ಬೆಂಗಳೂರು, ಅ.26: ಹುಲಿ ಉಗುರು ಧರಿಸಿದ (Tiger Claw Pendant) ಹಳ್ಳಿಕಾರ್ ಸಂತೋಷ್ ಬಿಗ್‌ಬಾಸ್ ಮನೆಯಲ್ಲಿ ಅರೆಸ್ಟ್ ಆದ ಬೆನ್ನಲ್ಲೆ, ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಸೆಲೆಬ್ರೆಟಿಗಳ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೆಲೆಬ್ರಿಟಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಒತ್ತಡ ಹೆಚ್ಚಾಗುತ್ತಿದ್ದಂತೆ ಅರಣ್ಯಾಧಿಕಾರಿಗಳು (Forest Officials) ಹುಲಿ ಉಗುರು ಪೆಂಡೆಂಟ್ ಧರಿಸಿದ ಸೆಲೆಬ್ರೆಟಿಗಳಿಗೆ ನೋಟೀಸ್ ಜಾರಿ ಮಾಡಿ ನಿನ್ನೆ ತಲಾಶ್ ಮಾಡಿದ್ದಾರೆ. ಇದೇ ಬೆನ್ನಲ್ಲೆ ಈಗ ಮತ್ತೊಂದು ಬೆಳವಣಿಗೆ ನಡೆದಿದ್ದು ಅರಣ್ಯಾಧಿಕಾರಿಗಳು ಮತ್ತೊಂದು ದಾಳಿಗೆ ಪ್ಲಾನ್ ಮಾಡಿದ್ದಾರೆ.
ಹೌದು ಸೆಲೆಬ್ರೆಟಿಗಳ ಮನೆಗಳ ಮೇಲೆ ಅರಣ್ಯಾಧಿಕಾರಿಗಳ ರೇಡ್ ಬಳಿಕ ಈಗ ಹುಲಿ ಉಗುರಿಗೆ ಪೆಂಡೆಂಟ್ ಮಾಡಿಕೊಡುವ ಆಭರಣ ಅಂಗಡಿಗಳ ಮಾಲೀಕರಿಗೂ ಸಂಕಷ್ಟ ಎದುರಾಗಿದೆ. ಚಿನ್ನದ ಅಂಗಡಿ ಮಾಲೀಕರು ಗ್ರಾಹಕರ ಆರ್ಡರ್ ಪಡೆದು ವಿವಿಧ ಮಾದರಿಗಳಲ್ಲಿ ಹುಲಿ ಉಗುರು ಪೆಂಡೆಂಟ್ ಮಾಡಿಕೊಡುತ್ತಿದ್ದರು. ಹೀಗಾಗಿ ಚಿನ್ನದ ವ್ಯಾಪಾರಿಗಳು ಎಲ್ಲಿಂದ ಹುಲಿ ಉಗುರು ತರ್ತಾರೆ? ಯಾರು ಚಿನ್ನದ ವ್ಯಾಪಾರಿಗಳಿಗೆ ಹುಲಿ ಉಗುರು ಮಾರಾಟ ಮಾಡ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಹಿನ್ನೆಲೆ ದಾಳಿ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಪ್ರಕರಣ: ಯಾರಿಗೆಲ್ಲ ಸಂಕಷ್ಟ? ಯಾರ್ಯಾರ ಮನೆ ಶೋಧ?
ಈಗಾಗಲೇ ಸಿಐಡಿ, ಬಿಬಿಎಂಪಿ ಫಾರೆಸ್ಟ್ ಸೆಲ್ ಅಧಿಕಾರಿಗಳು ಹುಲಿ ಉಗುರು ಮಾರಾಟದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇವಲ ಹುಲಿ ಉಗುರಲ್ಲದೇ ಆನೆ ಬಾಲದ ಕೂದಲನ್ನ ಸಂಗ್ರಹ ಮಾಡಿರುವ ಬಗ್ಗೆಯೂ ಶೋಧಕ್ಕೆ ಮುಂದಾಗಿದ್ದಾರೆ. ಸ್ಮಗ್ಲಿಂಗ್ ಮೂಲಕ ಹುಲಿ ಉಗುರು ಹಾಗೂ ಆನೆ ಬಾಲದ ಕೂದಲ್ಲನ್ನ ಸಂಗ್ರಹ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶಂಕೆ ಹಿನ್ನೆಲೆ ಜ್ಯುವಲ್ಲರಿ ಶಾಪ್ಗಳು ಸೇರಿದಂತೆ ದೊಡ್ಡ ದೊಡ್ಡ ಜ್ಯುವಲ್ಲರಿ ಶೋ ರೂಂ ಗಳ ಮೇಲೆ ದಾಳಿ ನಡೆಸಲು ಅರಣ್ಯಾಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
ಅರಣ್ಯಾಧಿಕಾರಿಗಳು ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್ಲೈನ್ ವೆಂಕಟೇಶ್, ಜಗ್ಗೇಶ್ ಅವರ ಮನೆಗಳ ಪರಿಶೀಲನೆ ನಡೆಸಿದ್ದಾರೆ. ನಟ ಜಗ್ಗೇಶ್ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದಾಗ ಜಗ್ಗೇಶ್ ಅವರು ಮನೆಯಲ್ಲಿ ಇರಲಿಲ್ಲ. ಜಗ್ಗೇಶ್ ಅವರ ಪತ್ನಿ ಲಾಕೆಟ್ ಕೊಟ್ಟಿದ್ದರಿಂದಾಗಿ, ಮನೆಯಲ್ಲಿ ಯಾವುದೇ ತಪಾಸಣೆ ಮಾಡಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಲಯ ಸಂರಕ್ಷಣಾಧಿಕಾರಿ ರವೀಂದ್ರ, ಅದು 40 ವರ್ಷದ ಹಳೆಯದಾದ ಲಾಕೆಟ್ ಆಗಿದೆ. ಕೊಳೆತ ರೀತಿಯಲ್ಲಿ ಇರೋದ್ರಿಂದ ಡಿಎನ್ಎ ಪರೀಕ್ಷೆಗಾಗಿ ಡೆಹ್ರಾಡೂನ್ ಲ್ಯಾಬ್ಗೆ ಕಳಿಸ್ತೀವಿ ಎಂದಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:50 am, Thu, 26 October 23