ಆನೇಕಲ್, ಮಾರ್ಚ್ 24: ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು (Mekedatu Project) ತಡೆಯುವುದಾಗಿ ಡಿಕೆಎಂಕೆ (DMK Party) ತನ್ನ ಲೋಕಸಭಾ ಪ್ರಾಣಾಳಿಕೆಯಲ್ಲಿ ಹೊರಡಿಸಿರುವುದನ್ನು ವಿರೋಧಿಸಿ ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ (Vatal Nagar) ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವಾ, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕುಮಾರ್ ಭಾಗಿಯಾಗಿದ್ದರು.
ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಮೇಕೆದಾಟು ಯೋಜನೆಗೆ ತಮಿಳುನಾಡು (Tamilanadu) ರಾಜಕಾರಣಿಗಳು ಏಕೆ ವಿರೋಧ ಮಾಡುತ್ತಿದ್ದೀರಿ? ಕರುಣಾನಿಧಿ, ಜಯಲಲಿತಾ, ಎಂಜಿಆರ್ ಕಾಲದಿಂದಲೂ ನಾವು ಹೋರಾಟ ಮಾಡುತ್ತಿದ್ದೆವೆ. ಮೇಕೆದಾಟು ಯೋಜನೆಯಿಂದ ನಿಮಗೆ ಆಗುವ ನಷ್ಟ ಏನು. ಅದನ್ನು ಮೊದಲು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಮಳೆಗಾಲದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಯುತ್ತೇವೆ. ನಿಮ್ಮ ಡ್ಯಾಮ್ಗಳಿಗೂ ನೀರನ್ನು ಹರಿಸುತ್ತೇವೆ. ಆದರೆ ಸ್ಟಾಲಿನ್ ತಮಿಳುನಾಡು ಜನರನ್ನು ರಾಜ್ಯದ ವಿರುದ್ಧ ಎತ್ತುಕಟ್ಟುತ್ತಿದ್ದಾರೆ. ನಾವು ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದರು.
ಇದನ್ನೂ ಓದಿ: ಇಂಡಿಯಾ ಕೂಟ ಗೆದ್ರೆ ಮೇಕೆದಾಟು ಬಂದ್ ಎಂದ ಡಿಎಂಕೆ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
ಸದ್ಯ ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲ. ಬೆಂಗಳೂರಿನಲ್ಲೂ ತಮಿಳರು ಇದ್ದಾರೆ. ಸ್ಟಾಲಿನ್ ಅವರೆ ನಿಮ್ಮ ತಮಿಳರನ್ನು ವಾಪಸ್ ಕರೆಸಿಕೊಳ್ಳಿ. ನಮ್ಮ ರಾಜ್ಯ ಸರ್ಕಾರ ತಮಿಳುನಾಡಿಗೆ ಈಗಾಗಲೇ ನೀರು ಹರಿಸಿದೆ. ರಾಜ್ಯದ ಜನರ ಹಿತ ಮರೆತು ಅಧಿಕಾರಕ್ಕಾಗಿ ನೀರು ಹರಿಸಿದ್ದಾರೆ. ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳು ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದರು. ಈಗ ಅವರೇ ಯೋಜನೆ ಮರೆತು ನೀರು ಬಿಟ್ಟಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ನಮ್ಮ ರಾಜ್ಯದ ಸಿನಿಮಾ ನಟರು ಕಾವೇರಿ ಹೋರಾಟದಲ್ಲಿ ಮತ್ತು ರೈತರ ಹೋರಾಟದಲ್ಲಿ ಬೀದಿಗೆ ಬರಬೇಕು. ತಮಿಳು ನಟರಾದ ರಜನಿಕಾಂತ್, ಕಮಲ್ ಹಾಸನ್ ಸ್ಟಾಲಿನ್ಗೆ ಮೇಕೆದಾಟು ಯೋಜನೆ ಜಾರಿಗೆ ಅಡ್ಡಿಪಡಿಸದಂತೆ ಹೇಳಬೇಕು. ಇಲ್ಲವಾದರೆ ರಜನಿಕಾಂತ್, ಕಮಲ್ ಹಾಸನ್ ನಮ್ಮ ರಾಜ್ಯಕ್ಕೆ ಬರಬೇಡಿ. ರಾಜ್ಯದಲ್ಲಿ ತಮಿಳು ಸಿನಿಮಾಗಳನ್ನು ಬ್ಯಾನ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ