ಬೆಂಗಳೂರು, (ಅಕ್ಟೋಬರ್ 04): ಮೊಬೈಲ್ ಅಂಗಡಿಗೆ (Mobile Shop) ಕನ್ನ ಹಾಕಿ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿಗಳನ್ನು ಟ್ರಾಫಿಕ್ ಫೈನ್ ಚಲನ್(traffic fine challan) ಆಧಾರದ ಮೇಲೆ ಬಂಧಿಸುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಪ್ರಭು (20), ಮೌನೇಶ (19) ಹಾಗೂ ಅಜಯ್ (19) ಬಂಧಿತರು. ಆರೋಪಿಗಳು ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಾಗಿದ್ದು, ಇವರು ಸೆಪ್ಟೆಂಬರ್ 28ರಂದು ಬೆಂಗಳೂರಿನ (Bengaluru) ಸಂಜಯನಗರದ ನ್ಯೂ ಬಿಇಎಲ್ ರಸ್ತೆಯ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದರು. ಇದೀಗ ಆರೋಪಿಗಳು ಸಿಗ್ನಲ್ ಜಂಪ್ ಮಾಡಿ ಸಿಕ್ಕಿಬಿದ್ದಿದ್ದಾರೆ.
ಪ್ರಭು, ಮೌನೇಶ್ ಮತ್ತು ಅಜಯ್ ಸ್ನೇಹಿತರು. ಪ್ರಭು ಶೋಕಿಗಾಗಿ ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಕಳ್ಳತನದ ಪ್ಲ್ಯಾನ್ ಮಾಡಿ ತನ್ನ ಸ್ನೇಹಿತರ ಜತೆಗೆ ಚರ್ಚೆ ನಡೆಸಿದ್ದ. ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿ ಮಾಲೀಕ ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಲ್ ಸಮೇತ ಖರೀದಿಸಿ ರಿಪೇರಿ ಮಾಡಿ ಮಾರಾಟ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಪ್ರಭು ಖರಿದೀಸುವ ನೆಪದಲ್ಲಿ ಅಂಗಡಿಗೆ ಹೋಗಿ ವಿಡಿಯೋ ಮಾಡಿಕೊಂಡು ಬಂದಿದ್ದ. ಬಳಿಕ ಅಂಗಡಿ ಬಗ್ಗೆ ಸ್ನೇಹಿತರೊಂದಿಗೆ ಕಳ್ಳತನ ಕುರಿತು ಚರ್ಚೆ ನಡೆಸಿದ್ದ. ನಂತರ ಪ್ಲ್ಯಾನ್ ಮಾಡಿಕೊಂಡು ಸೆಪ್ಟೆಂಬರ್ 28ರ ರಾತ್ರಿ 10.30ರ ಸುಮಾರಿಗೆ ಅಂಗಡಿಯ ಶೆಟ್ಟರ್ ಮುರಿದು ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ದೋಚಿ ಅರ್ಧ ಗಂಟೆಯೊಳಗೆ ಅಲ್ಲಿಂದ ಪರಾರಿಯಾಗಿದ್ದರು.
ಬಳಿಕ ಅಂಗಡಿ ಮಾಲೀಕರು ಸೆಪ್ಟೆಂಬರ್ 29ರಂದು ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಕೊಂಡು ತನಿಖೆಗೆ ಆರಂಭಿಸಿದ್ದ ಪೊಲೀಸರು ಮೊದಲು ಕಳ್ಳತನವಾದ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಹಾಗೇ ಅಕ್ಕ-ಪಕ್ಕದ ಸಿಸಿ ಟಿವಿಗಳನ್ನು ಚೆಕ್ ಮಾಡಿದ್ದು, ಅಂಗಡಿ ಮುಂದೆ ಕಾರು ನಿಂತಿರುವ ಪತ್ತೆಯಾಗಿದೆ. ಬಳಿಕ ಆ ಯಾವ ಕಡೆ ಹೋಗಿದೆ ಎನ್ನುವುದನ್ನು ನೋಡಿಕೊಂಡು ಆ ಮಾರ್ಗದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆ ಕಾರು ವೇಗವಾಗಿ ನಾಲ್ಕು ಸಿಗ್ನಲ್ ಜಂಪ್ ಮಾಡಿಕೊಂಡು ಹೋಗಿದೆ. ಇದರಿಂದ ಪೊಲೀಸರಿಗೆ ಆ ಕಾರಿನ ಮೇಲೆಯೇ ಅನುಮಾನ ಬಂದಿದೆ.
ಕಳವು ಮಾಡಿದ ವಸ್ತುಗಳನ್ನು ಕಾರಿನಲ್ಲಿ ತುಂಬಿಕೊಂಡು ಎಚ್‌ಎಸ್‌ಆರ್ ಲೇಔಟ್‌ಗೆ ಬರುವಾಗ ಮಾರ್ಗಮಧ್ಯೆ ಭಯದಲ್ಲಿ ನಾಲ್ಕು ಸಿಗ್ನಲ್ ಜಂಪ್ ಮಾಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅಂಗಡಿ ಸಮೀಪದ ಸಿಸಿ ಕ್ಯಾಮರಾದಲ್ಲಿ ವಾಹನದ ನಂಬರ್ ಪ್ಲೇಟ್ ದೃಶ್ಯ ಸೆರೆಯಾಗಿತ್ತು. ಸಿಸಿ ಕ್ಯಾಮರಾಗಳ ಸಹಾಯದಿಂದ ಕಾರು ಜಾಡು ಹಿಡಿಯುತ್ತಾ ಸಾಗಿದಾಗ ಸಿಗ್ನಲ್ ಜಂಪ್ ಮಾಡಿರುವುದು ಗೊತ್ತಾಗಿತ್ತು.
ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕಾರಿನ ನಂಬರ್ ಪರಿಶೀಲನೆ ಮಾಡಿದಾಗ ಸ್ವಯಂ ಚಾಲಿತವಾಗಿ ದಂಡ ಜನರೇಟ್ ಆಗಿತ್ತು. ಅದರಲ್ಲಿನ ವಿಳಾಸ ಹುಡುಕಿ ಹೋದಾಗ, ಮನೆ ಸಮೀಪದ ಮೈದಾನದಲ್ಲಿ ಕಾರು ನಿಂತಿತ್ತು. ಬಳಿಕ ಸ್ವಲ್ಪ ಹೊತ್ತಿಗೆ ಕಾರಿನ ಬಳಿಗೆ ಬಂದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಬಟಾಬಯಲಾಗಿದೆ. ಬಳಿಕ ಅಜಯ್ ಮಾಹಿತಿ ಸಿಕ್ಕಿದೆ. ಆತನನ್ನು ವಶಕ್ಕೆ ಪಡೆದಾಗ ಇತರರು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಬಂಧಿತರಿಂದ 50 ಲಕ್ಷ ರೂ. ಮೌಲ್ಯದ ದುಬಾರಿ ಮೊಬೈಲ್, ಕೈಗಡಿಯಾರ, ಲ್ಯಾಪ್‌ಟಾಪ್, ಕ್ಯಾಮರಾ, ಸ್ಮಾರ್ಟ್ ವಾರ್ಚ್ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ