ಆನೇಕಲ್: ಟೋಯಿಂಗ್ ಸಿಬ್ಬಂದಿ ಜತೆ ಕಾರು ಮಾಲಕಿ ಮಾತಿನ ಚಕಮಕಿ ನಡೆಸಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ಸಿಟಿಯಲ್ಲಿ ನಡೆದಿದೆ. ಟೋಯಿಂಗ್ ವಾಹನ ಏರಿ ಮಹಿಳೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸಿಟಿಯಲ್ಲಿ ಮಹಿಳೆಯ ಹೈಡ್ರಾಮಾ ಕಂಡುಬಂದಿದೆ. ನನ್ನ ಕಾರನ್ನು ಟೋಯಿಂಗ್ ಮಾಡಲು ಬಿಡಲ್ಲವೆಂದು ಪಟ್ಟು ಹಿಡಿದಿದ್ದಾರೆ. ಟೋಯಿಂಗ್ ವಾಹನ ಹತ್ತಿ ಕಾರಿನ ಮಾಲಕಿ ಪ್ರತಿಭಟನೆ ನಡೆಸಿದ್ದಾರೆ.
ಟೋಯಿಂಗ್ ವೇಳೆ ಸಂಚಾರಿ ಪೊಲೀಸರು ಸ್ಥಳದಲ್ಲಿ ಇಲ್ಲ. ಕಾರು ಯಾರದ್ದು ಎಂದು ವಿಚಾರಣೆ ನಡೆಸುವ ಟೋಯಿಂಗ್ ನಿಯಮ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಿತ್ತು. ಟೋಯಿಂಗ್ ಸಿಬ್ಬಂದಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ಟೋಯಿಂಗ್ ಸಿಬ್ಬಂದಿ ವಿರುದ್ಧ ಕಾರು ಮಾಲಕಿ ಆಕ್ರೋಶ ಹೊರಹಾಕಿದ್ದಾರೆ. ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಹಿನ್ನೆಲೆಯಲ್ಲಿ ಜನರು ಜಮಾಯಿಸಿದ್ದಾರೆ.
ಟೋಯಿಂಗ್ ಮಾಡುವಾಗ ವಾಹನ ಮಾಲೀಕರು ಸ್ಥಳದಲ್ಲಿದ್ದರೆ ನೋ ಪಾರ್ಕಿಂಗ್ ಶುಲ್ಕ ಪಡೆದು ಬಿಟ್ಟುಬಿಡಬೇಕು
ವಾಹನ ಟೋಯಿಂಗ್ ಮಾಡುವಾಗ ನಿಯಮಾವಳಿಗಳನ್ನು ಪಾಲಿಸುವಂತೆ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಾಕೀತು ಮಾಡಿದ್ದರು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಗಳಿಂದ ಸಾರ್ವಜನಿಕರಿಗಾಗುತ್ತಿರುವ ಕಿರುಕುಳದ ಬಗ್ಗೆ ಕೇಳಿ ಬಂದ ಆಪಾದನೆ ಹಿನ್ನೆಲೆಯಲ್ಲಿ ಗೃಹ ಸಚಿವರು ಪೊಲೀಸರಿಗೆ ನಿಯಮ ಪಾಲಿಸುವಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಮಾಹಿತಿ ತಿಳಿದುಬಂದಿತ್ತು.
ಇನ್ನು ಮುಂದೆ ಯಾವುದೇ ಸಂಧರ್ಭದಲ್ಲಿ ಟ್ರಾಫಿಕ್ ಪೊಲೀಸರು ವಾಹನವನ್ನು ಹೊತ್ತೊಯ್ಯುವ ಸಮಯದಲ್ಲಿ ವಾಹನದ ಮಾಲೀಕರು ಸ್ಥಳದಲ್ಲಿದ್ದರೆ ಕೇವಲ ‘ನೋ ಪಾರ್ಕಿಂಗ್’ ಶುಲ್ಕದ ಹಣವನ್ನು ಮಾತ್ರ ಪಡೆದುಕೊಳ್ಳಬೇಕು. ವಾಹನವನ್ನು ಅಲ್ಲಿಯೇ ಅವರಿಗೆ ಬಿಟ್ಟು ಕೊಡಬೇಕು ಮತ್ತು ಟೋಯಿಂಗ್ ಮಾಡಬಾರದು ಎಂದು ಸೂಚನೆ ನೀಡಲಾಗಿತ್ತು.
ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂಥ್ ಹಾಗೂ ಹೆಚ್ಚುವರಿ ಆಯುಕ್ತ ಸಂಚಾರ ವಿಭಾಗದ ರವಿಕಾಂತೇಗೌಡ ಅವರ ಜೊತೆ ಸಭೆ ನಡೆಸಿದ್ದರು. ಟೋಯಿಂಗ್ ಪ್ರಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಗಿತ್ತು. ಯಾವುದೇ ವಾಹನವನ್ನು ಟೋಯಿಂಗ್ ಮಾಡುವ ಪೂರ್ವದಲ್ಲಿ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ತರಬೇಕು. ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು. ವಾಹನ ಟೋಯಿಂಗ್ ಮಾಡಬೇಕಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ನಿಯಾಮಾವಳಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಎಂದು ಸಭೆಯಲ್ಲಿ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರಿನ ಇಂದಿರಾನಗರ ಮೆಟ್ರೋ ಬಳಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ