ಇಂದು ಗ್ರಾಮೀಣ ಭಾರತ್ ಬಂದ್: ಕರ್ನಾಟಕದಲ್ಲಿ ಏನೇನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ
Bharat bandh today: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ಕರೆ ನೀಡಿರುವ ಗ್ರಾಮೀಣ ಭಾರತ ಬಂದ್ ಪ್ರಭಾವ ಕರ್ನಾಟಕದ ಮೇಲೂ ಆಗಲಿದೆಯೇ? ರಾಜ್ಯದಲ್ಲಿ ಏನೇನು ಸೇವೆಗಳ ಮೇಲೆ ಬಂದ್ ಪರಿಣಾಮ ಬೀರಲಿದೆ? ಯಾವೆಲ್ಲ ಸೇವೆಗಳು ಲಭ್ಯವಿರಲಿವೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 16: ದೇಶಾದ್ಯಂತ ರೈತರ ಸಾಲಮನ್ನಾ, ರೈತರು, ಕೃಷಿ ಕಾರ್ಮಿಕರಿಗೆ ಪಿಂಚಣಿ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭದ್ರತೆ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ದೆಹಲಿ ಚಲೋ (Delhi Chalo) ನಡೆಸ್ತಿದ್ದಾರೆ. ಹರಿಯಾಣದ ಶಂಭು ಗಡಿಯಲ್ಲಿ ಠಿಕಾಣಿ ಹೂಡಿರೋ ರೈತರು ಯಾವುದೇ ಕಾರಣಕ್ಕೂ ಹಿಂದೆ ಸರಿಯೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರೈತರ ಮನವೊಲಿಸಲು ಕೇಂದ್ರ ಸರ್ಕಾರ ಸಭೆ ಮೇಲೆ ಸಭೆ ಮಾಡುತ್ತಾ ಕಸರತ್ತು ನಡೆಸ್ತಿದೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹೊತ್ತಲ್ಲೇ ಇಂದು ದೇಶಾದ್ಯಂತ ಗ್ರಾಮೀಣ ಬಂದ್‌ಗೆ (Rural India Bandh) ಕರೆ ನೀಡಲಾಗಿದೆ. ಬಂದ್ ಪರಿಣಾಮ ಕರ್ನಾಟಕದಲ್ಲಿ (Karnataka) ಹೇಗಿರಬಹುದು ಎಂಬ ಮಾಹಿತಿ ಇಲ್ಲಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಬಂದ್
ರಾಜಕೀಯೇತರ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಛಾ ಸಂಘಟನೆಗಳು ಇಂದು ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿವೆ. ಇಂದು ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಗ್ರಾಮೀಣ ಭಾರತ್ ಬಂದ್ ಕರೆ ನೀಡಲಾಗಿದೆ. ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ. ಪಂಜಾಬ್, ಹರಿಯಾಣದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಲಿದ್ದು, ರಸ್ತೆ ಸಾರಿಗೆ ಸುಮಾರು 4 ಗಂಟೆ ಕಾಲ ಸ್ತಬ್ಧ ಆಗುವ ಸಾಧ್ಯತೆ ಇದೆ.
ಕರ್ನಾಟಕಕ್ಕೂ ತಟ್ಟುತ್ತಾ ಭಾರತ್ ಬಂದ್ ಬಿಸಿ?
ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಗ್ರಾಮೀಣ ಭಾರತ್ ಬಂದ್‌ಗೆ ಬೆಂಬಲ ನೀಡಿವೆ. ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕೂಡಾ ಬಂದ್‌ಗೆ ಬೆಂಬಲಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕೂಡಾ ಬಂದ್ ಬೆಂಬಲಿಸಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಇಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ರಸ್ತೆ ತಡೆ ಚಳವಳಿ ನಡೆಸಲು ಕರೆ ನೀಡಿದ್ಧಾರೆ. ಇದಲ್ಲದೆ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಬಂದ್ ಆಚರಿಸೋಕೆ ನಿರ್ಧರಿಸಿವೆ.
ಕರ್ನಾಟಕದಲ್ಲಿ ಇಂದು ಏನಿರುತ್ತೆ? ಏನಿರಲ್ಲ?
ಕರ್ನಾಟಕಕ್ಕೆ ಭಾರತ್ ಬಂದ್ ಬಿಸಿ ಅಷ್ಟಾಗಿ ತಟ್ಟುವಂತೆ ಕಾಣುತ್ತಿಲ್ಲ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿರುವ ಸಾಧ್ಯತೆ ಇದೆ. ಜನ ಜೀವನ ಬಹುತೇಕ ಸಾಮಾನ್ಯವಾಗಿರಲಿದೆ. ರಾಜ್ಯ ಬಜೆಟ್ ಕೂಡಾ ಮಂಡನೆ ಆಗುತ್ತಿದೆ. ವಿಧಾನಸೌಧದ ಕಾರ್ಯ ಕಲಾಪ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆ ಸಾಮಾನ್ಯವಾಗಿರುವ ಸಾಧ್ಯತೆ ಇದೆ. ಶಾಲೆ, ಕಾಲೇಜ್‌ಗಳಿಗೆ ಯಾವುದೇ ರಜೆ ಘೋಷಿಸಿಲ್ಲ. ಕಾರ್ಮಿಕ ಸಂಘಟನೆಗಳು ಬಂದ್ ಕುರಿತಾಗಿ ಪ್ರತಿಕ್ರಿಯೆ ನೀಡದ ಕಾರಣ ಬಸ್ ಸಂಚಾರ ಕೂಡಾ ಎಂದಿನಂತೆ ಇರಲಿದೆ. ಮೆಟ್ರೋ ಹಾಗೂ ಭಾರತೀಯ ರೈಲ್ವೆ ಸೇವೆ ಕೂಡಾ ಕರ್ನಾಟಕ ರಾಜ್ಯಾದ್ಯಂತ ಎಂದಿನಂತೆಯೇ ಇರಲಿದೆ.
ಬ್ಯಾಂಕ್, ಪೋಸ್ಟ್ ಆಫೀಸ್‌ಗಳು ತೆರೆದಿರುತ್ತಾ?
ರಾಜ್ಯದಲ್ಲಿ ಕೇಂದ್ರ ಸ್ವಾಮ್ಯದ ಸರ್ಕಾರಿ ಬ್ಯಾಂಕ್‌ಗಳು ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತವೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳ ಕಾರ್ಯ ನಿರ್ವಹಣೆ ಸಹಜವಾಗಿ ಇರಲಿದೆ. ಪೋಸ್ಟ್ ಆಫೀಸ್ ಸೇರಿ ಕೇಂದ್ರಸರ್ಕಾರದ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ.
ಇದನ್ನೂ ಓದಿ: ಗ್ರಾಮೀಣ ಭಾರತ್ ಬಂದ್, ರಾಷ್ಟ್ರವ್ಯಾಪಿ ಹೆದ್ದಾರಿ ತಡೆಗೆ ರೈತರ ಕರೆ
ಇಂದು ತರಕಾರಿ, ಇತರೆ ಕೃಷಿ ಉತ್ಪನ್ನಗಳ ಮಾರಾಟ ಬಂದ್!
ಗ್ರಾಮೀಣ ಭಾರತ್ ಬಂದ್‌ನಲ್ಲಿ ಪ್ರಮುಖವಾಗಿ ಕೃಷಿ ಚಟುವಟಿಕೆಗಳು, ಕೃಷಿ ಉತ್ಪನ್ನಗಳು, ತರಕಾರಿ, ಆಹಾರ ಧಾನ್ಯ, ಹಣ್ಣು ಸೇರಿದಂತೆ ಬೇಳೆ ಕಾಳುಗಳು ಮಾರುಕಟ್ಟೆಗಳು, ವಿತರಣೆ, ಸಾಗಾಣೆ ಬಂದ್ ಆಗಲಿದೆ. ಹೆದ್ದಾರಿಗಳನ್ನು ಬಂದ್ ಮಾಡಲಿರುವ ಕಾರಣ ಸಂಚಾರಕ್ಕೂ ಅಡ್ಡಿಯಾಗಲಿದೆ. ಬಂದ್ ವೇಳೆ ಗ್ರಾಮಗಳ ಜನರು ತಮ್ಮೆಲ್ಲ ಕೃಷಿ ಚಟುವಟಿಕೆಗಳು ಹಾಗೂ ನರೇಗಾ ಗ್ರಾಮೀಣ ಕೆಲಸಗಳನ್ನು ಮಾಡದಂತೆ ಕರೆ ನೀಡಲಾಗಿದೆ. ತರಕಾರಿಗಳು ಮತ್ತು ಇತರ ಬೆಳೆಗಳ ಮಾರಾಟ, ಗ್ರಾಮೀಣ ಅಂಗಡಿಗಳು, ಧಾನ್ಯ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳ ಬಂದ್‌ಗೂ ಕರೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ