ಬೆಂಗಳೂರು: ಸಾರಿಗೆ ನೌಕರರು 15% ವೇತನ ಪರಿಷ್ಕರಣೆ ನಿರಾಕರಿಸಿದ ಬೆನ್ನಲ್ಲೇ ಕಾರ್ಮಿಕ ಇಲಾಖೆ ಆಯುಕ್ತ ಸಾರಿಗೆ ನೌಕರರ (Transport employees Association) ಜೊತೆ ಮಾರ್ಚ್ 20 ಮಧ್ಯಾಹ್ನ 2.30 ಕ್ಕೆ ಕಾರ್ಮಿಕ ಸಂಘಗಳ ಜೊತೆ ಸಂಧಾನ ಸಭೆ ನಡೆಸಲಿದ್ದಾರೆ. ಸರ್ಕಾರದ ಆದೇಶ ಮೇರೆಗೆ ಮಾರ್ಚ್ 20 ರಂದು ಕಾರ್ಮಿಕ ಸಂಘಟನೆಗಳು ಮತ್ತು ಅಧಿಕಾರಿಗಳನ್ನ ಸಂಧಾನ ಸಭೆಗೆ ಆಮಂತ್ರಿಸಲಾಗಿದೆ. ಮಾರ್ಚ್ 21 ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದ ಹಿನ್ನೆಲೆ ನೌಕರರನ್ನ ಸಮಾಧಾನ ಪಡಿಸಲು ಮತ್ತೊಂದು ರಾಜಿ ಸಭೆಗೆ ಸರ್ಕಾರ ಮುಂದಾಗಿದೆ. ಇನ್ನು ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತಾಗಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್.ವಿ. ಅನಂತ ಸುಬ್ಬರಾವ್ ಖಡಕ್ ಎಚ್ಚರಿಕೆ ನೀಡಿದ್ದರು. ಅದರಂತೆ ಸಾರಿಗೆ ನೌಕರರ ಸಂಘವು ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಿದೆ.
ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ನಾಲ್ಕೂ ನಿಗಮಗಳ ಜೊತೆ ವ್ಯವಸ್ಥಾಪಕ ನಿರ್ದೇಶಕರು ಸಭೆ ನಡೆಸಿದ್ದು, ಶೇ 14ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಸಂಘಟನೆಗಳ ಮುಖಂಡರು ಒಪ್ಪದಿರುವುದರಿಂದ ಸಂಧಾನ ಮುರಿದುಬಿದ್ದಿತ್ತು. ನಿನ್ನೆ ಬೆಳಿಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಶೇ 15ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಿದ್ದಾರೆ. ಈ ಸಂಬಂಧ ಆದೇಶವನ್ನು ನಿನ್ನೆಯೇ ಹೊರಡಿಸಲಾಗುವುದು ಎಂದಿದ್ದರು. ಯಾವುದೇ ಸಂಧಾನ ಸಭೆ ನಡೆಸದೇ ಏಕಾಏಕಿ ತೀರ್ಮಾನ ಕೈಗೊಂಡ ಸಿಎಂ ನಡೆಗೆ ವ್ಯಾಪಾಕ ವಿರೋಧ ಕೂಡ ವ್ಯಕ್ತವಾಗಿದೆ. ಮೂಲ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಅದು ಸಾಧ್ಯವಾಗದಿದ್ದರೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು ಪಟ್ಟುಹಿಡಿಯಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್: ಮಾ. 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್ಗಳು
ಮಾರ್ಚ್ 21ರಂದು ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರಿಯಲಿದೆ. ಇದರಲ್ಲಿ ಜನರಿಗೆ ತೊಂದರೆ ಮಾಡುವ ಉದ್ದೇಶ ಇಲ್ಲ. ವಜಾಗೊಂಡ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಸಾರಿಗೆ ನೌಕರರ ವೇತನ ಹೆಚ್ಚಳದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ನಾವು ಮುಷ್ಕರದಿಂದ ಹಿಂದೆ ಸರಿಯುವ ಮಾತಿಲ್ಲ. ವೇತನ ಹೆಚ್ಚಳ ಬಗ್ಗೆ ಸರ್ಕಾರದಿಂದ ನೋಟಿಫಿಕೇಷನ್ ಬಂದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮನ್ನು ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ಮುಷ್ಕರದಿಂದ ಹಿಂದೆ ಸರಿಯುವ ಮಾತೇ ಇಲ್ಲ: ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Fri, 17 March 23