Womens Day 2023: ಮಹಿಳಾ ದಿನಾಚರಣೆಗೆ ವಿಶೇಷ ಸಾಂದರ್ಭಿಕ ರಜೆ ನೀಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಮಾರ್ಚ್ 20 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಸರ್ಕಾರ ಮಹಿಳಾ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆ ನೀಡಿದೆ.
ಬೆಂಗಳೂರು: ಮಾರ್ಚ್ 20 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಹಿಳಾ ದಿನಾಚರಣೆ (Women’s Day) ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರು ನಗರ ವ್ಯಾಪ್ತಿಯ ಮಹಿಳಾ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಇತ್ತೀಚೆಗೆ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಹಿಳೆಯರಿಗೆ ಭರ್ಜರಿ ರಿಯಾಯಿತಿ ನೀಡಿತ್ತು. ಸರ್ಕಾರಿ ಹೋಟೆಲ್‌ಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಿದ್ದು, ಹೋಟೆಲ್‌ಗಳ ರೂಮ್ ಬುಕ್ಕಿಂಗ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಲಾಗಿತ್ತು. ಇದರ ಜೊತೆಗೆ ಫುಡ್ ಮೇಲೂ ಸಹ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಿತ್ತು.
ಒಂದು ದಿನದ ಮಟ್ಟಿಗೆ ಸಿಇಓ ಆಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿನಿಯರು
ಕೊಪ್ಪಳ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ತೆಗೆದುಕೊಳ್ಳುತ್ತಿರುವ ವಿಧ್ಯಾರ್ಥಿನಿಯರು, ಜೊತೆಗೆ ಸಿಇಓ ಚೇರ್ ಮೇಲೆ ಕುಳಿತು ಅಧಿಕಾರ ಚಲಾಯಿಸುತ್ತಿರುವ ಯುವತಿಯರು. ಹೌದು ಹೀಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಿಇಓ ರಾಹುಲ್ ರತ್ನಂ ಪಾಂಡೆ ಅವರ ಜೊತೆಗೆ ಇರುವ ಈ ಯುವತಿಯರಿಬ್ಬರು ಯಾವುದೇ ಇಲಾಖೆಯ ಸಿಬ್ಬಂದಿಗಳಲ್ಲ. ಇವರು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಐದನೇ ಸೆಮಿಸ್ಟರ್ ಓದುತ್ತಿರುವ ಪದವಿಯ ವಿದ್ಯಾರ್ಥಿಗಳು.
ಇದನ್ನೂ ಓದಿ: Womens Day 2023: ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಅಷ್ಟಕ್ಕೂ ಈ ಇಬ್ಬರು ವಿದ್ಯಾರ್ಥಿನಿಯರು ನಿನ್ನೆ(ಮಾ.9) ಕೊಪ್ಪಳ ಜಿಲ್ಲಾ ಪಂಚಾಯತಿಯ ಸಿಇಓ ಆಗಿ ಕೆಲಸ ಮಾಡಿದರು. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ರಾಹುಲ್ ರತ್ನಂ ಪಾಂಡೆ ಅವರು ವಿಶೇಷವಾಗಿ ಆಚರಣೆ ಮಾಡಬೇಕು ಎಂಬ ಸದಾಶಯವೇ ಈ ಇಬ್ಬರು ವಿದ್ಯಾರ್ಥಿನಿಯರು ಇಂದು ಜಿಲ್ಲಾ ಪಂಚಾಯತಿಯ ಒಂದು ದಿನದ ಅಧಿಕಾರೇತರ ಸಿಇಓ ಆಗಿ ಖುರ್ಚಿಯಲ್ಲಿ ಕೂರುವಂತೆ ಮಾಡಿತು.
ಇದನ್ನೂ ಓದಿ: Women’s Day 2023: ಮಹಿಳಾ ದಿನಾಚರಣೆ ಇತಿಹಾಸ, ಮಹತ್ವ ಹಾಗೂ ಭಾರತ ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ ನೀರಾ ಆರ್ಯ ಸಾಹಸದ ಕಥೆ
ಗವಿಸಿದ್ದೇಶ್ವರ ಮಹಾವಿದ್ಯಾಲಯದ ಶಾಹಿನಾ ಹಾಗೂ ಹನುಮಕ್ಕ ಎಂಬ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲಾ ಪಂಚಾಯತಿ ಅಧಿಕಾರೇತರ ಸಿಇಓ ಆಗಿ ಕೆಲಸ ಮಾಡಿದರು. ರಾಹುಲ್ ರತ್ನಂ ಪಾಂಡೆ ಅವರು ಈ ಇಬ್ಬರು ವಿದ್ಯಾರ್ಥಿನಿಯರನ್ನು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಯೋಜನೆಗಳ ಪರಿಶೀಲನೆ, ಸಭೆ, ಸ್ವೀಪ್ ಮೀಟಿಂಗ್, ಗ್ರಾಮ ಪಂಚಾಯ್ತಿ ಭೇಟಿ ಹಾಗೂ ತಮ್ಮ ಕಚೇರಿಯಲ್ಲಿ ಜಲಜೀವನ ಮಿಷನ್, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಯೋಜನೆಗಳ ಬಗ್ಗೆ ಸಿಇಓ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿದರು.
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಬಗ್ಗೆ ಪ್ರೇರಣೆ ನೀಡುವ ದೃಷ್ಠಿಯಿಂದಾಗಿ ಈ ಇಬ್ಬರು ವಿದ್ಯಾರ್ಥಿನಿಯರನ್ನು ಒಂದು ದಿನದ ಅಧಿಕಾರೇತರ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್ ರತ್ನಂ ಪಾಂಡೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Fri, 17 March 23