ಬೆಂಗಳೂರು, ಮೇ 21: ಬೆಂಗಳೂರಿನಲ್ಲಿ (Bengaluru) ಮಳೆಯ ಜತೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಡೆಂಘಿ ಜೊತೆಗೆ ಈಗ ವೆಸ್ಟ್ ನೈಲ್ ಜ್ವರದ (West Nile Fever) ಆತಂಕ ಹೆಚ್ಚಾಗಿದೆ. ಬೇಸಗೆ ಮಳೆಯ ಬೆನ್ನಲ್ಲೇ ನಗರದಲ್ಲಿ ಡೆಂಘಿ ಕಾಟ ಶುರುವಾಗಿತ್ತು. ಅದರ ಜೊತೆ ಜೊತೆಗೆ ಈಗ ಕ್ಯೂಲೆಕ್ಸ್ ಸೊಳ್ಳೆಗಳಿಂದ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ. ಕೇರಳ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ವೆಸ್ಟ್ ನೈಲ್ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ತಮಿಳನಾಡಿನ ಬಳಿಕ ಈಗ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ವರದಿಯಾಗಿದೆ. ಇದರಿಂದ ಬೆಂಗಳೂರಿಗೂ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ.
ಕಾಲರಾ, ಡೆಂಘಿ ಜ್ವರ, ನಿಫಾ, ಹಕ್ಕಿಜ್ವರ, ಹಂದಿಜ್ವರ ನಂತರ ಈಗ ವೆಸ್ಟ್ ನೈಲ್ ಜ್ವರದ ಸರದಿ ಶುರುವಾಗಿದೆ. ನೆರೆಯ ತಮಿಳನಾಡು ಹಾಗೂ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ವೆಸ್ಟ್ ನೈಲ್ ಜ್ವರ ಸಮಾನ್ಯ ಜ್ವರಕ್ಕಿಂತ ವಿಭಿನ್ನವಾಗಿದ್ದು ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳಿಂದ ಈ ವೆಸ್ಟ್ ನೈಲ್ ಜ್ವರ ಹರಡುತ್ತಿದೆ. ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಕಂಡುಬರುತ್ತಿವೆ. ಜೊತೆಗೆ ಸಮಸ್ಯೆ ಗಂಭೀರವಾದರೆ ತೀವ್ರ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತೆ ಅನುಭವ, ದಿಗ್ಭ್ರಮೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ. ಇದರ ಗಂಭೀರತೆ ಹೆಚ್ಚಾದಂತೆ ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು ಕೂಡಾ ಉಂಟಾಗಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ವೆಸ್ಟ್ ನೈಲ್ ಜ್ವರದಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ಇದೇ ದೊಡ್ಡ ಸಮಸ್ಯೆಯಾಗಿದೆ. ಅಂಗಾಂಗ ಕಸಿ, ರಕ್ತ ವರ್ಗಾವಣೆ ಅಥವಾ ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಈ ವೈರಸ್ ಹರಡುವ ಸಾಧ್ಯತೆ ಇದ್ದು ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯ ಇಲಾಖೆ ವೆಸ್ಟ್ ನೈಲ್ ಜ್ವರದ ಬಗ್ಗೆ ಸದ್ಯ ಯಾವುದೇ ಆತಂಕ ಇಲ್ಲ ಎಂದಿದೆ.
ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಡೆಂಘಿ ಏರಿಕೆ ಆತಂಕ ಒಂದಡೇ ಮತ್ತೊಂದಡೆ ಜ್ವರದ ಪ್ರಕರಣ ಆತಂಕ ಹಚ್ಚಿಸಿದೆ. ಹೀಗಾಗಿ ಜನರು ಮನೆ ಸುತ್ತಮುತ್ತ ನೈರ್ಮಲ್ಯ ಕಾಪಾಡುವುದು ಈ ಹೊತ್ತಿನಲ್ಲಿ ಅಗತ್ಯ. ಮಳೆ ನೀರು ನಿಲ್ಲದಂತೆ ಜಾಗೃತೆ ವಹಿಸುವುದು ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.
ಆದಷ್ಟು ಮನೆಯಲ್ಲಿ ಮಲಗುವ ಹೊತ್ತಿನಲ್ಲಿ ಸೊಳ್ಳೆ ಪರದೆ ಹಾಕುವುದು, ಬಿಸಿ ನೀರನ್ನೇ ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜ್ವರ ಬಂದು ಮೂರನೇ ದಿನಕ್ಕೆ ಬಿಟ್ಟು ಮತ್ತೆ ಜ್ವರ ಮರುಕಳಿಸಿದರೆ, ಇದರ ಜತೆ ವಾಂತಿ ಇದ್ದರೆ ಟೆಸ್ಟ್ ಮಾಡಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ವೆಸ್ಟ್ ನೈಲ್ ಜ್ವರದ ಕುರಿತ ಇನ್ನಷ್ಟು ಮಾಹಿತಿಗೆ ಓದಿ: ವೆಸ್ಟ್ ನೈಲ್ ಜ್ವರ: ರೋಗಲಕ್ಷಣ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿ ಇಲ್ಲಿದೆ
ಇತ್ತೀಚೆಗಷ್ಟೇ ಕೇರಳದಿಂದ ರಾಜ್ಯಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮೈಸೂರಿನ ಎಚ್ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ನಲ್ಲಿ ಆರೋಗ್ಯಾಧಿಕಾರಿಗಳ ತಪಾಸಣೆ ಹಾಗೂ ಜನಜಾಗೃತಿ ಹಮ್ಮಿಕೊಳ್ಳಲಾಗಿತ್ತು.
ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ