ಬೆಂಗಳೂರು, ಏಪ್ರಿಲ್ 17: ಬೆಂಗಳೂರಿನ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್, ಜಯನಗರ, ಕೆ.ಆರ್.ಮಾರ್ಕೆಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಬುಧವಾರ ಸಂಜೆ ಭಾರಿ (Bengaluru Rains) ಮಳೆ ಸುರಿದಿತ್ತು. ಜೆ.ಪಿ.ನಗರ, ವಿಜಯನಗರ, ರಾಜಾಜಿನಗರ, ರಾಜರಾಜೇಶ್ವರಿ ಸೇರಿದಂತೆ ಹಲವೆಡೆ ಮಳೆ ಅಬ್ಬರಿಸಿತ್ತು. ಮಹದೇವಪುರ, ವರ್ತೂರು, ವೈಟ್ ಫೀಲ್ಡ್ನಲ್ಲಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದರು. ವಿಶೇಷವೆಂದರೆ, ಗುರುವಾರ ಮಧ್ಯಾಹ್ನವಾಗುತ್ತಾ ಬಂದರೂ ನಗರದ ಅನೇಕ ಕಡೆಗಳಲ್ಲಿ ಸಂಚಾರಕ್ಕೆ ಅಡಚಣೆ, ಸಮಸ್ಯೆ ಬಗೆಹರಿದಿಲ್ಲ. ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಚರಂಡಿ ನೀರು ಹರಿಯುವುದು, ಮರ ತೆರವು ಆಗದಿರುವುದು ಇತ್ಯಾದ ಸಮಸ್ಯೆಗಳು ತಲೆದೋರಿವೆ. ಪರಿಣಾಮವಾಗಿ ಟ್ರಾಫಿಕ್ ಜಾಮ್ (Bengaluru Traffic Jam), ನಿಧಾನ ಸಂಚಾರ ವರದಿಯಾಗಿದೆ.
ಚರಂಡಿ ನೀರು ಸೋರಿಕೆಯಿಂದಾಗಿ ನಾಯಂಡಹಳ್ಳಿಯಿಂದ ಕತ್ರಿಗುಪ್ಪೆ ಕಡೆಗೆ ತೀವ್ರ ಸಂಚಾರದಟ್ಟಣೆ ಉಂಟಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಗಮನಿಸಬೇಕು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಬಿಡಬ್ಲ್ಯೂಎಸ್‌ಎಸ್‌ಬಿ (ಜಲಮಂಡಳಿ) ಕಾಮಗಾರಿಯಿಂದಾಗಿ ಟೌನ್‌ಹಾಲ್ ಕಡೆಯಿಂದ ಕಾರ್ಪೊರೇಷನ್ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
‘ಸಂಚಾರಸಲಹೆ/Traffic advisory’
ಚರಂಡಿ ನೀರು ಸೋರಿಕೆಯಿಂದಾಗಿ ನಾಯಂಡಹಳ್ಳಿಯಿಂದ ಕತ್ರಿಗುಪ್ಪೆ ಕಡೆಗೆ ತೀವ್ರ ಸಂಚಾರದಟ್ಟಣೆ ಉಂಟಾಗಿದೆ.
Due to Sewage water leakage the road from Nayandahalli towards Kathriguppe is having severe congestion. pic.twitter.com/ifNbIf3Lxd— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 17, 2025
ಮಳೆ ನೀರು ನಿಂತಿರುವುದರಿಂದ ನಾಗವಾರದಿಂದ ಎಲಿಮೆಂಟ್ಸ್ ಮಾಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಮಳೆ ನೀರು ನಿಂತಿರುವುದರಿಂದ ಕುಂದನಹಳ್ಳಿ ಗೇಟ್‌ನಿಂದ ಸಿದ್ದಾಪುರ ಕಡೆಗೆ ತೀವ್ರ ಸಂಚಾರದಟ್ಟಣೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಳೆಯ ಕಾರಣ ಮರಬಿದ್ದಿರುವುದರಿಂದ ಪೀಣ್ಯ ಇಂಡಸ್ಟ್ರೀಸ್ ಭವನದಿಂದ ಎಚ್ .ಎಂ .ಟಿ ಲೇಔಟ್ ಕಡೆಗೆ ಹೋಗುವ ರಸ್ತೆ ಬಂದ್ ಆಗಿದ್ದು, ಸಾರ್ವಜನಿಕರು ಟಿವಿಎಸ್ ಕ್ರಾಸ್ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸಬಹುದು ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು ಬೆಂಗಳೂರು ಸಂಚಾರ ಮಾರ್ಗದಲ್ಲಿ ಮಹತ್ವದ ಬದಲಾವಣೆ, ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ
ಶಿವಾಜಿನಗರ ಸಂಚಾರ ಠಾಣಾ ಸರಹದ್ದಿನ ಇನ್ಪೆಂಟ್ರಿ ರಸ್ತೆ ಹಿಂದೂ ಪ್ರೆಸ್ ಜಂಕ್ಷನ್ ಬಳಿ ಮುರಿದು ಬಿದ್ದ ಮರದಕೊಂಬೆಯನ್ನು ಬಿಬಿಎಂಪಿ ಸಹಯೋಗದೊಂದಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿ ತೇರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಹೀಗಾಗಿ ಸದ್ಯ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇಲ್ಲವಾಗಿದೆ.
ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ಪಕ್ಷದವರು ಪೆಟ್ರೋಲ್, ಡೀಸೆಲ್, ಎಲ್ಪಿಜಿ ಗ್ಯಾಸ್ ದರವನ್ನು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಆಗುವ ಕಾರಣ ಸಾರ್ವಜನಿಕರು ಬದಲಿ ರಸ್ತೆ ಮೂಲಕ ಸಂಚರಿಸಲು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.