ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿ ಬಳಿ ಲಕ್ಷ್ಮೀಶ್ ಎಂಬುವವರ ಕಾರ್ ಗ್ಲಾಸ್ (Car Glass) ಒಡೆದು ಕಳ್ಳರು ಸುಮಾರು 4.5 ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ (CC Camera) ಸೆರೆಯಾಗಿದೆ. ಲಕ್ಷ್ಮೀಶ್ ಮನೆ ಸಾಲದ ಇಎಂಐ ಕಟ್ಟಲು ಬ್ಯಾಂಕ್ನಿಂದ ಹಣ ತಂದಿದ್ದರು. ಈ ವೇಳೆ ಕಳ್ಳರು ಬ್ಯಾಂಕ್ನಿಂದ 2 ಬೈಕ್ಗಳಲ್ಲಿ ಫಾಲೋ ಮಾಡಿದ್ದಾರೆ. ಸ್ನೇಹಿತನ ಭೇಟಿಗೆ ಬಂದಾಗ ಕಾರಿನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸದ್ಯ ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಆರೋಪಿಗಳ ಬಂಧನ:
ತುಮಕೂರು: ಮನೆ ಕಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿಎಸ್ ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸಿಗೇಹಳ್ಳಿ ಗ್ರಾಮಸ ಗಿರೀಶ್ (35), ಚಿನ್ನಾಯಕನಪಾಳ್ಯ ಗ್ರಾಮದ ಗೋವಿಂದರಾಜು (28) ಬಂಧಿತರು. ಇಬ್ಬರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮನೆಗಳನ್ನ ಟಾರ್ಗೆಟ್ ಮಾಡಿ ಚಿನ್ನಾಭರಣ ನಗದು ದೋಚಿ ಪರಾರಿಯಾಗುತ್ತಿದ್ದರು. ಬಂಧಿತರಿಂದ ಒಂದು ಲಕ್ಷ ರೂ. ನಗದು ಸೇರಿದಂತೆ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ವ್ಯಕ್ತಿಯ ಶವ ಪತ್ತೆ:
ಕಲಬುರಗಿ: ಕಡಣಿ ಬಳಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಟ್ರ್ಯಾಕ್ಟರ್ನಲ್ಲಿದ್ದ ಇಬ್ಬರು ನಿನ್ನೆ ರಾತ್ರಿ ಕೊಚ್ಚಿ ಹೋಗಿದ್ದರು. ಇಬ್ಬರ ಪೈಕಿ ಚಾಲಕ ಮುಳ್ಳು ಕಂಟಿ ಹಿಡಿದು ಬಚಾವ್ ಆಗಿದ್ದರು. 1 ಕಿ.ಮೀ. ದೂರದಲ್ಲಿ ಇನ್ನೊರ್ವ ವ್ಯಕ್ತಿಯ ಶವ ಪತ್ತೆಯಾಗಿದೆ.
ಬಾಂಗ್ಲಾದೇಶದ ನಾಲ್ವರು ಪ್ರಜೆಗಳು ಪತ್ತೆ:
ಚಿಕ್ಕಮಗಳೂರಿನಲ್ಲಿ ಬಾಂಗ್ಲಾದೇಶದ ನಾಲ್ವರು ಪ್ರಜೆಗಳು ಪತ್ತೆಯಾಗಿದ್ದು, 3 ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದ ನಾಲ್ವರನ್ನ ಬಂಧಿಸಲಾಗಿದೆ. ಅಬ್ದುಲ್, ರಹುಲ್, ಮೋಮಿನ್ ಅಲಿ, ಸಲೀಂ ಬಂಧಿತರು. ಎನ್.ಆರ್.ಪುರ ತಾಲೂಕಿನ ಸಿಂಸೆಬೋವಿ ಕಾಲೋನಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಪ್ರಜೆಗಳು ದಾಖಲೆಗಳಿಂದ ಬಾಂಗ್ಲಾದೇಶದವರು ಎನ್ನುವುದು ಖಚಿತವಾಗಿದೆ.
ಇದನ್ನೂ ಓದಿ: Monkeypox: ಮಕ್ಕಳಿಗೂ ವಕ್ಕರಿಸಿದ ಮಂಕಿಪಾಕ್ಸ್; ಯುಎಸ್ನಲ್ಲಿ ಅಂಬೆಗಾಲಿಡುವ ಮಗುವಿನಲ್ಲಿ ಮಂಕಿಪಾಕ್ಸ್ ಪತ್ತೆ
Published On - 9:24 am, Sat, 23 July 22