Love Birds Review: ಹಾಸ್ಯ-ಭಾವನೆಗಳ ಲೋಕದಲ್ಲಿ ‘ಲವ್ ಬರ್ಡ್ಸ್’ ಹಾರಾಟ; ಹೆಚ್ಚಬೇಕಿತ್ತು ಆಗಸದ ವಿಸ್ತಾರ
Love Birds Movie Review: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ‘ಲವ್ ಬರ್ಡ್ಸ್’ ಸಿನಿಮಾ ಇಂದು (ಫೆಬ್ರವರಿ 17) ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ತಲುಪಲು ಸಿನಿಮಾ ಯಶಸ್ಸು ಪಡೆಯಿತೇ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಿನಿಮಾ: ಲವ್ ಬರ್ಡ್ಸ್
ಪಾತ್ರವರ್ಗ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಾಧು ಕೋಕಿಲ, ರಂಗಾಯಣ ರಘು, ಸಂಯುಕ್ತಾ ಹೊರನಾಡು ಮೊದಲಾದವರು
ನಿರ್ದೇಶನ: ಪಿಸಿ ಶೇಖರ್
ನಿರ್ಮಾಣ: ಕಡ್ಡಿಪುಡಿ ಚಂದ್ರು
ಸ್ಟಾರ್: 3/5
ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಕಾಂಬಿನೇಷನ್ ಎಂದಾಗ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟುತ್ತದೆ. ಈ ಜೋಡಿ ಈಗಾಗಲೇ ‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ 2’ ಸಿನಿಮಾ ಮೂಲಕ ಮೋಡಿ ಮಾಡಿದೆ. ಈಗ ಪತಿ-ಪತ್ನಿ ಆಗಿ ‘ಲವ್ ಬರ್ಡ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ‘ಲವ್ ಬರ್ಡ್ಸ್’ ಸಿನಿಮಾ ವಿಮರ್ಶೆ ಇಲ್ಲಿದೆ.
ದೀಪಕ್ (ಡಾರ್ಲಿಂಗ್ ಕೃಷ್ಣ) ಸಾಫ್ಟ್ವೇರ್ ಇಂಜಿನಿಯರ್. ಆತನಿಗೆ ಕೈತುಂಬ ಸಂಬಳ. ಪೂಜಾ (ಮಿಲನಾ ನಾಗರಾಜ್) ಬೂಟಿಕ್ ನಡೆಸುತ್ತಿರುತ್ತಾಳೆ. ಇಬ್ಬರೂ ಭೇಟಿ ಆಗೋದಕ್ಕೆ ಮ್ಯಾಟ್ರಿಮೋನಿ ಸೈಟ್ ಕಾರಣ ಆದರೂ ಇವರದ್ದು ಒಂತರಾ ಲವ್ ಕಮ್ ಅರೇಂಜ್ ಮ್ಯಾರೇಜ್. ಮದುವೆ ಆರಂಭದಲ್ಲಿ ಹಾಲಿನಲ್ಲಿ ನೀರು ಬೆರೆತಂತೆ ಬೆರೆಯುವ ಈ ಜೋಡಿ ನಂತರ ನೀರು ಎಣ್ಣೆಯಂತಾಗಿ ಬಿಡುತ್ತಾರೆ. ಚಿಕ್ಕದಾಗಿ ಆರಂಭ ಆಗುವ ಜಗಳ ದಿನ ಕಳೆದಂತೆ ದೊಡ್ಡದಾಗುತ್ತದೆ. ಸಣ್ಣ ವಿಚಾರಕ್ಕೂ ಕಿತ್ತಾಟ ನಡೆಯುತ್ತದೆ. ಕೊನೆಗೆ ಈ ಜಗಳ ಹಾಲಿನಲ್ಲಿ ಹುಳಿ ಹಿಂಡಿದಂತಾಗಿ ಡಿವೋರ್ಸ್ವರೆಗೆ ತಂದು ನಿಲ್ಲಿಸುತ್ತದೆ. ಆಗ ಇವರು ಭೇಟಿ ಆಗೋದು ಸಂಯುಕ್ತಾ ಹೊರನಾಡು ಅವರನ್ನು. ಇವರ ಮಧ್ಯೆ ವೈಮನಸ್ಸು ಮೂಡೋಕೆ ಕಾರಣ ಏನು? ಇಬ್ಬರೂ ಬೇರೆಬೇರೆ ಆಗುತ್ತಾರಾ ಅಥವಾ ಒಟ್ಟಾಗಿ ಸಂಸಾರ ನಡೆಸುತ್ತಾರಾ ಅನ್ನೋದನ್ನು ಸಿನಿಮಾದಲ್ಲಿ ನೋಡೇ ಕಣ್ತುಂಬಿಕೊಳ್ಳಬೇಕು.
ಒಂದಷ್ಟು ಎಮೋಷನ್ಸ್-ಒಂದಷ್ಟು ಹಾಸ್ಯ
ಕೃಷ್ಣ-ಮಿಲನಾ ಸಿನಿಮಾ ಎಂದಾಗ ಹಾಸ್ಯ ಇದ್ದೇ ಇರುತ್ತದೆ. ‘ಲವ್ ಬರ್ಡ್ಸ್’ ಸಿನಿಮಾದಲ್ಲೂ ಅದು ಮುಂದುವರಿದಿದೆ. ಮೊದಲಾರ್ಧದಲ್ಲಿ ಸಾಕಷ್ಟು ಹಾಸ್ಯ ಇದೆ. ಕೃಷ್ಣ ಮಿಲನಾ ಜತೆ ಸಾಧು ಕೋಕಿಲ, ರಂಗಾಯಣ ರಘು, ವೀಣಾ ಸುಂದರ್ ಕಾಮಿಡಿ ಪಂಚ್ ಇಷ್ಟವಾಗುತ್ತದೆ. ಉತ್ತರ ಕರ್ನಾಟಕ ಭಾಷೆಯ ಸೊಗಡಿನ ಮೂಲಕ ರಂಗಾಯಣ ರಘು ಗಮನ ಸೆಳೆಯುತ್ತಾರೆ. ಮಾಡರ್ನ್ ಮಂಡ್ಯ ಗೌಡ್ತಿ ಆಗಿ ವೀಣಾ ಸುಂದರ್ ಇಷ್ಟವಾಗುತ್ತಾರೆ. ಮುಖದ ಬಗ್ಗೆ ಯಾರಾದರೂ ನೆಗೆಟಿವ್ ಆಗಿ ಮಾತನಾಡಿದರೆ ಉರಿದು ಬೀಳುವ ವ್ಯಕ್ತಿಯಾಗಿ ಸಾಧು ಕೋಕಿಲ ಇಷ್ಟ ಆಗುತ್ತಾರೆ.
ಮೊದಲಾರ್ಧದ ಕಥೆ ಹಾಸ್ಯ, ರೊಮ್ಯಾನ್ಸ್ ಮೇಲೆ ಸಾಗಿದರೆ ದ್ವಿತೀಯಾರ್ಧ ಕೊಂಚ ಗಂಭೀರತೆ ಪಡೆದುಕೊಳ್ಳುತ್ತದೆ. ಗಂಭೀರತೆಯ ಜೊತೆಗೆ ಭಾವನೆಗಳನ್ನು ಬೆರೆಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಪಿಸಿ ಶೇಖರ್. ಕ್ಲೈಮ್ಯಾಕ್ಸ್ನಲ್ಲಿ ಒಂದೆರಡು ಟ್ವಿಸ್ಟ್ಗಳನ್ನು ನಿರ್ದೇಶಕರು ನೀಡಿದ್ದಾರೆ.
ನಟನೆಯಲ್ಲಿ ಎಲ್ಲರಿಗೂ ಫುಲ್ ಮಾರ್ಕ್ಸ್
‘ಲವ್ ಬರ್ಡ್ಸ್’ ಸಿನಿಮಾ ಕೆಲವೇ ಕೆಲವು ಪಾತ್ರಗಳ ಮೇಲೆ ಸಾಗುತ್ತದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಲವ್ ಬರ್ಡ್ಸ್ ಆಗಿ ಇಷ್ಟವಾಗುತ್ತಾರೆ. ಅವರ ಕೆಮಿಸ್ಟ್ರಿ ಇಲ್ಲಿ ಕೆಲಸ ಮಾಡಿದೆ. ಸಂಯುಕ್ತಾ ಹೊರನಾಡು ದೂರಾಗುತ್ತಿರುವ ಜೋಡಿಗಳನ್ನು ಒಂದು ಮಾಡುವ ವಕೀಲೆಯಾಗಿ ಇಷ್ಟವಾಗುತ್ತಾರೆ. ಸಾಧು ಕೋಕಿಲ, ರಂಗಾಯಣ ರಘು, ವೀಣಾ ಸುಂದರ್ ಕಾಮಿಡಿ ಪಾತ್ರದ ಮೂಲಕ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ನಾಯಕನ ಗೆಳೆಯನ ಪಾತ್ರದಲ್ಲಿ ಗೌರವ್ ಶೆಟ್ಟಿ ಗಮನ ಸೆಳೆದಿದ್ದಾರೆ.
ಉಳಿದ ವಿಚಾರಗಳು?
ಈ ಸಿನಿಮಾದಲ್ಲಿ ಹೊಸದಾಗಿ ಏನನ್ನೂ ನಿರೀಕ್ಷಿಸುವಂತಿಲ್ಲ. ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಡ್ರಾಮಾಗಳಲ್ಲಿ ಹೊಸತನವನ್ನು ಸೇರಿಸುವಲ್ಲಿ ನಿರ್ದೇಶಕರು ಪ್ರಯತ್ನಿಸಬಹುದಿತ್ತು. ದ್ವಿತೀಯಾರ್ಧ ಜಾಳು ಜಾಳು ಎನಿಸುತ್ತದೆ. ಕಥೆಯನ್ನು ಇನ್ನಷ್ಟು ಆಳವಾಗಿ ಕೊಂಡೊಯ್ಯಬಹುದಿತ್ತು. ಸಿನಿಮಾದ ಕೆಲವು ಕಡೆಗಳಲ್ಲಿ ‘ಲವ್ ಮಾಕ್ಟೇಲ್’ ಛಾಯೆ ಕಾಣಿಸುತ್ತದೆ. ಸಿನಿಮಾದಲ್ಲಿ ಬರುವ ಕೆಲವು ತಿರುವುಗಳನ್ನು ಸಿನಿಪ್ರಿಯರು ಊಹಿಸಿಬಿಡಬಹುದು. ಛಾಯಾಗ್ರಹಣದಲ್ಲಿ ಡಿ. ಶಕ್ತಿ ಶೇಖರ್ ತಮ್ಮ ಕೈಚಳಕ ತೋರಿಸಿದ್ದಾರೆ. ಸಿನಿಮಾದ ಅವಧಿ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಹರಿಸಿದ್ದು ಖುಷಿಯ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 am, Fri, 17 February 23