ಬೀದರ್: ಕೇಂದ್ರ ಮಂತ್ರಿ, ರಾಜ್ಯ ಮಂತ್ರಿ ಜಿಲ್ಲೆಯವರೇ ಇದ್ದರೂ ಮಾಂಜ್ರಾ ನೀರಾವರಿ ಯೋಜನೆ ವಿಫಲವಾಗಿದೆ, ರೈತರಿಗೆ ಒಂದು ತೊಟ್ಟು ನೀರು ಸಿಗುತ್ತಿಲ್ಲ!

| Updated By: ಸಾಧು ಶ್ರೀನಾಥ್​

Updated on: Jan 12, 2023 | 4:33 PM

Manjira river: ಈ ಬ್ಯಾರೇಜ್ ನಿರ್ಮಾಣ ಪ್ರತಿವರ್ಷ ರಿಪೇರಿಗೆಂದು ಸೇರಿ 300 ಕೋಟಿಗೂ ಅಧಿಕ ಹಣ ಖರ್ಚಾಗಿದ್ದರೂ ಇದುವರೆಗೂ ಕೂಡಾ ಬ್ಯಾರೇಜ್ ನಲ್ಲಿ ನೀರು ನಿಂತಿಲ್ಲ. ಈ ಬ್ಯಾರೇಜ್ ಗಳು ನಿರ್ಮಾಣವಾಗಿ 10 ವರ್ಷಗಳು ಉರುಳಿದರೂ ಒಂದೇ ಒಂದು ಹನಿ ನೀರು ಕೂಡಾ ನಿಂತಿಲ್ಲ.

ಬೀದರ್: ಕೇಂದ್ರ ಮಂತ್ರಿ, ರಾಜ್ಯ ಮಂತ್ರಿ ಜಿಲ್ಲೆಯವರೇ ಇದ್ದರೂ ಮಾಂಜ್ರಾ ನೀರಾವರಿ ಯೋಜನೆ ವಿಫಲವಾಗಿದೆ, ರೈತರಿಗೆ ಒಂದು ತೊಟ್ಟು ನೀರು ಸಿಗುತ್ತಿಲ್ಲ!
ಕೇಂದ್ರ ಮಂತ್ರಿ, ರಾಜ್ಯ ಮಂತ್ರಿ ಜಿಲ್ಲೆಯವರೇ ಇದ್ದರೂ ಮಾಂಜ್ರಾ ನೀರಾವರಿ ಯೋಜನೆ ವಿಫಲವಾಗಿದೆ
Follow us on

ಆ ಭಾಗದ ರೈತರ ಜಮೀನಿಗೆ ನೀರು ಹರಿಸುವ ಉದ್ದೇಶದಿಂದ ಅಲ್ಲಿ ಬೃಹತ್ ಬ್ರಿಡ್ಜ್ ಕಂ ಬ್ಯಾರೇಜ್ (Bridge – Barrage) ನಿರ್ಮಿಸಲಾಯಿತು. ಈ ಬೃಹತ್ ಯೋಜನೆಗಾಗಿ ಸರಕಾರ ನೂರಾರು ಕೋಟಿ ರೂಪಾಯಿ ಹಣವನ್ನ ವೆಚ್ಚ ಮಾಡಿತು. ಆದರೆ ರೈತರ (Farmers) ಜಮೀನು ಹಸಿರಾಗಲಿಲ್ಲ, ಜನರ ನೀರಿನ ದಾಹ ಕೂಡಾ ಇಂಗಲಿಲ್ಲ ನೀರು ವ್ಯರ್ಥವಾಗಿ ಹರಿದು ತೆಲಗಾಂಣ ರಾಜ್ಯ ಸೇರುತ್ತಿದೆ. ಬೀದರ್ (Bidar) ಜಿಲ್ಲೆಯ ರೈತರ ನೀರಾವರಿ ಕನಸು ನುಚ್ಚುನೂರು… 260 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಂಜ್ರಾ ನದಿಗೆ (Manjira river) ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್ ನಲ್ಲಿ ನಿಂತಿಲ್ಲ ನೀರು. 12,672 ಹೆಕ್ಟೇರ್ ಜಮೀನಿಗೆ ‌ನೀರು, ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು (Drinking Water) ಕೊಡುವ ಉದ್ದೇಶದಿಂದ ನಿರ್ಮಿದ ಬೃಹತ್ ಬ್ಯಾರೇಜ್ ಗಳು ಅವು. ರಾಜಕಾರಣಿಗಳು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಾಲ್ಕು ಬ್ಯಾರೇಜ್ ನಲ್ಲಿ ನಿಲ್ಲಬೇಕಾಗಿದ್ದ 4.80 ಟಿಎಂಸಿ ನೀರು ಹರಿದು ಹೋಗುತ್ತಿದೆ ವ್ಯರ್ಥವಾಗಿ.

ಹೌದು ಬೀದರ್ ಜಿಲ್ಲೆಯ ರಾಜಕಾರಣಿಗಳ-ಅಧಿಕಾರಿಗಳ ಇಚ್ಚಾ ಶಕ್ತಿಯ ಕೊರತೆಯಿಂದ 260 ಕೋಟಿ ರೂಪಾಯಿ ವೆಚ್ಚದ ಬೃಹತ್ ನೀರಾವರಿ ಯೋಜನೆಯೊಂದು ವಿಫಲವಾಗಿದೆ. ಅಕ್ಟೋಬರ್ 10 -2013 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭಾಲ್ಕಿ ತಾಲೂಕಿನ ಮಾಣಿಕೇಶ್ವರ, ಜಿರಗಿಹಾಳ, ಚಂದಾಪುರ ಹಾಗೂ ಔರಾದ್ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಇರುವ ಮಾಂಜ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಬ್ಯಾರೇಜ್ ಗಳನ್ನ ಉದ್ಘಾಟನೆ ಮಾಡಿದ್ದರು.

ಈ ಬ್ಯಾರೇಜ್ ನಿರ್ಮಾಣಕ್ಕೆ ಸುಮಾರು 260 ಕೋಟಿ ರೂಪಾಯಿ ವೆಚ್ಚವಾಗಿದ್ದು ಪ್ರತಿವರ್ಷ ರಿಪೇರಿಗೆಂದು ಸೇರಿ ಸುಮಾರು 300 ಕೋಟಿಗೂ ಅಧಿಕ ಹಣ ಖರ್ಚಾಗಿದ್ದರೂ ಇದುವರೆಗೂ ಕೂಡಾ ಬ್ಯಾರೇಜ್ ನಲ್ಲಿ ನೀರು ನಿಂತಿಲ್ಲ. ಈ ಬ್ಯಾರೇಜ್ ಗಳು ನಿರ್ಮಾಣವಾಗಿ ಲೋಕಾರ್ಪಣೆಗೊಂಡು 10 ವರ್ಷಗಳು ಉರುಳಿದರೂ ಒಂದೇ ಒಂದು ಹನಿ ನೀರು ಕೂಡಾ ನಿಂತಿಲ್ಲ. ಹೀಗಾಗಿ ಬೃಹತ್ ನೀರಾವರಿ ಕನಸನ್ನ ಕಂಡಿದ್ದ ಆ ಭಾಗದ ರೈತರಿಗೆ ಭಾರಿ ನಿರಾಸೆಯುಂಟು ಮಾಡಿದ್ದು ಬ್ಯಾರೇಜ್ ನಲ್ಲಿ ನೀರು ನಿಲ್ಲಿಸಿ ರೈತರಿಗೆ ನೀರಾವರಿ ಸೌಲಭ್ಯವನ್ನ ಕಲ್ಪಿಸಿ ಎಂದು ಈ ಭಾಗದ ರೈತರು ಸರಕಾರಕ್ಕೆ ಸ್ಥಳೀಯ ಶಾಸಕರಿಗೆ ವಿನಂತಿಸುತ್ತಿದ್ದಾರೆ.

1- ಜೀರಗಿಹಾಳ್ ಬ್ಯಾರೇಜ್: ನೀರಿನ ಸಂಗ್ರಹ ಸಾಮಥ್ಯ -0.78 ಟಿಎಂಸಿ, ಫಲಾನುಭವಿಗಳ ಪ್ರದೇಶ ಹೆಕ್ಟರ್ ನಲ್ಲಿ -1,980

2-ಮಾಣೀಕೇಶ್ವರ ಬ್ಯಾರೇಜ್ – ನೀರಿನ ಸಂಗ್ರಹ ಸಾಮಥ್ಯ-0.78 ಟಿಎಂಸಿ, ಫಲಾನುಭವಿಗಳ ಪ್ರದೇಶ ಹೆಕ್ಟರ್ ನಲ್ಲಿ-1,980

3-ಹಾಲಹಳ್ಳಿ ಬ್ಯಾರೇಜ್: ನೀರಿನ ಸಂಗ್ರಹ ಸಾಮಥ್ಯ -2.46 ಟಿಎಂಸಿ, ಫಲಾನುಭವಿಗಳ ಪ್ರದೇಶ ಹೆಕ್ಟರ್ ನಲ್ಲಿ-6,732

4-ಚಂದಾಪುರ ಬ್ಯಾರೇಜ್: ನೀರಿನ ಸಂಗ್ರಹ ಸಾಮಥ್ಯ -0.78 ಟಿಎಂಸಿ, ಫಲಾನುಭವಿಗಳ ಪ್ರದೇಶ ಹೆಕ್ಟರ್ ನಲ್ಲಿ-1,980

ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ-4.80 ಟಿಎಂಸಿ, ನೀರಾವರಿ ಜಮೀನು 12,762 ಹೆಕ್ಟರ್ ಪ್ರದೇಶ

ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾದ ಬ್ಯಾರೇಜ್ ಗಳು 10 ವರ್ಷಗಳೇ ಉರುಳಿದರು ಇಲ್ಲಿಯವರೆಗೂ ನೀರು ಮಾತ್ರ ಇದರಲ್ಲಿ ನಿಂತಿಲ್ಲ. ಅಂದಕೊಂಡಂತೆ ಒಂದು ವೇಳೆ ಬ್ಯಾರೇಜ್ ನಲ್ಲಿ ನೀರು ನಿಂತುಕೊಂಡಿದ್ದರೇ ಭಾಲ್ಕಿ ಹಾಗೂ ಔರಾದ್ ತಾಲೂಕಿನ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿತ್ತು. ಆದರೇ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯದಿಂದ ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದರಿಂದ ಬ್ಯಾರೇಜ್ ನಲ್ಲಿ ನೀರು ನಿಲ್ಲುತ್ತಿಲ್ಲ.

ಜೊತೆಗೆ ಈ ಬ್ಯಾರೇಜ್ ಗೆ ಅಳವಡಿಸಲಾಗಿದ್ದ ಗೇಟ್ ಗಳು ಕೂಡಾ ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದ್ದು ನೀರು ಸೋರಿಕೆಯಾಗಿ ನೀರು ನಿಲ್ಲುತ್ತಿಲ್ಲ. ಇನ್ನೊಂದು ವಿಚಾರವೆಂದರೆ ಈ ಬ್ಯಾರೇಜ್ ನಿರ್ಮಾಣದ ಸಮಯದಲ್ಲಿ ರೈತರ ನೂರಾರು ಎಕರೆ ಜಮೀನು ಕೂಡಾ ಹೋಗಿದೆ. ಆದರೆ ಇನ್ನೂವರೆಗೂ ರೈತರಿಗೆ ಸಿಗಬೇಕಾಗ ಪರಿಹಾರ ಸಿಕ್ಕಿಲ್ಲ, ಇತ್ತ ಜಮೀನು ಇಲ್ಲ ಮೊತ್ತೊಂದು ಕಡೆಗೆ ಜಮೀನಿಗೆ ನೀರು ಇಲ್ಲ.

ಹೀಗಾಗಿ ರೈತರು ಸರಕಾರ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೇಗನೆ ಬ್ಯಾರೇಜ್ ಗೆ ಉತ್ತಮಗುಣಮಟ್ಟದ ಗೇಟ್ ಗಳನ್ನ ಅಳವಡಿಸಿ ಬ್ಯಾರೇಜ್ ನಲ್ಲಿ ನೀರು ನಿಲ್ಲುವಂತೆ ಮಾಡಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡಿ ಎಂದು ಇಲ್ಲಿನ ಜನರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಸರಕಾರ ಕೇಂದ್ರ ಮಂತ್ರಿಗಳಿದ್ದಾರೆ, ರಾಜ್ಯ ಮಂತ್ರಿಗಳು ಜಿಲ್ಲೆಯವರೆ ಇದ್ದಾರೆ. ಯಾರೊಬ್ಬರು ಕೂಡಾ ಬ್ಯಾರೇಜ್ ನಲ್ಲಿ ನೀರು ನಿಲ್ಲುವಂತೆ ಮಾಡಿ ರೈತರಿಗೆ ಜನರಿಗೆ ಕುಡಿಯಲು ನೀರು ಕೊಡುವ ಮನಸ್ಸು ಮಾತ್ರ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಚಂದಾಪುರ ಗ್ರಾಮದ ರೈತ ಮಲ್ಲೇಶಿ.

ರೈತರ ಜಮೀನಿಗೆ ನೀರು ಕೊಡಬೇಕು, ಭೂಮಿಯಲ್ಲಿ ನೀರಿನ ಮೂಲ ಜಾಸ್ತಿಯಾಗಬೇಕು ಅನ್ನುವ ಉದ್ದೇಶದಿಂದ ನಿರ್ಮಾಣ ಮಾಡಿದ ಬ್ಯಾರೇಜ್ ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ. ನೂರಾರು ಕೋಟಿ ವೆಚ್ಚದಲ್ಲಿ ಭಾಲ್ಕಿ ತಾಲೂಕಿನ ಚಂದಾಪೂರ್, ಜಿರಗ್ಯಾಳ, ಮಾಣಿಕೇಶ್ವರಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದರೂ ಇದರ ಪ್ರಯೋಜನೆ ಮಾತ್ರ ಜನರಿಗೆ ರೈತರಿಗೆ ಆಗಿಲ್ಲ. ಬ್ಯಾರೇಜ್ ನಿರ್ಮಾಣ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಅಧಿಕಾರಿಗಳು ಕೊಳ್ಳೆಹೊಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್