ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ ಚುನಾವಣೆ ಭಾನುವಾರ (ಡಿ.19) ನಡೆಯಿತು. ನೂತನ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ 1900ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಸ್ಪರ್ಧೆಯೊಡ್ಡಿದ ನಿಕಟಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ವಿವೇಕ್ ರೆಡ್ಡಿ ಪರವಾಗಿ 4804 ಮತಗಳು, ಎ.ಪಿ.ರಂಗನಾಥ್ ಪರವಾಗಿ 2894 ಮತಗಳು, ರಾಜಣ್ಣ ಪರವಾಗಿ 2545 ಮತಗಳು ಹಾಗೂ ಎಚ್.ಸಿ.ಶಿವರಾಮು ಪರವಾಗಿ 878 ಮತಗಳು ಚಲಾವಣೆಯಾಗಿದ್ದವು.
ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ವಕೀಲರ ಸಂಘ ಎನಿಸಿದೆ. ಸಿಟಿ ಸಿವಿಲ್ ಕೋರ್ಟ್ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ವಕೀಲರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನಗಳೊಂದಿಗೆ ಹೈಕೋರ್ಟ್ನ 7, ಮೆಯೊಹಾಲ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಘಟಕಗಳ ತಲಾ 5 ಹಾಗೂ ಸಿಟಿ ಸಿವಿಲ್ ಕೋರ್ಟ್ನ 12 ಕಾರ್ಯಕಾರಿ ಸದಸ್ಯ ಸಮಿತಿ ಸ್ಥಾನಗಳಿಗೂ ಚುನಾವಣೆ ನಡೆಯಿತು.
ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಎ.ಪಿ.ರಂಗನಾಥ್, ಮಾಜಿ ಅಧ್ಯಕ್ಷರಾದ ಎಚ್.ಸಿ.ಶಿವರಾಮ್, ರಾಜ್ಯ ವಕೀಲರ ಪರಿಷತ್ ಸದಸ್ಯ ಆರ್.ರಾಜಣ್ಣ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಖಜಾಂಚಿ ಸ್ಥಾನಕ್ಕೆ 10 ಮಂದಿ, ಆಡಳಿತ ಮಂಡಳಿಯ 29 ಸದಸ್ಯ ಸ್ಥಾನಗಳಿಗೆ ಒಟ್ಟು 112 ಮಂದಿ ಆಕಾಂಕ್ಷಿಗಳಿದ್ದರು. ಸಂಘದ ಒಟ್ಟು 32 ಸ್ಥಾನಗಳಿಗೆ 134 ವಕೀಲರು ಸ್ಪರ್ಧಿಸಿದ್ದರು. ವಕೀಲರ ಸಂಘದ ನಾಲ್ಕೂ ಘಟಕಗಳಿಂದ 16,568 ವಕೀಲರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.
ಇದನ್ನೂ ಓದಿ: ವಕೀಲರ ಮುಷ್ಕರ ಮತ್ತು ಕೋರ್ಟ್ ಬಹಿಷ್ಕಾರಗಳನ್ನು ತಡೆಯಲು ನಿಯಮ ರೂಪಿಸಲಿದ್ದೇವೆ: ಬಾರ್ ಕೌನ್ಸಿಲ್ ಆಫ್ ಇಂಡಿಯಾ
ಇದನ್ನೂ ಓದಿ: ಮುಂದಿನ ಆದೇಶದವರೆಗೂ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಬೇಡ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ