ಬ್ರೇಕ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ; ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆಗೆ ಮುಂದಾದ ಸಾರಿಗೆ ಇಲಾಖೆ
2016ರಲ್ಲಿ 150 ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆದಿತ್ತು. ಸಾರಿಗೆ ಇಲಾಖೆ ಪರೀಕ್ಷೆಯ ನಂತರ ದಾಖಲೆಗಳ ಪರಿಶೀಲನೆ ಮಾಡಿದ್ದರು. ಈ ವೇಳೆ ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ, ಒಂದೊಂದು ಪೋಸ್ಟ್ಗು ಒಂದೊಂದು ಕೋಟಿ ರುಪಾಯಿ ಡೀಲ್ ಆಗಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಯ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣ (Transport Department Brake Inspector Recruitment Ccam) ಸಂಬಂಧ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ ನೀಡಿದ 20 ದಾಖಲಾತಿಗಳು ಟಿವಿ9ಗೆ ಲಭ್ಯವಾಗಿದ್ದು, ನೇಮಕಾತಿ ಆಯ್ಕೆ ಪಟ್ಟಿಯಲ್ಲಿ ಮೊದಲ ರ್ಯಾಂಕ್ ಪಡೆದ ಅಭ್ಯರ್ಥಿ ನೀಡಿರುವ ದಾಖಲೆಯೇ ನಕಲಿಯಾಗಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ದರಾಮ್ಮಪ್ಪ, ಯಾವ ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿರುವುದು ಕಂಡು ಬಂದಿದೆಯೋ ಅಂತಹ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ಮತ್ತೊಮ್ಮೆ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಸುಳ್ಳು ದಾಖಲಾತಿ ನೀಡಿದ್ದ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಕೈ ಬಿಡಲಾಗುತ್ತದೆ. ನೈಜತೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಮುಂದುವರಿಸುತ್ತೇವೆ. ಜಿಲ್ಲಾಧಿಕಾರಿಗಳ ತಂಡಕ್ಕೆ ಅಭ್ಯರ್ಥಿಗಳು ಈಗಾಗಲೇ ದಾಖಲಾತಿಗಳನ್ನು ನೀಡಿದ್ದಾರೆ. ಸದ್ಯ ಯಾವುದೇ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್ಸ್‌ಪೆಕ್ಟರ್ ನೇಮಕದಲ್ಲಿ ಅಕ್ರಮ ನಡೆದಿರುವ ಬಗ್ಗೆ ಟಿವಿ9ನಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು, ಈ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ನಾಯಕನಹಟ್ಟಿಯಲ್ಲಿ ಟಿವಿ9 ಜೊತೆ ಮಾತನಾಡಿದ ಸಚಿವರು, ಟಿವಿ9 ವರದಿಯನ್ನು ನಾನು ಗಮನಿಸಿದ್ದೇನೆ. ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಏನಿದು ಪ್ರಕರಣ?
2016ರಲ್ಲಿ 150 ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆದಿತ್ತು. ಸಾರಿಗೆ ಇಲಾಖೆ ಪರೀಕ್ಷೆಯ ನಂತರ ದಾಖಲೆಗಳ ಪರಿಶೀಲನೆ ಮಾಡಿದ್ದರು. ಈ ವೇಳೆ ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ, ಒಂದೊಂದು ಪೋಸ್ಟ್ಗೆ ಒಂದೊಂದು ಕೋಟಿ ರೂಪಾಯಿ ಡೀಲ್ ಆಗಿರುವ ಆರೋಪ ಕೇಳಿಬಂದಿತ್ತು. 2019ರಲ್ಲಿ 129 ಸಂಭವನೀಯ ಪಟ್ಟಿ ಪ್ರಕಟಿಸಲಾಗಿತ್ತು. ಪಟ್ಟಿಯಲ್ಲಿ ಅಕ್ರಮ ಎಸಗಿದ್ದ ಅಭ್ಯರ್ಥಿಗಳ ಹೆಸರೇ ಇತ್ತು. ಈ ಹಿನ್ನೆಲೆ ನೊಂದ ಅಭ್ಯರ್ಥಿಗಳು 2019ರಲ್ಲೇ ಕೆಎಟಿಗೆ ಹಾಗು ಹೈಕೋರ್ಟ್ ಹೋಗಿದ್ದರು. 2021ರಲ್ಲಿ ಹೈಕೋರ್ಟ್ ಅಭ್ಯರ್ಥಿಗಳ ಕೋರಿಕೆಯಂತೆ ಲಿಸ್ಟ್ ವಾಪಸ್ ಪಡೆಯುವಂತೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದದನ್ವಯ ಸಾರಿಗೆ ಇಲಾಖೆ ಪಟ್ಟಿ ವಾಪಸ್ ಪಡೆದಿತ್ತು.
ಇದನ್ನೂ ಓದಿ: ಸಾರಿಗೆ ಇಲಾಖೆ ಮೋಟಾರ್ ವೆಹಿಕಲ್ ನೇಮಕಾತಿಯಲ್ಲಿ ಅಕ್ರಮ: ಕೋಟಿ ಹಣ, ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿಕೊಂಡ ಅಭ್ಯರ್ಥಿಗಳು
ಕೋರ್ಟ್ ಆದೇಶನದ ನಂತರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಯ್ತು. 2021ರಲ್ಲಿ ಕೆಪಿಎಸ್‌ಸಿಯಿಂದ 141 ಜನರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈ ಪಟ್ಟಿಯಲ್ಲೂ ಸುಳ್ಳು ದಾಖಲೆ ನೀಡಿದ್ದವರ ಹೆಸರುಗಳು ಮುಂದುವರೆದಿತ್ತು. 1ನೇ ಪಟ್ಟಿಯಲ್ಲಿ ಸುಳ್ಳು ದಾಖಲೆ ನೀಡಿದ್ದವರೇ 2ನೇ ಪಟ್ಟಿಯಲ್ಲೂ ಸ್ಥಾನ ಪಡೆದರು. 103ಕ್ಕೂ ಹೆಚ್ಚು ಅಭ್ಯರ್ಥಿಗಳು ಬಹುತೇಕ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಇಂತಹ 20 ಅಭ್ಯರ್ಥಿಗಳ ದಾಖಲೆ ಸಮೇತ ಮಾಹಿತಿ ಟಿವಿ9 ಗೆ ಲಭ್ಯವಾಗಿದೆ. ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ವಿಜಯಪುರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳ ನಕಲಿ ದಾಖಲೆ ಲಭ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Sat, 4 February 23