ಪಾಠ ಕೈಬಿಟ್ಟಿಲ್ಲ- ಬರಗೂರು ರಾಮಚಂದ್ರಪ್ಪ, ಕಾಂಗ್ರೆಸ್ಗೆ ಕನ್ನಡದ ಸಮಸ್ಯೆ- ಬಿಸಿ ನಾಗೇಶ್
ಪ್ರಾಥಮಿಕ ಶಿಕ್ಷಣದಲ್ಲಿ ಯಾವಾಗಲೂ ಪ್ರಜಾಪ್ರಭುತ್ವ ಪರ ವಿಚಾರಗಳು ಇರಬೇಕು. ಅದು ಎಂದಿಗೂ ಕೇಸರೀಕರಣ ಆಗಬಾರದು ಎಂದು ಬಿಜೆಪಿ ನಾಯಕ ಎಚ್.ವಿಶ್ವನಾಥ್ ಹೇಳಿದರು.
ಬೆಂಗಳೂರು: ಕರ್ನಾಟಕದ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಬರಹ ಸೇರ್ಪಡೆ ಕುರಿತ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಪ್ರಸ್ತುತ ಬಿಜೆಪಿಯಲ್ಲೇ ಇರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಪಠ್ಯ ಪರಿಷ್ಕರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಠ್ಯ ಪರಿಷ್ಕರಣ ಸಮಿತಿ ರಚನೆಗೆ ಇಷ್ಟೇಕೆ ಆತುರ ತೋರಬೇಕಿತ್ತು? ಪಠ್ಯ ಪರಿಷ್ಕರಣೆಯನ್ನು ರಾಜಕೀಯವಾಗಿ ಮಾಡಬಾರದು. ಪಠ್ಯ ಪರಿಷ್ಕರಣ ಸಮಿತಿಯನ್ನು ಸರಿಯಾದ ರೀತಿಯಲ್ಲಿ ರೂಪಿಸಲಿಲ್ಲ. ಇದು ರಾಜಕೀಯ ಪಕ್ಷದ ಪ್ರಣಾಳಿಕೆ ರೀತಿ ಆಗುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಯಾವಾಗಲೂ ಪ್ರಜಾಪ್ರಭುತ್ವ ಪರ ವಿಚಾರಗಳು ಇರಬೇಕು. ಅದು ಎಂದಿಗೂ ಕೇಸರೀಕರಣ ಆಗಬಾರದು. ಈಗ ಶಿಕ್ಷಣ ಸಂಪೂರ್ಣ ಕೇಸರಿಕರಣವಾಗಿದೆ ಎಂದು ವಿಷಾದಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಚಾರದ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು. ಒಂದರಿಂದ ಹತ್ತನೇ ತರಗತಿವರೆಗಿನ ಪುಸ್ತಕಗಳನ್ನು ಗಂಭೀರವಾಗಿ ರೂಪಿಸಬೇಕು. ಸಮಿತಿಯಲ್ಲಿರುವವರ ಪೈಕಿ ಯಾರು ತಾನೆ ಈ ತರಗತಿಗಳಿಗೆ ಪಾಠ ಮಾಡಿದ್ದಾರೆ? ಚಕ್ರತೀರ್ಥನಿಗೆ ಶಾಲಾ ಶಿಕ್ಷಣದ ಬಗ್ಗೆ ಏನು ಗೊತ್ತು? ಐಐಟಿ ಪ್ರೊಫೆಸರ್ ಒಬ್ಬರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ಪ್ರಾಥಮಿಕ ಶಿಕ್ಷಣದ ಬಗ್ಗೆ ಏನು ಗೊತ್ತಿದೆ? ಈಗಿರುವ ಪರಿಷ್ಕರಣ ಸಮಿತಿಯನ್ನು ರದ್ದುಪಡಿಸಬೇಕು. ಸಮಿತಿಯಲ್ಲಿ ಶಿಕ್ಷಣ ತಜ್ಞರು, ಪೋಷಕರು, ಶಿಕ್ಷಕರು ಹೀಗೆ ಅನುಭವಿಗಳು ಇರಬೇಕು. ಶಿಕ್ಷಣ ಮತ್ತು ಸಂಸ್ಕೃತಿ ಹಾಳಾಗುವ ನಾಡಿಗೆ ಎಂದಿಗೂ ಉಳಿಗಾಲ ಇರುವುದಿಲ್ಲ. ಇದು ರಾಜಕೀಯ ಪಕ್ಷವೊಂದರ ಪ್ರಣಾಳಿಕೆಯಂತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ಪಾಠ ಕೈಬಿಟ್ಟಿಲ್ಲ: ಬರಗೂರು ರಾಮಚಂದ್ರಪ್ಪ
ಪಠ್ಯಪುಸ್ತಕ ಪರಿಷ್ಕರಣೆ ಕುರಿತು ನಡೆಯುತ್ತಿರುವ ವಾದ-ವಿವಾದಗಳಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪಠ್ಯ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷರಾದ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ್, ಕೆಂಪೇಗೌಡ, ಮದಕರಿ ನಾಯಕರಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ.
ಕುವೆಂಪು ಪಠ್ಯವನ್ನು ನಾವು ಕೈಬಿಟ್ಟಿದ್ದೇವೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಇದು ಅಪ್ಪಟ ಸುಳ್ಳು. ಕುವೆಂಪು ಪಾಠ ಕೈಬಿಟ್ಟು ಕನ್ನಡ ಪಠ್ಯ ರಚಿಸಲು ಸಾಧ್ಯವೇ? 10ನೇ ತರಗತಿ, 7ನೇ ತರಗತಿಯಲ್ಲಿ ಕುವೆಂಪು ಪಾಠ ಇದೆ. 7ನೇ ತರಗತಿ ಸಮಾಜ ವಿಜ್ಞಾನದ ಭಾಗ 2ರಲ್ಲಿ ಮಹಾತ್ಮ ಗಾಂಧಿ ಪಾಠ ಇದೆ. ಸಾವರ್ಕರ್ ಕುರಿತಂತೆ ಯಾವುದೇ ಅಂಶಗಳನ್ನು ನಾವು ಸೇರಿಸಿಲ್ಲ. ಪ್ರೌಢಶಾಲೆಯವರೆಗೂ ಸಕಾರಾತ್ಮಕ ಅಂಶಗಳನ್ನು ಕೊಡಬೇಕು. ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಪರ-ವಿರೋಧ ಚರ್ಚೆ, ವಾಗ್ವಾದ ಕುರಿತಂತೆ ಅಧ್ಯಯನ ಮಾಡಬೇಕು. ಈ ವಿವಾದ ಅಂತ್ಯ ಮಾಡುವತ್ತ ಶಿಕ್ಷಣ ಸಚಿವರು ಗಮನಹರಿಸಲಿ. ಶೈಕ್ಷಣಿಕ ಕ್ಷೇತ್ರ ಕಲುಷಿತವಾಗದಿರಲಿ ಎಂದು ಅವರು ಸಲಹೆ ಮಾಡಿದರು.
ಅಂಬೇಡ್ಕರ್ ಕುರಿತಂತೆ 8ನೇ ತರಗತಿ ಭಾಗ 1ರಲ್ಲಿ ಪಾಠ ಇದೆ. ಹತ್ತನೇ ತರಗತಿಯ ಭಾಗ 2ರಲ್ಲಿ ಪಾಠ ಇದೆ. 9ನೇ ತರಗತಿಯ ಪಠ್ಯದಲ್ಲೂ ಸಂವಿಧಾನ ರಚನೆಯ ಬಗ್ಗೆ ಅಂಬೇಡ್ಕರ್ ಪೋಟೋ ಹಾಕಿ ವಿವರ ನೀಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕುರಿತಂತೆ ಆರನೇ ತರಗತಿ ಭಾಗ 2ರಲ್ಲಿ , ಹತ್ತನೇ ತರಗತಿ ಭಾಗ 1ರಲ್ಲಿ ಮಾಹಿತಿ ಇದೆ. 5ನೇ ತರಗತಿಯಲ್ಲಿ ಪ್ರತೇಕ ಪಾಠ ಇದೆ. ಮದಕರಿ ನಾಯಕರ ಬಗ್ಗೆ ನಾಡಪ್ರಭು, ಪಾಳೇಗಾರರ ಬಗ್ಗೆ ಪ್ರತೇಕ ಪಾಠ ಬರೆಸಿದ್ದೇವೆ. ಅದರಲ್ಲಿ ಮದಕರಿ ನಾಯಕರ ಬಗ್ಗೆ ಪಾಠ ಇದೆ. ಅದರ ಜೊತೆಗೆ ಸುರಪುರ ನಾಯಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ಮಾಹಿತಿ ಇದೆ ಎಂದು ವಿವರಿಸಿದರು. ರಾಣಿ ಅಬ್ಬಕ್ಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನದ ಭಾಗ 2 ರಲ್ಲಿ ಅನೇಕ ವಿವರ ಕೊಟ್ಟಿದ್ದೇವೆ. ಯಲಹಂಕ ಪ್ರಭುಗಳ ಬಗ್ಗೆ 7ನೇ ತರಗತಿ ಭಾಗ 1 ರಲ್ಲಿ ಪ್ರತೇಕ ಪಾಠ ನೀಡಲಾಗಿದೆ.
ಸಚಿವರು ತಪ್ಪು ಮಾಹಿತಿ ನೀಡಬಾರದು. ನನ್ನ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಮೈಸೂರು ಒಡೆಯರ್ ಬಗ್ಗೆ ಪಠ್ಯಗಳಲ್ಲಿ ಕಡಿಮೆ ಮಾಹಿತಿ ಇದೆ ಎಂದಾದರೆ ಕಡಿಮೆ ಇದ್ದರೆ, ಪರಿಷ್ಕರಣೆ ಮೂಲಕ ಹೆಚ್ಚಿಸಬಹುದಿತ್ತಲ್ಲವೇ ಎಂದು ಶಿಕ್ಷಣ ಸಚಿವರನ್ನು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು. ವಾಸ್ತವದಲ್ಲಿ ಸಮಾಜ ವಿಜ್ಞಾನದ ಭಾಗ 1ರಲ್ಲಿ ಮೈಸೂರು ಒಡೆಯರ್ ಎಂಬ ಪ್ರತೇಕ ಅಧ್ಯಾಯವನ್ನೇ ಬರೆಯಲಾಗಿದೆ. ಇದರಲ್ಲಿ ಮೈಸೂರು ಒಡೆಯರ್ ಬಗ್ಗೆ ಎಲ್ಲ ವಿವರ ಕೊಡಲಾಗಿದೆ. ಮೈಸೂರು ಯುದ್ದಗಳ ಬಗ್ಗೆ ಪ್ರಸ್ತಾಪ ಮಾಡುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಬಗ್ಗೆ ವಿವರ ಕೊಡಲಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಕನ್ನಡಕದಲ್ಲಿ ಹಾಗೆಯೇ ಕಾಣುತ್ತೆ: ಬಿಸಿ ನಾಗೇಶ್
ಮೈಸೂರು: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಕೇಸರೀಕರಣದ ಅರೋಪ ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಾಂಗ್ರೆಸ್ ಕನ್ನಡಕದಲ್ಲಿ ನೋಡಿದರೆ ಹಾಗೆಯೇ ಕಾಣುತ್ತದೆ. ನನ್ನ ಕನ್ನಡಕದಲ್ಲಿ ಕಮ್ಯುನಿಸ್ಟ್ ಅಥವಾ ಬೇರೆ ಯಾವುದೇ ಬಣ್ಣ ಕಾಣುತ್ತಿಲ್ಲ. ಟಿಪ್ಪು ಸುಲ್ತಾನ್ ಪುಸ್ತಕ ತಂದರು ನಮಗೆ ಬಣ್ಣ ಕಾಣಲಿಲ್ಲ. ನಮಗೆ ಮಕ್ಕಳು ಮಾತ್ರ ಕಾಣಿಸುತ್ತಾರೆ. ಕಾಂಗ್ರೆಸ್ ನಾಯಕರಿಗೆ ಜೀವನದುದ್ದಕ್ಕೂ ಬಣ್ಣವೇ ಕಾಣಿಸುತ್ತಿರುತ್ತದೆ. ಹಸಿರು ಬಣ್ಣದವರು ಮತ ಹಾಕುವುದಿಲ್ಲ ಎಂಬ ಹೆದರಿಕೆ ಅವರದು. ಯಾವ ಕಾಂಗ್ರೆಸ್ ಪಕ್ಷದವರು ಪಠ್ಯ ಪುಸ್ತಕಗಳನ್ನೇ ಓದಿಲ್ಲ. ಇದಕ್ಕೆ ಸಾಕ್ಷಿ ಅವರು ಮಾಡಿರುವ ಟ್ವೀಟ್‌ಗಳು ಎಂದು ನಾಗೇಶ್ ಹೇಳಿದ್ದಾರೆ.
ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾಡಗೀತೆಗೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿದೆ. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಒಂದು ವೇಳೆ ರೋಹಿತ್ ಚಕ್ರತೀರ್ಥ ತಪ್ಪು ಮಾಡಿದ್ದರು ಎಂದಾದರೆ ಅವರನ್ನು ಜೈಲಿಗೆ ಹಾಕಬೇಕಿತ್ತು. ಆಗ ಹೊರಗೆ ಬಿಟ್ಟು, ಈಗ ಆರೋಪ ಮಾಡಲು ಸಿದ್ದರಾಮಯ್ಯ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ದೇಶದ ಧ್ವಜದ ಬಗ್ಗೆ ಇದ್ದ ಪಾಠವನ್ನು ಇವರು ತೆಗೆದುಹಾಕಿದರು. ಬಾವುಟ ಏರುವುದನ್ನು ಇವರು ಏಕೆ ಸಹಿಸುವುದಿಲ್ಲ? ನಾವು ಯಾವೊಬ್ಬ ವ್ಯಕ್ತಿಗೂ ಪಠ್ಯ ಪರಿಷ್ಕರಣೆಯ ಅಧಿಕಾರ ಕೊಟ್ಟಿಲ್ಲ. ಮತ್ತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಪ್ರಶ್ನೆಯೇ ಇಲ್ಲ. ಪುಸ್ತಕಗಳು ಈಗಾಗಲೇ ಮುದ್ರಣವಾಗಿವೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಕುರಿತು ಪಾಠ ಇರುವ 4ನೇ ತರಗತಿ ಪರಿಸರ ವಿಜ್ಞಾನ ಪರಿಷ್ಕರಣೆ ಆಗಿಲ್ಲ. ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ. ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು ಎಂದು ಟಾಂಗ್ ಕೊಟ್ಟರು.
ರಾಷ್ಟ್ರಕವಿ ಕುವೆಂಪು ಅವರ ಕುರಿತು ಪಾಠ ಇರುವ 4ನೇ ತರಗತಿ ‘ಪರಿಸರ ಅಧ್ಯಯನ’ ಪುಸ್ತಕದ ಪರಿಷ್ಕರಣೆ ಆಗಿಲ್ಲ.
ರಾಜ್ಯ @BJP4Karnataka ಸರ್ಕಾರದ ಜನಪರ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ.
ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು ! pic.twitter.com/8oXgofvbda
— B.C Nagesh (@BCNagesh_bjp) May 24, 2022