ಇನ್ಮುಂದೆ ದಾಖಲಾಗುವ ಕೇಸ್​ಗಳಿಗೆ ಹೊಸ ಕಾನೂನು ಅನ್ವಯ ಆಗಲಿದೆ -ಗೃಹಸಚಿವ ಡಾ.ಪರಮೇಶ್ವರ್

| Updated By: ಆಯೇಷಾ ಬಾನು

Updated on: Jul 01, 2024 | 11:35 AM

Dr G Parameshwar: ದೇಶಾದ್ಯಂತ ಜುಲೈ 1 ರಿಂದ ಬ್ರಿಟಿಷರು ಜಾರಿ ತಂದಿದ್ದ ಐಪಿಸಿ, ಸಿಆರ್ಪಿಸಿ, ಎವೆಡೆನ್ಸ್ ಕಾಯ್ದೆಗಳು ಬದಲಾಗಲಿವೆ. ಜುಲೈ 1 ರಿಂದ ಜಾರಿಗೊಳ್ಳಲಿದೆ ಮೂರು ಹೊಸ ಕಾನೂನುಗಳ ಬಗ್ಗೆ ಗೃಹಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ಮುಂದೆ ದಾಖಲಾಗುವ ಕೇಸ್​ಗಳಿಗೆ ಹೊಸ ಕಾನೂನು ಅನ್ವಯ ಆಗಲಿದೆ -ಗೃಹಸಚಿವ ಡಾ.ಪರಮೇಶ್ವರ್
ಜಿ ಪರಮೇಶ್ವರ
Follow us on

ಬೆಂಗಳೂರು, ಜುಲೈ.01: ದೇಶಾದ್ಯಂತ ಕಾಲಮಿತಿಯೊಳಗೆ ತನಿಖೆ ಮತ್ತು ತ್ವರಿತ ನ್ಯಾಯ ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಶಾಸನಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಪ್ರಾಥಮಿಕ ಪುರಾವೆಗಳಾಗಿಸುವಲ್ಲಿ ಪ್ರಮುಖ ಬದಲಾವಣೆ ಐಪಿಸಿ, ಸಿಆರ್ ಪಿಸಿ, ಎವಿಡೆನ್ಸ್ ಆಕ್ಟ್ ಗಳು ಜುಲೈ 1 ರಿಂದ ದೇಶದಲ್ಲಿ ಜಾರಿ ಆಗಿವೆ. ಇಂದಿನಿಂದ 3 ಹೊಸ ಅಪರಾಧ ಕಾನೂನುಗಳು ಜಾರಿ ವಿಚಾರಕ್ಕೆ ಸಂಬಂಧಿಸಿ ಗೃಹಸಚಿವ ಡಾ.ಪರಮೇಶ್ವರ್​ (Dr G Parameshwar) ಪ್ರತಿಕ್ರಿಯೆ ನೀಡಿದ್ದು ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ಮಾಡಿದ್ದೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಡಾ.ಪರಮೇಶ್ವರ್, ಇಂದಿನಿಂದ ಮೂರು ಹೊಸ ಕಾನೂನುಗಳು ಜಾರಿಯಾಗಿವೆ. ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ಮಾಡಿದ್ದೇವೆ. ಇನ್ಮುಂದೆ ದಾಖಲಾಗುವ ಕೇಸ್​ಗಳಿಗೆ ಅನ್ವಯ ಆಗಲಿದೆ. ಇದರ ಪರಿಣಾಮ ಏನು ಅಂತ ಈಗಲೇ ಹೇಳಲು ಆಗಲ್ಲ. ಸ್ವಲ್ಪ ದಿನಗಳ ನಂತರ ಇದರ ಸಕ್ಸಸ್ ಬಗ್ಗೆ ಗೊತ್ತಾಗುತ್ತೆ. ಇವತ್ತಿನಿಂದ ಆಚೆಗೆ ಯಾವೆಲ್ಲ ಕೇಸ್​ಗಳು ಬರುತ್ತವೋ ಅವು ಹೊಸ ಕಾನೂನುಗಳಡಿ ದಾಖಲಾಗುತ್ತವೆ. ನಾವು ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ.

ಕಾನ್ಸ್‌ಟೇಬಲ್​ನಿಂದ ಹಿಡಿದು ಎಲ್ಲರಿಗೂ ತರಬೇತಿ ನೀಡಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಹ ಸಿದ್ಧಪಡಿಸಲಾಗಿದೆ. ಇಡೀ ದೇಶದಲ್ಲಿ ಮೂರು ಕಾನೂನುಗಳು ಜಾರಿಯಾಗಿವೆ. ಫೀಡ್ ಬ್ಯಾಕ್ ನೋಡಿಕೊಂಡು ಪರಿಷ್ಕರಣೆ ಮಾಡಬಹುದು ಎಂದು ಬೆಂಗಳೂರಿನಲ್ಲಿ ಗೃಹಸಚಿವ ಡಾ.ಪರಮೇಶ್ವರ್​ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ: ಆರೋಗ್ಯ ಸಮೀಕ್ಷೆಯಲ್ಲಿ ಕಂಡುಬಂತು ಆಘಾತಕಾರಿ ಅಂಶ

ಇನ್ನು ಇದೇ ವೇಳೆ ವರ್ಷದಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಸಚಿವ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಬೊಮ್ಮಾಯಿ ಒಂದು ಮಾತನಾಡಿದರೆ, ಸಿ.ಟಿ.ರವಿ ಮತ್ತೊಂದು ರೀತಿ ಮಾತಾಡ್ತಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ. ನಮಗೆ ಹೇಲ್ತಾರ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅವರು ನಮ್ಮ ಮೇಲೆ ಗೂಬೆ ಕೂರಿಸಬೇಕು. ಹಾಗಾಗಿ ನಮ್ಮ ಬಗ್ಗೆ ಮಾತಾಡ್ತಿರ್ತಾರೆ. ನಾವು ಜನಗಳಿಗೆ ಮಾತು ಕೊಟ್ಟಿದ್ದೇವೆ. ನಾವು ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ ಎಂದರು.

ವಾಲ್ಮೀಕಿ ನಿಗಮ ಹಗರಣ ಕೇಸ್​ ಸಂಬಂಧ ಮಾತನಾಡಿದ ಪರಮೇಶ್ವರ್, ವಾಲ್ಮೀಕಿ ಹಗರಣ ಕೇಸ್ ಅನ್ನು ಸಿಬಿಐ ಅಧಿಕಾರಿಗಳು ಕೂಡ ತನಿಖೆ ನಡೆಸುತ್ತಿದ್ದಾರೆ. ಹಾಗೂ ಎಸ್​ಐಟಿ ಕೂಡ ತನಿಖೆ ಮಾಡ್ತಿದ್ದಾರೆ. ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಲ್ಲುವುದಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗುತ್ತೆ. ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಯಾರೇ ಇದ್ದರೂ ಶಿಕ್ಷೆ ಆಗುತ್ತೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:34 am, Mon, 1 July 24