
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ(Bengaluru Rains) ಆರ್ಭಟಕ್ಕೆ ಹಲವು ಏರಿಯಾಗಳು ಜಲಾವೃತಗೊಂಡಿದ್ದವು. ಕೋಟ್ಯಾಂತರ ಬೆಲೆ ಬಾಳುವ ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿದ್ದವು. ಜನ ಜೀವನವೇ ಅಸ್ತವ್ಯಸ್ತವಾಗಿತ್ತು. ಇದಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂದು ಬಿಜೆಪಿ ನಾಯಕರು ಹಾಗೂ ಮತ್ತೊಂದು ಕಡೆ ರಾಜ್ಯ ಸರ್ಕಾರ ಮಳೆ ಹಾನಿ ನಿಯಂತ್ರಿಸುವುದರಲ್ಲಿ ಎಡವಿದೆ ಎಂದು ಕಾಂಗ್ರೆಸ್ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದ್ರೆ ಜನರ ಸಮಸ್ಯೆಗೆ ಮಾತ್ರ ಯಾವುದೇ ಪರಿಹಾರ ಸಿಕ್ಕಿಲ್ಲ. ಇದರ ನಡುವೆ ಸಚಿವ ಆರಗ ಜ್ಞಾನೇಂದ್ರ(Araga Jnanendra) ಮಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.
ಭಾರಿ ಮಳೆಯಿಂದ ಬೆಂಗಳೂರಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಜನರ ರಕ್ಷಣೆಗಾಗಿ ಸಿಬ್ಬಂದಿ ಹಗಲುರಾತ್ರಿ ಕೆಲಸ ಮಾಡುತ್ತಿದ್ದಾರೆ. 518 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ 70 ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೀತಿದೆ. ಕಾಡುಗೋಡಿಯಲ್ಲಿ ಜೋಪಡಿಯಲ್ಲಿದ್ದವರನ್ನು ರಕ್ಷಿಸಲಾಗಿದೆ. ಬೋಟ್ ಮೂಲಕ ಒಂದೇ ದಿನ 1,011 ಸಂತ್ರಸ್ತರ ರಕ್ಷಣೆ ಮಾಡಲಾಗಿದೆ ಎಂದು ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಮಳೆ ಹಾನಿ ಪರಿಶೀಲನೆ ವೇಳೆ ತಿಳಿಸಿದರು.
ಯಮಲೂರು ಇಪ್ಸಿಲಾನ್ ಬಡಾವಣೆಯಲ್ಲಿ ನೀರು ತುಂಬಿದೆ. ನೀರನ್ನು ಹೊರಗಡೆ ತಗೆಯುವ ಕಾರ್ಯಚರಣೆ ನಡೆಯುತ್ತಿದೆ. ಜನರು ಕಷ್ಟದಲ್ಲಿದ್ದಾಗ ಯಾರೂ ರಾಜಕೀಯ ಮಾಡಬಾರದು. ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ಕೊಡಬೇಕು. 4 ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಆಡಳಿತ ನಡೆಸಿದ್ದರು. ಇವೆಲ್ಲಾ 4 ವರ್ಷದ ಬಳಿಕ ನಿರ್ಮಾಣವಾಗಿರುವ ಕಟ್ಟಡಗಳಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಿರ್ಮಾಣ ಮಾಡಲಾಗಿದೆ. ಸರ್ಕಾರ ರಾಜಕಾಲುವೆ ಒತ್ತುವರಿ ತೆರವು ಕೆಲಸ ಮಾಡುತ್ತಿದೆ. ಸಿಎಂ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದರು.
ಹಗಲು-ರಾತ್ರಿ ನಮ್ಮ ಇಲಾಖೆ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ
ಬೆಂಗಳೂರಿನಲ್ಲಿ ಮಳೆ ಬಂದಾಗ ಇಂತಹ ಸಮಸ್ಯೆ ಆಗುತ್ತೆ. ದಾಖಲೆಯ ಮಳೆಯಿಂದಾಗಿ ಇಂತಹ ಸ್ಥಿತಿ ನಿರ್ಮಾಣ ಆಗಿದೆ. ರೈನ್ ಬೋ ಲೇಔಟ್ ನಲ್ಲಿ ಕೆರೆ ತುಂಬಿ ಹೀಗೆ ಅನಾಹುತ ಆಗಿದೆ. ಮಳೆಯಿಂದಾಗಿ ಸುಮಾರು 20% ಸಿಟಿಯಲ್ಲಿ ಮಾತ್ರ ಹೀಗೆ ಆಗಿದೆ. ಈ ಮಳೆ ನಮ್ಮ ಕಣ್ಣು ತೆರೆಸಿದೆ. ಸಿಎಂ ಕೂಡಾ ಶಾಶ್ವತ ಪರಿಹಾರ ಮಾಡೋ ವ್ಯವಸ್ಥೆ ಮಾಡ್ತಿದ್ದಾರೆ. ಶಾಶ್ವತ ಪರಿಹಾರ ಕೊಡುವ ಕೆಲಸ ಮಾಡ್ತೀವಿ. ಬಿಬಿಎಂಪಿ ಅಧಿಕಾರಿಗಳ ಸಮನ್ವಯದಲ್ಲಿ ಕೆಲಸ ಮಾಡುವ ಕೆಲಸ ಮಾಡ್ತೀವಿ.
ಬೆಂಗಳೂರಿನ ಹಲವು ಭಾಗದಲ್ಲಿ ರೌಂಡ್ಸ್ ಹಾಕಿದ್ದೇನೆ. ಹಗಲು-ರಾತ್ರಿ ನಮ್ಮ ಇಲಾಖೆ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ನಮ್ಮ ಸಿಬ್ಬಂದಿಗಳನ್ನ ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ. ಸಿಬ್ಬಂದಿ ಬೆನ್ನು ತಟ್ಟುವ ಕೆಲಸ ಮಾಡಬೇಕು. ಇರೋ ಚಾಲೆಂಜ್ ಎದುರಿಸಿ ಕೆಲಸ ಮಾಡ್ತಿದ್ದಾರೆ. ಇರುವ ಸಾಧನ ಉಪಯೋಗ ಮಾಡಿಕೊಂಡು ಕೆಲಸ ಮಾಡ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ದಿನಕ್ಕೆ 100-150 ಕಾಲ್ ಬರ್ತಿದೆ. 1600 ಸಿಬ್ಬಂದಿ ನೇಮಕ ಹೊಸದಾಗಿ ಆಗಿದೆ. ರಕ್ಷಣೆಗೆ ಬೇಕಾದ ಎಲ್ಲಾ ವಸ್ತುಗಳು ನಮ್ಮ ಬಳಿ ಇವೆ. ಬೆಂಗಳೂರು ಮಳೆ ಅನಾಹುತ ರಕ್ಷಣಾ ಕೆಲಸಕ್ಕೆ 500 ಹೆಚ್ಚು ಜನ ಕೆಲಸ ಮಾಡ್ತಿದ್ದಾರೆ ಎಂದರು.