ಎನ್ಟಿಐ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅಕ್ರಮ: ತಮಗೆ ಬೇಕಾದವರಿಗೆ ಸೈಟ್ ಹಂಚಿಕೆ, ಸಂಘದ ಸಿಇಒ ಸೇರಿ ಇಬ್ಬರು ಅಧಿಕಾರಿಗಳು ಅರೆಸ್ಟ್
2010ರಲ್ಲಿ ಬಿಡಿಎಯಿಂದ ಆದೇಶವಾಗಿದ್ದ ನಿವೇಶನ ಹೊರತುಪಡಿಸಿ ಕೊಡಿಗೇಹಳ್ಳಿ ಬಳಿ ಅನುಮೋದನೆಗೊಳ್ಳದ 4-5 ಸೈಟ್ಗಳನ್ನು ಅಕ್ರಮವಾಗಿ ನೋಂದಣಿ ಮಾಡಿಕೊಟ್ಟ ಬಗ್ಗೆ ಸಂಘದ ಮಾಜಿ ನಿರ್ದೇಶಕ ನಾಣಯ್ಯ ಆರೋಪ ಮಾಡಿದ್ದಾರೆ.
ಬೆಂಗಳೂರು: ಎನ್ಟಿಐ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಸೈಟ್ಗಳನ್ನು ಅರ್ಹರಿಗೆ ನೀಡದೆ ತಮಗೆ ಬೇಕಾದವರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂಘದ ಮಾಜಿ ನಿರ್ದೇಶಕ ನಾಣಯ್ಯ ಎಂಬುವವರು ಬೆಂಗಳೂರಿನ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದಾರೆ.
ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ ನಿರ್ದೇಶಕರಾದ ಶೃಂಗೇಶ್ವರ, ರಾಮಕೃಷ್ಣರೆಡ್ಡಿ, ಸಂಘದ ಸಿಇಒ ಪ್ರತಾಪ್ ಚಂದ್ರ ರಾಥೋಡ್ ವಿರುದ್ಧ ದೂರು ದಾಖಲಿಸಲಾಗಿದೆ. 2010ರಲ್ಲಿ ಬಿಡಿಎಯಿಂದ ಆದೇಶವಾಗಿದ್ದ ನಿವೇಶನ ಹೊರತುಪಡಿಸಿ ಕೊಡಿಗೇಹಳ್ಳಿ ಬಳಿ ಅನುಮೋದನೆಗೊಳ್ಳದ 4-5 ಸೈಟ್ಗಳನ್ನು ಅಕ್ರಮವಾಗಿ ನೋಂದಣಿ ಮಾಡಿಕೊಟ್ಟ ಬಗ್ಗೆ ಸಂಘದ ಮಾಜಿ ನಿರ್ದೇಶಕ ನಾಣಯ್ಯ ಆರೋಪ ಮಾಡಿದ್ದಾರೆ. ಅಲ್ಲದೆ ಅಕ್ರಮವನ್ನು ಪ್ರಶ್ನೆ ಮಾಡಿದ ದೂರುದಾರರಿಗೆ ಬೆದರಿಕೆ ಹಾಕಿದ್ದಾರಂತೆ. ಸದ್ಯ ನಾಣಯ್ಯ ಅವರ ದೂರಿನ ಆಧಾರದ ಮೇಲೆ ಪ್ರತಾಪ್ ಚಂದ್ರ ರಾಥೋಡ್, ರಾಮಕೃಷ್ಣರೆಡ್ಡಿ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ರಾಜ್ಯ ಸಾರಿಗೆ ಗೃಹ ನಿರ್ಮಾಣ ಸಹಕಾರ ಸಂಘದಿಂದ ಗೋಲ್ಮಾಲ್
ಇನ್ನು ಮತ್ತೊಂದು ಕಡೆ ಕರ್ನಾಟಕ ರಾಜ್ಯ ಸಾರಿಗೆ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿರ್ಮಿಸುತ್ತಿರುವ, ಲೇಔಟ್ ಮೇಲೆ ಹತ್ತಾರು ಆರೋಪಗಳು ಕೇಳಿ ಬಂದಿವೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ರಾಮನಗರ ಜಿಲ್ಲೆ ಬಿಡದಿ ಪಟ್ಟಣ ಸಮೀಪದ ಕೆಂಚನಗುಪ್ಪೆಯಲ್ಲಿ ಲೇಔಟ್ ನಿರ್ಮಿಸಲಾಗ್ತಿದೆ. ಸರ್ವೆ ನಂಬರ್ 189, 199 ರ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರೋ ಲೇಔಟ್ ಗೆ ಯಾವುದೇ ಅನುಮತಿ ಪಡೆದಿಲ್ಲ. ಕನ್ವರ್ಷನ್ ಮಾಡದೇ, ಪ್ಲಾನ್ ಅಪ್ರೂವಲ್ ಇಲ್ಲದೆ ಲೇಔಟ್ ನಿರ್ಮಾಣ ಮಾಡಿರೋ ಆರೋಪ ಕೇಳಿಬಂದಿದೆ. ಒಂದು ಬಡಾವಣೆ ನಿರ್ಮಾಣಕ್ಕೆ ಹತ್ತಾರು ನಿಯಮ ಪಾಲಿಸಬೇಕು. ಆದರೆ, ಲೆಕ್ಕಾಚಾರಗಳನ್ನ ಪಾಲಿಸಿದ್ರೆ ಹೆಚ್ಚು ಸೈಟ್ ನಿರ್ಮಾಣ ಅಸಾಧ್ಯ ಎಂದು ಯಾವುದೆ ಅನುಮತಿ ಪಡೆಯದೇ, ಬಿಡದಿ ಪುರಸಭೆಯ ಕೆಲ ಅಧಿಕಾರಿಗಳ ಜೊತೆ ಶಾಮೀಲು ಆಗಿ, ಲೇಔಟ್ ನಿರ್ಮಿಸ್ತಿದ್ದಾರೆ. ಐದು ಎಕರೆ ಪ್ರದೇಶದಲ್ಲಿ 57 ಜನರಿಗೆ ಸೈಟ್ ಗಳನ್ನ ಹಂಚಿಕೆಯನ್ನೂ ಮಾಡಿದ್ದು, ಈ ಕುರಿತು, ಸಾಮಾಜಿಕ ಕಾರ್ಯಕರ್ತ ಸಂಪತ್ ಲೋಕಯುಕ್ತಕ್ಕೂ ದೂರು ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:55 pm, Sat, 1 October 22