AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರದ್ದಾದ ಕಾಮಗಾರಿಗಳಿಗೂ ಬಿಲ್ ಮೊತ್ತ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ!

ಬಿಬಿಎಂಪಿಯ ಹೊಸ ನಡೆಯೊಂದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪಾಲಿಕೆಯ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಅದೇನೆಂದರೆ, ಈಗಾಗಲೇ ರದ್ದಾಗಿರುವ ಕಾಮಗಾರಿಗಳ ಬಿಲ್ ಮೊತ್ತ ಬಿಡುಗಡೆ ಮಾಡುವುದು! ಈ ಬಗ್ಗೆ ಬಿಬಿಎಂಪಿ ಆಯುಕ್ತರು ಹೇಳುವುದೇನು? ಪರಿಣಾಮ ಏನಾಗಲಿದೆ? ವಿವರ ಇಲ್ಲಿದೆ.

ರದ್ದಾದ ಕಾಮಗಾರಿಗಳಿಗೂ ಬಿಲ್ ಮೊತ್ತ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ!
ಬಿಬಿಎಂಪಿ
ಗಣಪತಿ ಶರ್ಮಾ
|

Updated on: Jul 01, 2024 | 9:47 AM

Share

ಬೆಂಗಳೂರು, ಜುಲೈ 1: ಎರಡು ವರ್ಷಗಳ ಹಿಂದೆ ರದ್ದುಪಡಿಸಿದ್ದ ಕಾಮಗಾರಿಗಳಿಗೆ ಸಂಬಂಧಿಸಿದ 97.68 ಕೋಟಿ ರೂ.ಗಳ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡಲು ಬೆಂಗಳೂರು ನಗರ ಪಾಲಿಕೆ ನಿರ್ಧರಿಸಿದ್ದು, ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ರದ್ದಾದ ಕಾಮಗಾರಿಗಳಿಗೆ ಈಗ ಹೊಸದಾಗಿ ಅವಕಾಶ ನೀಡಿ ಬಿಲ್ ಬಿಡುಗಡೆ ಮಾಡಿದ್ದೇ ಆದಲ್ಲಿ ಇತರ ಗುತ್ತಿಗೆದಾರರಿಂದ ಕೂಡ ಇದೇ ರೀತಿಯ ವಿನಂತಿಗಳು ಬರುವ ಸಾಧ್ಯತೆ ಇದ್ದು, ಬಿಬಿಎಂಪಿಗೆ ನಷ್ಟವಾಗಲಿದೆ ಎಂದು ವರದಿಯಾಗಿದೆ.

ಬಿಬಿಎಂಪಿಯು ಆರ್ಥಿಕ ಶಿಸ್ತು ತರುವುದಕ್ಕಾಗಿ ಸುಮಾರು 45,781 ಕಾಮಗಾರಿಗಳನ್ನು ಹಿಂತೆಗೆದುಕೊಂಡಿತ್ತು. ಈ ಕಾಮಗಾರಿಗಳು ಒಟ್ಟು 7,931 ಕೋಟಿ ರೂಪಾಯಿ ಮೊತ್ತದ್ದಾಗಿವೆ. ಇವುಗಳನ್ನು ‘ಅನಗತ್ಯ’ ಅಥವಾ ‘ಅನಿವಾರ್ಯವಲ್ಲದ’ ಕೆಲಸಗಳು ಎಂದು ಬಿಬಿಎಂಪಿ ವಿಂಗಡಿಸಿತ್ತು. ಚರಂಡಿಗಳ ಹೂಳು ತೆಗೆಯುವುದು, ಭೂಮಿ ಅಭಿವೃದ್ಧಿ, ರಸ್ತೆಗಳ ಸುಧಾರಣೆ, ಹೂಳು ಮತ್ತು ಟ್ರ್ಯಾಕ್ಟರ್ ಒದಗಿಸುವುದು, ಶಾಲಾ ದುರಸ್ತಿ, ಕಟ್ಟಡಗಳ ನಿರ್ಮಾಣ, ಬೋರ್‌ವೆಲ್ ಕೊರೆಯುವುದು ಮತ್ತು ಎಲ್‌ಇಡಿ ಬೀದಿ ದೀಪಗಳನ್ನು ಒದಗಿಸುವುದು ಇತ್ಯಾದಿ ಕಾಮಗಾರಿಗಳು ಈ ಪಟ್ಟಿಯಲ್ಲಿದ್ದವು.

ಈ ಯೋಜನೆಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹರಡಿದ್ದು, 2016-17 ಮತ್ತು 2020-21 ರ ನಡುವೆ ಬಜೆಟ್​​​ಗಳಲ್ಲಿ ಉಲ್ಲೇಖಿಸಿರುವವು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಆದಾಗ್ಯೂ, ಬಿಬಿಎಂಪಿ 2022 ರ ಡಿಸೆಂಬರ್​​ನಲ್ಲಿ ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿತ್ತು. ಏಕೆಂದರೆ ಅವುಗಳು ಬಹಳ ಸಮಯವಾದರೂ ಜಾರಿಗೆ ಬಂದಿರಲಿಲ್ಲ. ಆದರೆ, ಇದೀಗ ಕಾಮಗಾರಿಗೆ ಅವಕಾಶ ನೀಡಿ ಬಿಲ್ ಬಿಡುಗಡೆ ಮಾಡಲು ಮುಂದಾಗಿದೆ.

ಬಿಬಿಎಂಪಿ ಆಯುಕ್ತರು ಹೇಳುವುದೇನು?

ರದ್ದಾದ ಕಾಮಗಾರಿಗಳಿಗೆ ಮತ್ತೆ ಅವಕಾಶ ನೀಡಿ ಬಿಲ್‌ ಮೊತ್ತ ಬಿಡುಗಡೆ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇದಕ್ಕೆ ಎಂಜಿನಿಯರ್‌ಗಳು ಮತ್ತು ಕೇಂದ್ರ ಕಚೇರಿಯ ನಡುವಿನ ಸಂವಹನ ಸಮಸ್ಯೆಯೇ ಕಾರಣ ಎಂದು ಹೇಳಿದ್ದಾರೆ. ಗುತ್ತಿಗೆದಾರರು ಕೆಲಸವನ್ನು ನಿರ್ವಹಿಸುವ ಬಗ್ಗೆ ಸೂಕ್ತ ಪುರಾವೆಗಳನ್ನು ಒದಗಿಸಿದ ನಂತರವೇ ನಾವು ಅವರಿಗೆ ಅವಕಾಶಗಳನ್ನು ನೀಡಿದ್ದೇವೆ. ಅಂತಹ ಅನೇಕ ಮನವಿಗಳು ಈಗಲೂ ಬರುತ್ತಿವೆ. ಆದರೆ, ಇನ್ನೂ ಆರಂಭವಾಗದ ಕಾಮಗಾರಿಗಳಿಗೆ ಅವಕಾಶ ಕೊಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಗ್ಯೂ ಲಕ್ಷಣ ಪತ್ತೆ; ಬೆಂಗಳೂರಿನಲ್ಲಿ 2457 ಪ್ರಕರಣ

ಅಕ್ರಮಕ್ಕೆ ದಾರಿ

ಬಿಬಿಎಂಪಿಯ ಈ ಕ್ರಮದಿಂದ ಹೆಚ್ಚೆಚ್ಚು ಗುತ್ತಿಗೆದಾರರು ತಾವು ಕಾಮಗಾರಿ ನಡೆಸಿದ್ದೇವೆ ಎಂದು ಹೇಳಿಕೊಂಡು ಮುಂದೆ ಬರುವ ಸಾಧ್ಯತೆ ಇದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಿದಂತಾಗಲಿದೆ. ಇದರ ಹೆಚ್ಚುವರಿ ಆರ್ಥಿಕ ಹೊರೆ ಅಂತಿಮವಾಗಿ ಹೊಸ ಕಾಮಗಾರಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಬಿಬಿಎಂಪಿ ನಿವೃತ್ತ ಎಂಜಿನಿಯರ್ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಮತ್ತೊಬ್ಬ ಹಿರಿಯ ಅಧಿಕಾರಿ ಕೂಡ ಬಿಬಿಎಂಪಿಯ ನಿರ್ಧಾರಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More