“ಕೆಟ್ಟ ಜನರನ್ನು ಮಾತ್ರ ನೋಯಿಸುತ್ತೇನೆ”: ಡಬಲ್ ಮರ್ಡರ್ ನಂತರ ಜೋಕರ್ ಫೆನಿಕ್ಸ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್
ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಮತ್ತು ಸಿಇಒ ಕೊಲೆಯ ನಂತರ ಪ್ರಮುಖ ಆರೋಪಿ ಟಿಕ್ಟಾಕ್ ಸ್ಟಾರ್ ಜೋಕರ್ ಫೆನಿಕ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ.
ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣಿಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್ ಅವರನ್ನು ಹತ್ಯೆ (Double Murder) ಮಾಡಿದ ನಂತರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಟಿಕ್ಟಾಕ್ (Tiktok) ಸ್ಟಾರ್ ಫೆನಿಕ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಾನು ಒಳ್ಳೆಯ ವ್ಯಕ್ತಿಗಳನ್ನು ಎಂದಿಗೂ ನೋಯಿಸುವುದಿಲ್ಲ” ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿರುವ ನಡುವೆಯೇ ಗೌಪ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿರುವ ಫೆನಿಕ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಈ ಗ್ರಹದ ಜನರು ಯಾವಾಗಲೂ ಮೋಸಗಾರರು. ಆದ್ದರಿಂದ ನಾನು ಕೆಟ್ಟ ಜನರನ್ನು ಮಾತ್ರ ನೋಯಿಸುತ್ತೇನೆ. ನಾನು ಯಾವುದೇ ಒಳ್ಳೆಯ ಜನರನ್ನು ನೋಯಿಸುವುದಿಲ್ಲ” ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಮಾತನಾಡಿದ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ ಗುಪ್ತಾ, ಸಂಜೆ 4 ಗಂಟೆ ಸುಮಾರಿಗೆ ಕೊಲೆ ನಡೆದಿದೆ. ಮೂವರು ಆರೋಪಿಗಳಿಂದ ಈ ಕೃತ್ಯ ಎಸಗಲಾಗಿದೆ. ಗಂಭೀರವಾಗಿ ಗಾಯಗೊಂಡು ಕಂಪನಿಯ ಎಂಡಿ ಮತ್ತು ಸಿಇಒ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇವರು ಕಳೆದ 7 ತಿಂಗಳ ಹಿಂದೆ ಕಂಪನಿ ಶುರುಮಾಡಿದ್ದರು. ಕೃತ್ಯವೆಸಗಿದ ಮೂವರು ಆರೋಪಿಗಳ ಪೈಕಿ ಇಬ್ಬರ ಸುಳಿವು ಸಿಕ್ಕಿದೆ ಎಂದರು.
ಇದನ್ನೂ ಓದಿ: Bengaluru: ಹಾಡಹಗಲೇ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಮತ್ತು ಸಿಇಒ ಕೊಲೆ ಮಾಡಿದ ಟಿಕ್ ಟಾಕ್ ಸ್ಟಾರ್ ಜೋಕರ್
ಏರೋನಿಕ್ಸ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಅನ್ನು 2022ರ ನವೆಂಬರ್ನಲ್ಲಿ ಸ್ಥಾಪಿಸಲಾಗಿದೆ. ಇದಕ್ಕೂ ಮೊದಲು ಆರೋಪಿಗಳು ಫನೀಂದ್ರ ಮತ್ತು ವಿನುಕುಮಾರ್ ಅವರಿಗೆ ಪರಿಚಿತರಾಗಿದ್ದು, ಬೇರೆ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು ಎಂದು ಡಿಸಿಪಿ ಪ್ರಸಾದ್ ನ್ಯೂಸ್ 9 ಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, “ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ” ಎಂದರು. ಇವರಿಬ್ಬರು ಹಿಂದಿನ ಸಂಸ್ಥೆಯನ್ನು ತೊರೆದು ಹೊಸ ಸಂಸ್ಥೆಯನ್ನು ಸ್ಥಾಪಿಸಿದ್ದೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 pm, Tue, 11 July 23