ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಸುಂದಾಳ ಗ್ರಾಮ ಪಂಚಾಯತಿಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದ್ದು, ಗ್ರಾಮದ ಪ್ರತಿಯೊಬ್ಬರಿಗೂ ಕೆಲಸ ಕೊಡಿಸುವ ಉದ್ಯೋಗ ಖಾತ್ರಿ ಯೋಜನೆ ಉಪಯೋಗವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸುಂದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನಗುಂದಾ ಗ್ರಾಮದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ತೆರೆದ ಬಾವಿ, ನಾಲಾ ಪಿಸ್ಚಿಂಗ್, ನಾಲಾ ಡ್ರೈನ್, ಕಾಮಗಾರಿಯನ್ನು ಕೂಲಿ ಕೆಲಸಗಾರರನ್ನು ಬಳಸಿಕೊಳ್ಳದೆ ಕಾನೂನು ಬಾಹಿರವಾಗಿ ಜೆಸಿಬಿ ಯಂತ್ರ ಬಳಸಿಕೊಂಡು ಮಾಡಲಾಗಿದೆ. ಇದರ ಜತೆಗೆ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡರು ಸಹಿತ ಉತ್ತಮ ಗುಣಮಟ್ಟದ ಬಾಲಾ ಪಿಸ್ಚಿಂಗ್ ಮಾಡಿಲ್ಲ. ಜೊತೆಗೆ ಎನಗುಂದಾ ಗ್ರಾಮದ ವಿವಿಧ ರೈತರ ಹೊಲದಲ್ಲಿ ತೆರೆದ ಬಾವಿಯನ್ನು ಕೊರೆಯಲಾಗಿದೆ. ಆದರೇ ಅಲ್ಲಿ ಅಪೂರ್ಣ ಬಾವಿ ಕೊರೆದು ಹಣ ಲೂಟಿ ಮಾಡಲಾಗಿದೆ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.
ಹಳ್ಳದಲ್ಲಿ ಬದು ನಿರ್ಮಾಣ ಮಾಡಿದ್ದೇವೆಂದು ಹೇಳಿಕೊಂಡು ಅಲ್ಲಿ ಎಲ್ಲಿಯೂ ಕೆಲಸ ಮಾಡದೆ ತಪ್ಪು ಲೆಕ್ಕ ಕೊಟ್ಟು ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 25 ಲಕ್ಷ ರೂಪಾಯಿ ದುರ್ಬಳಕೆಯಾಗಿದ್ದು, ಇಲ್ಲಿ ಕಾಮಗಾರಿಯನ್ನು ಸದಸ್ಯರೆ ಪಡೆದುಕೊಂಡು ಕಾರ್ಮಿರನ್ನು ಬಳಸಿಕೊಳ್ಳದೆ ಜೆಸಿಬಿ ಮೂಲಕ ಮಾಡಿಸಿದ್ದಾರೆ. ಹೀಗಾಗಿ ನೂರಾರು ಕಾರ್ಮಿಕರು ಕೆಲಸವಿಲ್ಲದೆ ಕೆಲಸಕ್ಕಾಗಿ ಪರದಾಟ ನಡೆಸುವಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು ಎನಗುಂದಾ ಗ್ರಾಮಸ್ಥರಾದ ಬಸವರಾಜ್ ದೇಶಮುಖ್ ಆರೋಪಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಎಮ್ಜಿಎನ್ಆರ್ಇಜಿಎ ಯೋಜನೆಯಲ್ಲಿ ಬಿಡುಗಡೆಯಾಗಿರುವ ಹಣದ ಬಹುಪಾಲು ಹಣವನ್ನು ಕೆಲಸ ಮಾಡದೇ ಲಪಟಾಯಿಸಲಾಗಿದೆ. ಇನ್ನು ಗ್ರಾಮದ ಅಧ್ಯಕ್ಷರು ತನ್ನ ಗಂಡನ ಹೆಸರಿನಲ್ಲಿ ಕಾಮಗಾರಿ ನಡೆಸಿದರೆ, ಸದಸ್ಯರು ತಮ್ಮ ಹೆಸರು ಮತ್ತು ತಾಯಿ ಹೆಂಡತಿ ಹೆಸರಿನಲ್ಲಿ ಕಾಮಗಾರಿಯನ್ನು ತಮ್ಮ ಹೊಲದಲ್ಲೇ ಮಾಡಿಕೋಂಡಿದ್ದಾರೆ. ಇಲ್ಲಿ ಹಣದ ದುರ್ಬಳಕೆಯಾಗಿರುವ ದೂರು ಬಂದ ಹಿನ್ನಲೆಯಲ್ಲಿ ಕಾಮಗಾರಿಯ ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೆಸಿಬಿಗಳಿಂದ ಕಾಮಗಾರಿಯಾಗಿರುವ ಬಗ್ಗೆ ಶಂಕೆ ಬಂದಿದ್ದು, ಎಲ್ಲ ಕಾಮಗಾರಿಯನ್ನು ನೋಡಿ ಸೂಕ್ತ ತನಿಖೆ ಮಾಡಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತನಿಕಾಧಿಕಾರಿಗಳು ಹೇಳಿದ್ದಾರೆ.
ಪಿಡಿಓ, ಅಧ್ಯಕ್ಷರು, ಸದಸ್ಯರು ಸೇರಿಕೊಂಡು ಇಂತಹ ತಪ್ಪು ದಾಖಲೆ ಸೃಷ್ಟಿಸಿ ಹಣ ದೋಚಿದ್ದಾರೆ ಎನ್ನುವ ಆರೋಪವಿದೆ. ಇಲ್ಲಿ ನಡೆದಿದೆ ಎನ್ನಲಾದ ಭ್ರಷ್ಠಾಚಾರದ ಬಗ್ಗೆ ಗ್ರಾಮದ ಕೆಲವು ವ್ಯಕ್ತಿಗಳು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಣ ದುರುಪಯೋಗವಾಗಿರುವುದು ಕಂಡು ಬಂದಿದೆ. ಸರಕಾರದ ಹಣವನ್ನು ಲೂಟಿ ಮಾಡುತ್ತಿರುವ ಇಂತವರಿಗೆ ಕಠೀಣ ಶಿಕ್ಷೇಯಾಗಬೇಕೆಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿ ಜೆಸಿಬಿ ಬಳಸಿಕೊಂಡು ಕೆಲಸ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ತನಿಖೆ ಮಾಡಿ ವರದಿಕೊಡುವಂತೆ ಅಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಬೀದರ್ ಸಿಇಓ ಜಹೀರಾ ನಸೀಂ ತಿಳಿಸಿದ್ದಾರೆ.
ಒಟ್ಟಾರೆ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು, ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬದಲಾಗಿ, ಯಾರು ಕೆಲಸವನ್ನೇ ಮಾಡದೆ ದುಡ್ಡು ಲಪಟಾಯಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಅಕ್ಷ್ಯಮ್ಯ. ಹೀಗಾಗಿ ಇಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಇದನ್ನೂ ಓದಿ:
ಸಚಿವ ಉಮೇಶ್ ಕತ್ತಿ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, ಅಕ್ರಮ ಬಯಲು ಮಾಡಿದ ಶಾಸಕ
ರಾಜ್ಯದಲ್ಲಿರುವುದು 8-10 ಪರ್ಸೆಂಟ್ ಕಮಿಷನ್ ಸರ್ಕಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ