West Nile Fever: ಕೇರಳದಲ್ಲಿ ಹೆಚ್ಚುತ್ತಿದೆ ವೆಸ್ಟ್ ನೈಲ್ ಜ್ವರ, ಮೈಸೂರಿನಲ್ಲಿ ಹೆಚ್ಚಿದ ಆತಂಕ
West Nile Fever Symptoms; ಬೇಸಿಗೆ ಮಳೆ ಮತ್ತು ಮಳೆಗಾಲ ಸಮೀಪಿಸುತ್ತಿರುವ ಸುಳಿವು ದೊರೆಯುತ್ತಿದ್ದಂತೆಯೇ ವಿವಿಧ ಸೋಂಕುಗಳ ಹರಡುವಿಕೆ ಕೂಡ ಹೆಚ್ಚಾಗಿದೆ. ನೆರೆಯ ಕೇರಳ ರಾಜ್ಯದಲ್ಲಿ ಇದೀಗ ವೆಸ್ಟ್ ನೈಲ್ ಜ್ವರ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿಯೂ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಜ್ವರದ ಲಕ್ಷಣಗಳೇನು, ಸೋಂಕು ತಡೆಗೆ ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಇತ್ಯಾದಿ ವಿವರ ಇಲ್ಲಿದೆ.
ಮೈಸೂರು, ಮೇ 18: ನೆರೆಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ (West Nile fever) ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿದ್ದು, ಆ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದೆ. ಮೈಸೂರು (Mysuru) ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಎಚ್ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ನಲ್ಲಿ (Bavali Check Post) ಆರೋಗ್ಯಾಧಿಕಾರಿಗಳ ತಪಾಸಣೆ ಹಾಗೂ ಜನಜಾಗೃತಿ ಮುಂದುವರಿದಿದೆ.
ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ವೈರಸ್ ಕೇರಳದಲ್ಲಿ ಕಾಣಿಸಿಕೊಂಡು ಅಲ್ಲಿಂದ ರಾಜ್ಯಕ್ಕೂ ಹರಡಿತ್ತು. ಹೀಗಾಗಿ ಕೇರಳಕ್ಕೆ ಭೇಟಿ ನೀಡಿ ಮೈಸೂರಿಗೆ ವಾಪಸ್ಸಾಗುವವರ ಬಗ್ಗೆ ನಿಗಾ ಇಡಲಾಗುತ್ತಿದೆ. ವೆಸ್ಟ್ ನೈಲ್ ಜ್ವರದ ಬಗ್ಗೆ ಎಚ್ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿಗಳಿಂದ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎಚ್ಡಿ ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದಲ್ಲಿ ವೆಸ್ಟ್ ನೈಲ್ ಜ್ವರ ಹರಡುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾಮಗಳಿಗೆ ಭೇಟಿ ನೀಡಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಏನಿದು ವೆಸ್ಟ್ ನೈಲ್ ಜ್ವರ?
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು ನೀಡಿರುವ ಮಾಹಿತಿಯ ಪ್ರಕಾರ ವೆಸ್ಟ್ ನೈಲ್ ಜ್ವರ ಎಂದರೆ, ಸೊಳ್ಳೆಗಳ ಕಡಿತದ ಮೂಲಕ ಹರಡುವ ವೈರಸ್ ಸೋಂಕಾಗಿದೆ. ಸೋಂಕು ಹರಡುವಿಕೆ ಸಾಮಾನ್ಯವಾಗಿ ಬೇಸಿಗೆ ಮಳೆಯ ಸಂದರ್ಭದಲ್ಲಿ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ವೆಸ್ಟ್ ನೈಲ್ ಸೋಂಕಿನ ಲಕ್ಷಣಗಳೇನು?
ಅಧಿಕ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ನರಗಳಲ್ಲಿ ಮರಗಟ್ಟುವಿಕೆ ಅನುಭವವಾಗುವುದು ವೆಸ್ಟ್ ನೈಲ್ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಕೆಲವೊಂದು ಸಂದರ್ಭಗಳಲ್ಲಿ ಸೋಂಕಿತರು ಕೋಮಾಗೆ ಜಾರುವ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವೂ ಇದೆ. ಹೆಚ್ಚಿನ ಸೋಂಕಿತರಲ್ಲಿ ಕೆಲವೊಮ್ಮೆ ರೋಗ ಲಕ್ಷಣಗಳು ಕಂಡುಬರದೇ ಇರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಕೇರಳದಲ್ಲಿ ಮತ್ತೆ ಮೆದುಳು ಸೋಂಕು ಭೀತಿ; ರೋಗ ಲಕ್ಷಣಗಳೇನು?
ಸೊಳ್ಳಗಳ ಕಡಿತದಿಂದ ತಪ್ಪಿಸಿಕೊಳ್ಳುವುದೇ ಸೋಂಕು ತಡೆಗೆ ಇರುವ ಪ್ರಮುಖ ಮಾರ್ಗೋಪಾಯವಾಗಿದೆ. ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗದಂತೆ ನೋಡಿಕೊಳ್ಳುವುದು, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು.
ಚಿಕಿತ್ಸೆ ಏನು?
ವೆಸ್ಟ್ ನೈಲ್ ಸೋಂಕಿಗೆ ಪ್ರತ್ಯೇಕ ಚಿಕಿತ್ಸೆ ಎಂದು ಇಲ್ಲ. ಇತರ ವೈರಸ್ ಸೋಂಕುಗಳಿಗೆ ನೀಡುವಂತೆ ರೋಗದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sat, 18 May 24