ಉದ್ಯಮಿ ಆದಿಕೇಶವುಲು ಆಪ್ತ ಅನುಮಾನಾಸ್ಪದ ಸಾವು ಪ್ರಕರಣ: ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
ಎಂ.ಮಂಜುಳಾ, ರೋಹಿತ್ ಎಸ್ಐಟಿ ಬಿ ರಿಪೋರ್ಟ್ ಪ್ರಶ್ನಿಸಿ, ತನಿಖೆಯನ್ನು ಸಿಬಿಐಗೆ ನೀಡುವಂತೆ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ರು. ಇಂದು ಇದರ ವಿಚಾರಣೆ ನಡೆದಿದ್ದು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ.
ಬೆಂಗಳೂರು: ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ನಿರ್ದೇಶಿಸಿದೆ.
ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ. 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿದೆ. ಕೆ.ರಘುನಾಥ್ ಉದ್ಯಮಿ ಆದಿಕೇಶವುಲು ಆಪ್ತರಾಗಿದ್ದರು. 2013 ಏ.24 ರಂದು ಉದ್ಯಮಿ ಆದಿಕೇಶವುಲು ಮೃತಪಟ್ಟ ನಂತರ ರಘುನಾಥ್ ಹೆಸರಿನಲ್ಲಿದ್ದ ಆಸ್ತಿ ವರ್ಗಾಯಿಸಲು ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಲಾಗಿತ್ತು. ಆದಿಕೇಶವುಲು ಬದುಕಿದ್ದಾಗ ತಮ್ಮ ಹಣದಿಂದ ರಘುನಾಥ್ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದರೆಂಬುದು ಆದಿಕೇಶವುಲು ಮಕ್ಕಳ ಆರೋಪವಾಗಿತ್ತು. ಹೀಗಾಗಿ ಆಸ್ತಿ ಹಿಂತಿರುಗಿಸುವಂತೆ ಒತ್ತಡ ಹೇರುತ್ತಿದ್ದರೆಂದು ಆರೋಪಿಸಲಾಗಿದೆ. ಆದರೆ ಇದನ್ನು ನಿರಾಕರಿಸಿದ್ದ ಕೆ.ರಘುನಾಥ್ ತಾವೇ ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಈ ಆಸ್ತಿ ಖರೀಸಿದಿಸಿರುವುದರಿಂದ ಆದಿಕೇಶವುಲು ಮಕ್ಕಳಿಗೆ ವರ್ಗಾಯಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರಂತೆ.
ಅಲ್ಲದೇ 2016 ರಲ್ಲಿ ಪತ್ನಿ ಮಂಜುಳಾ ಹೆಸರಿಗೆ ತಮ್ಮ ಆಸ್ತಿಗಳನ್ನು ಹಸ್ತಾಂತರಿಸಲು ರಘುನಾಥ್ ವಿಲ್ ಬರೆದಿದ್ದರು. ಈ ಮಧ್ಯೆ ರಘುನಾಥ್ ತಮ್ಮ ಆಸ್ತಿಯನ್ನು ಮಾರಲು ಹೊರಟಾಗ ಆದಿಕೇಶವುಲು ಮಕ್ಕಳು ವೈಟ್‌ಫೀಲ್ಡ್ ನ ಗೆಸ್ಟ್ ಹೌಸ್ ಗೆ ರಘುನಾಥ್ ರನ್ನು ಬರಹೇಳಿದ್ದರಂತೆ. 2019 ರ ಮೇ 2 ರಂದು ತೆರಳಿದ ರಘುನಾಥ್ ಮೇ 4 ರಂದು ಪತ್ನಿಗೆ ಕರೆ ಮಾಡಿ ತಾನು ಆಪತ್ತಿನಲ್ಲಿರುವುದಾಗಿ ತಿಳಿಸಿದ್ದರಂತೆ. ಡಿ.ಎ. ಶ್ರೀನಿವಾಸ್ ಗೆ ಸೇರಿದ ಗೆಸ್ಟ್ ಹೌಸ್ ಗೆ ತೆರಳಿದಾಗ ರಘುನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆತ್ಮಹತ್ಯೆ ಪ್ರಕರಣವೆಂದು ಪ್ರಕರಣ ಮುಕ್ತಾಯಗೊಳಿಸಲಾಗಿತ್ತು. ಅದಾದ ಕೆಲ ತಿಂಗಳ ನಂತರ ಫೆಬ್ರವರಿ 15,2020 ರಂದು ರಘುನಾಥ್ ರನ್ನು ಕೊಲೆ ಮಾಡಿರಬಹುದೆಂದು ಅವರ ಪತ್ನಿ ಮಂಜುಳಾ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸದಿದ್ದಾಗ ಖಾಸಗಿ ದೂರು ಸಲ್ಲಿಸಿದ್ದರು.
ಕೋರ್ಟ್ ಆದೇಶದಂತೆ ಎಸ್ಐಟಿ ರಚಿಸಿ ತನಿಖೆ ನಡೆದು ಆರೋಪದಲ್ಲಿ ಹುರುಳಿಲ್ಲವೆಂದು ಎಸ್‌ಐಟಿ ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದರು. ಎಸ್ಐಟಿ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಿದಾಗ ಕೋರ್ಟ್ ಮತ್ತೆ ಮರುತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಆದರೆ ಸಿಬಿಐ ತನಿಖೆ ಕೋರಿದ್ದ ಮೃತ ಕೆ.ರಘುನಾಥ್ ಪತ್ನಿ ಎಂ.ಮಂಜುಳಾ ಹಾಗೂ ಪುತ್ರ ರೋಹಿತ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಆದೇಶ ನೀಡಿದೆ. ಮೃತರ ಕುಟುಂಬಸ್ಥರು ನ್ಯಾಯಸಮ್ಮತ ತನಿಖೆ ಬಯಸುತ್ತಾರೆ. ಆರೋಪಿ ಪ್ರಭಾವಿಯಾಗಿರುವುದರಿಂದ, ತನಿಖೆಯ ಮೇಲೂ ಪ್ರಭಾವ ಬೀರಿರಬಹುದೆಂದು ಅರ್ಜಿದಾರರು ಆರೋಪಿಸಿದ್ದಾರೆ. ಬಿ ರಿಪೋರ್ಟ್ ಸಲ್ಲಿಸಿರುವುದರಿಂದ ಮತ್ತೊಂದು ಎಸ್ಐಟಿ ತನಿಖೆ ಅವಶ್ಯಕತೆ ಇಲ್ಲ. ನ್ಯಾಯಸಮ್ಮತ ತನಿಖೆಗೆ ಸಿಬಿಐ ಗೆ ವಹಿಸುವುದು ಸೂಕ್ತ ಎಂದುನ್ಯಾ. ಎಂ.ನಾಗಪ್ರಸನ್ನ ರವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. 6 ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐ ಗೆ ಹೈಕೋರ್ಟ್ ಸೂಚನೆ ನೀಡಿದೆ. ತನಿಖೆಗೆ ಸಹಕರಿಸುವಂತೆ ಆದಿಕೇಶವುಲು ಕುಟುಂಬಸ್ಥರಿಗೂ ನಿರ್ದೇಶನ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:59 pm, Thu, 8 September 22