ಪ್ರಯಾಣಿಕರಿಗೆ ಶಾಕ್​: ಮಾ.​ 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್​ಗಳು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರು ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೂ ಮುನ್ನ 23 ಸಾವಿರ ಬಸ್‌ ಸಂಚಾರ ಸ್ಥಗಿತ ಸಾಧ್ಯತೆ ಇದೆ.

Follow us
| Updated By: ವಿವೇಕ ಬಿರಾದಾರ

Updated on:Mar 15, 2023 | 2:22 PM

ಬೆಂಗಳೂರು: ಯುಗಾದಿ (Ugadi) ಹಬ್ಬಕ್ಕೆಂದು ಊರುಗಳಿಗೆ ತರೆಳುವ ಪ್ರಯಾಣಿಕರಿಗೆ ಶಾಕ್​ ಕಾದಿದೆ. ರಾಜ್ಯ ಸರ್ಕಾರ 6 ವರ್ಷ ಕಳೆದರೂ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡದ ಮತ್ತು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆ ಮಾರ್ಚ್​ 21 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೌಕರರು ಮುಂದಾಗಿದ್ದಾರೆ. ಈ ಮುಷ್ಕರಕ್ಕೆ 4 ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಅಂದಿನಿಂದ ​23,000 ಕೆಎಸ್​ಆರ್​ಟಿಸಿ ಬಸ್​ಗಳು (KSRTC Bus) ರಸ್ತೆಗೆ ಇಳಿಯುವುದಿಲ್ಲ ಎಂದು ಸಾರಿಗೆ ನೌಕರರ ಸಂಘ ಹೇಳಿದೆ. ಇದರಿಂದ ಮಾರ್ಚ್​ 22 ರಂದು ಯುಗಾದಿ ಹಬ್ಬಕ್ಕೆಂದು ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು (B. Sriramulu) ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ಹೇಳಿದ್ದರು. ಆದರೆ ಇನ್ನುವರೆಗು ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಇತ್ತೀಚಿಗೆ ಸರ್ಕಾರಿ ನೌಕರರು, ವೇತನ ಹೆಚ್ಚಳ ಸಂಬಂಧ ಪ್ರತಿಭಟನೆ ಮಾಡಿದ ವೇಳೆ ಸಿಎಂ ಬೊಮ್ಮಾಯಿ ಶೇ 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದರು. ಆದರೆ ನಾವು ಇಷ್ಟು ವರ್ಷಗಳಿಂದ ಪ್ರಭಟನೆ ನಡೆಸುತ್ತಿದ್ದರೂ, ಗಮನ ಹರಿಸುತ್ತಿಲ್ಲ. ಅವರು ಕೇವಲ ಶೇ 10 ರಷ್ಟು ಮಾತ್ರ ವೇತನ ಹೆಚ್ಚಿಸುವ ಭರವಸೆ ನೀಡಿದ್ದಾರೆ. ನಾವು ಅದನ್ನು ತಿರಸ್ಕರಿಸಿದ್ದೇವೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್​.ವಿ. ಅನಂತ ಸುಬ್ಬರಾವ್​ ಹೇಳಿದ್ದಾರೆ.

ಇದನ್ನೂ ಓದಿ: ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ ಮಾರ್ಚ್ 25 ರಂದು ಉದ್ಘಾಟನೆ ಸಾಧ್ಯತೆ

ಸಾರಿಗೆ ನೌಕರರ ಬೇಡಿಕೆಗಳೇನು?

  1. ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತಕ್ಕೆ ಶೇ. 25 ರಷ್ಟು ಹೆಚ್ಚಿಸಬೇಕು
  2. ವೇತನ ಹೆಚ್ಚಳವೂ ಪರಿಷ್ಕೃತ ಮೂಲ ವೇತನದ ಶೇ.3 ರಷ್ಟಿರಬೇಕು.
  3. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ದಪಡಿಸಬೇಕು
  4. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು.
  5. ಎಲ್ಲ ನೌಕರರಿಗೂ ಹಾಲಿ ಇರುವ ಬಾಟಾ ಮಾಸಿಕ, ದೈನಂದಿನ (ಕ್ಯಾಷ್,ರಿಪಾಸ್ಟ್ , ಬಟ್ಟೆ ತೊಳೆಯುವ, ರಾತ್ರಿ ಪಾಳಿ ಪ್ರೋತ್ಸಾಹ ಭತ್ಯೆ) ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು.
  6. ಹೊಲಿಗೆ ಭತ್ಯ, ಶೂ, ಜೆರ್ಸಿ, ರೈನ್ ಕೋಟ್​​ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.
  7. ಎಲ್ಲ ನಿರ್ವಾಹಕರಿಗೂ ಕ್ಯಾಪಿಯರ್‌ಗಳಿಗೆ ಸಮಾನದ ನಗದು ಪ್ರೋತ್ಸಾಹಧನ ನೀಡಬೇಕು.
  8. 2021ರ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು.
  9. ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು.
  10. ಮುಷ್ಕರದ ವೇಳೆ ಎಫ್‌ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್‌ ತೆಗೆದುಕೊಳ್ಳಬೇಕು.
  11. ಜಂಟಿ ಕ್ರಿಯಾ ಸಮಿತಿಯಿಂದ ಸಲ್ಲಿಸಿರುವ ಬೆಡಿಕೆಗಳನ್ನು ಆಡಳಿತ ವರ್ಗದವರು ಚರ್ಚಿಸಿ, ವಿಳಂಬವಿಲ್ಲದೆ ಈಡೇರಿಸಬೇಕು.

ಯುಗಾದಿ ಹಬ್ಬದ ನಿಮಿತ್ತ ತಮ್ಮ ಊರುಗಳಿಗೆ ತೆರಳಲು ಅನೇಕ ಪ್ರಯಾಣಿಕರು ಮುಂಚಿತವಾಗಿ ಸೀಟ್ ರಿಸರ್ವೇಶನ್​ ಮಾಡಿಸಿದ್ದಾರೆ. ಆದರೆ ಈ ಪ್ರತಿಭಟನೆಯಿಂದ ಅವರ ಪ್ರಯಾಣ ಮೊಟಕುಗೊಳ್ಳುವ ಸಾಧ್ಯತೆ ಇದೆ. “ನಾನು ಯುಗಾದಿ ಹಬ್ಬದ ನಿಮಿತ್ತ ಬೆಳಗಾವಿಗೆ ಹೋಗಲು ಈಗಾಗಲೆ ಸೀಟ್​ ರಿಸರ್ವೇಶನ್​ ಮಾಡಿಸಿದ್ದೇನೆ. ಆದರೆ ಈಗ ಸಾರಿಗೆ ನೌಕರರು ದಿಢೀರನೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಹೇಗೆ ಊರಿಗೆ ಹೋಗುವುದೆಂದು ತೋಚುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಪ್ರಯಾಣಿಕ ಸೂರಜ್ ಪಾಟೀಲ್​ ಎಂಬುವುರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 am, Wed, 15 March 23