ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ 2 ಕೋಟಿ ಬಿಡುಗಡೆ: ವೀರಜ್ಯೋತಿ ಯಾತ್ರೆಗೆ ನಾಳೆ ಸಿಎಂ ಬೊಮ್ಮಾಯಿ ಚಾಲನೆ
ಅಕ್ಟೋಬರ್ 23ರಿಂದ 3 ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದೆ. ಈ ಹಿನ್ನೆಲೆ ನಾಳೆಯಿಂದ ಐತಿಹಾಸಿಕ ಕೇಂದ್ರಗಳಿಗೆ ವೀರಜ್ಯೋತಿ ಸಂಚರಿಸಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬೆಂಗಳೂರು: ಬೆಳಗಾವಿಗಷ್ಟೇ ಸೀಮಿತವಾಗಿದ್ದ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ(Kittur Utsav) ಈ ಬಾರಿ ರಾಜ್ಯ ಮಟ್ಟದ ಮನ್ನಣೆ ಸಿಕ್ಕಿದ್ದು ಅಕ್ಟೋಬರ್ 23ರಿಂದ 3 ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದೆ. ಈ ಹಿನ್ನೆಲೆ ನಾಳೆಯಿಂದ ಐತಿಹಾಸಿಕ ಕೇಂದ್ರಗಳಿಗೆ ವೀರಜ್ಯೋತಿ ಸಂಚರಿಸಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಗೋವಿಂದ ಕಾರಜೋಳ(Govinda Karajola) ಹೇಳಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಂಗಳೂರಿನ ಪುರಭವನದಲ್ಲಿ ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಿತ್ತೂರು ಉತ್ಸವಕ್ಕೆ ಈಗಾಗಲೇ 2 ಕೋಟಿ ಬಿಡುಗಡೆಯಾಗಿದೆ. ನಾಳೆಯಿಂದ ಐತಿಹಾಸಿಕ ಕೇಂದ್ರಗಳಿಗೆ ವೀರಜ್ಯೋತಿ ಸಂಚಾರ ಮಾಡಲಿದೆ. ಹಾಗೂ ಕನ್ನಡ & ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಅಕ್ಟೋಬರ್ 23, 24, 25ರಂದು ಕಿತ್ತೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಸಿ. ಪಿ ಯೋಗೇಶ್ವರ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಅಸಮಾದಾನ
ಕಿತ್ತೂರು ಉತ್ಸವದ ಅಂಗವಾಗಿ ಪ್ರತಿವರ್ಷ ವೀರಜ್ಯೋತಿ ಯಾತ್ರೆಯು ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಂಚರಿಸುತ್ತಿತ್ತು. ಆದರೆ ಈ ವರ್ಷ ವಿಶೇಷವಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಕೇಂದ್ರ ಸ್ಥಾನಗಳಿಗೆ ವೀರಜ್ಯೋತಿ ಯಾತ್ರೆ ತಲುಪಲಿದ್ದು, ನಾಳೆ ಅಂದರೆ ಅ.2ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಪುರಭವನದ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡುವರು ಎಂದರು.
ಬೆಂಗಳೂರಿನ ಪುರಭವನದ ಮುಂದಿರುವ ವೀರರಾಣಿ ಚನ್ನಮ್ಮಾಜಿ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ವೀರಜ್ಯೋತಿ ಯಾತ್ರೆಯನ್ನು ಮುಖ್ಯಮಂತ್ರಿಗಳು ಬೀಳ್ಕೊಡುವರು. ಈ ಯಾತ್ರೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಸ್ಥಾನಗಳಿಗೆ ತಲುಪಿ, ಆಯಾ ಜಿಲ್ಲಾಧಿಕಾರಿಗಳಿಂದ ಪೂಜೆ ಸಲ್ಲಿಸಿ ಕಿತ್ತೂರು ಉತ್ಸವ ದಿನ ಅಕ್ಟೋಬರ್ 23 ರಂದು ಮುಂಜಾನೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ. ಮಾರ್ಗದುದ್ಧಕ್ಕೂ ಎಲ್ಲ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ ಮತ್ತು ವೀರಜ್ಯೋತಿ ಯಾತ್ರೆ ಪ್ರಯಾಣಿಸುವ ಮಾರ್ಗದಲ್ಲಿ ಬರುವ ಐತಿಹಾಸಿಕ ಸ್ಥಳಗಳಿಗೂ ವೀರಜ್ಯೋತಿ ಸಂಚರಿಸಲಿದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:25 pm, Sat, 1 October 22