KIA: ಟರ್ಮಿನಲ್ 2ರಿಂದ ವಿಸ್ತಾರ ವಿಮಾನ ಸೇವೆ; ಮಾರ್ಚ್ 26ರಿಂದ ಲಭ್ಯ
ಟಾಟಾ ಸಮೂಹದ ಸಿಂಗಾಪುರ ಏರ್ಲೈನ್ಸ್ ಬ್ರ್ಯಾಂಡ್ ಆಗಿರುವ ‘ವಿಸ್ತಾರ’ ಮಾರ್ಚ್ 26ರಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಸೇವೆ ಆರಂಭಿಸಲಿದೆ.
ಬೆಂಗಳೂರು: ಟಾಟಾ ಸಮೂಹದ (Tata Group) ಸಿಂಗಾಪುರ ಏರ್ಲೈನ್ಸ್ ಬ್ರ್ಯಾಂಡ್ ಆಗಿರುವ ‘ವಿಸ್ತಾರ (Vistara)’ ಮಾರ್ಚ್ 26ರಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಿಂದ ಸೇವೆ ಆರಂಭಿಸಲಿದೆ. ಇದರೊಂದಿಗೆ, ಟರ್ಮಿನಲ್ 2ರಿಂದ ಕಾರ್ಯಾಚರಣೆ ಆರಂಭಿಸುತ್ತಿರುವ ಮೂರನೇ ವಿಮಾನಯಾನ ಸಂಸ್ಥೆಯಾಗಲಿದೆ. ‘ಡಿಯರ್ ಬೆಂಗಳೂರು, ನಾವು ಟರ್ಮಿನಲ್ 2 ಅನ್ನು ಪ್ರವೇಶಿಸುತ್ತಿದ್ದೇವೆ. ನಮ್ಮ ವಿಮಾನಗಳು ಮಾರ್ಚ್ 26ರಿಂದ ಟರ್ಮಿನಲ್ 2ರಿಂದ ಕಾರ್ಯಾಚರಣೆ ಮಾಡಲಿವೆ’ ಎಂದು ಟ್ವೀಟ್ ಮೂಲಕ ವಿಸ್ತಾರ ಮಾಹಿತಿ ನೀಡಿದೆ. ವಿಸ್ತಾರ ವಿಮಾನಗಳು ಬೆಂಗಳೂರಿನಿಂದ ಮುಂಬೈ, ಗೋವಾ, ಡೆಹ್ರಾಡೂನ್, ದೆಹಲಿ, ಹೈದರಾಬಾದ್, ಪುಣೆ ಹಾಗೂ ಚಂಡೀಗಢಕ್ಕೆ ತೆರಳುತ್ತವೆ.
ಪ್ರಸ್ತುತ ಏರ್ ಏಷ್ಯಾ, ಸ್ಟಾರ್ ಏರ್ವೇಸ್ ಟರ್ಮಿನಲ್ 2ರಿಂದ ಕಾರ್ಯಾಚರಣೆ ನಡೆಸುತ್ತಿವೆ. ಜನವರಿ 15ರಂದು ಸ್ಟಾರ್ ಏರ್ವೇಸ್ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ತೆರಳುವ ಮೂಲಕ ಟರ್ಮಿನಲ್ 2ರಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಡ್ರಾಪ್ ಮಾಡಲು ಸುಗಮ ವಾಹನ ಆಗಮನ, ನಿರ್ಗಮನಕ್ಕಾಗಿ ಟರ್ಮಿನಲ್ 2ಗೆ ಐದು ಪಥದ ಮಾರ್ಗವೂ ಇದೆ.
ಇದನ್ನೂ ಓದಿ: Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗೆ ಸಿದ್ದವಾದ ಟರ್ಮಿನಲ್ 2
Dear Bengaluru, we are moving to Terminal 2! Our flights will now operate from T2 effective 26-March-2023. pic.twitter.com/hv4VcK0a3e
— Vistara (@airvistara) March 16, 2023
2022ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್ 2 ಅನ್ನು ಲೋಕಾರ್ಪಣೆಗೊಳಿಸಿದ್ದರು. ಭಾರತದ ಉದ್ಯಾನ ನಗರವಾಗಿ ಬೆಂಗಳೂರನ್ನು ಪ್ರದರ್ಶಿಸುವ ಥೀಮ್ನೊಂದಿಗೆ ಟರ್ಮಿನಲ್ 2 ಅನ್ನು ನಿರ್ಮಿಸಲಾಗಿದೆ. ಟರ್ಮಿನಲ್ 2 ರ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಇದು ಸರಿಸುಮಾರು 2.5 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಈ ಹೊಸ ಟರ್ಮಿನಲ್ ಮೂಲಕ ವಾರ್ಷಿಕ 25 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ. ಎರಡನೇ ಹಂತದಲ್ಲಿ ಟರ್ಮಿನಲ್ 2ಗೆ ಇನ್ನೂ 4.41 ಲಕ್ಷ ಚದರ ಮೀಟರ್ ಪ್ರದೇಶ ಸೇರ್ಪಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Fri, 17 March 23