ಬೀದರ್​ ಜಿಲ್ಲೆಯ ಶೇ 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಇಲ್ಲ ಶೌಚಾಲಯ: ಶೌಚಕ್ಕಾಗಿ ಮನೆಗೆ ಹೋಗುವ ವಿದ್ಯಾರ್ಥಿನಿಯರು

ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಆಟದ ಮೈದಾನವಿದೆ, ಮಳೆಯಾದರೆ ನೀರು ನಿಲ್ಲುತ್ತದೆ. ಶೌಚಾಲಯ ಇಲ್ಲದ್ದರಿಂದಾಗಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬಯಲು ಶೌಚ ಮುಕ್ತಕ್ಕಾಗಿ ಶಾಲೆಯ ಮಕ್ಕಳನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವ ಆಡಳಿತ ವರ್ಗ ಸರ್ಕಾರಿ ಶಾಲೆಗಳಲ್ಲಿಯೇ ಶೌಚಾಲಯ ನಿರ್ಮಾಣ ಮಾಡಿಲ್ಲ.

ಬೀದರ್​ ಜಿಲ್ಲೆಯ ಶೇ 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಇಲ್ಲ ಶೌಚಾಲಯ: ಶೌಚಕ್ಕಾಗಿ ಮನೆಗೆ ಹೋಗುವ ವಿದ್ಯಾರ್ಥಿನಿಯರು
ಸರ್ಕಾರಿ ಶಾಲೆ
Updated By: ವಿವೇಕ ಬಿರಾದಾರ

Updated on: Aug 11, 2025 | 7:30 PM

ಬೀದರ್, ಆಗಸ್ಟ್​ 11: ಬೀದರ್ (Bidar) ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ (Government School) ಶೌಚಾಲಯವಿಲ್ಲದೆ (Toilet) ಮಕ್ಕಳು ಬಯಲಿನಲ್ಲೇ ಶೌಚ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪೂರಕ ವಾತಾವರಣ ನಿರ್ಮಿಸದೇ, ಮಕ್ಕಳ ಜೊತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೀದರ್​ ಜಿಲ್ಲೆಯ ಶೇಕಡ 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಇದರಿಂದ ಹೆಣ್ಣು ಮತ್ತು ಗಂಡು ಮಕ್ಕಳು ಶೌಚಕ್ಕಾಗಿ ಬಯಲಿಗೆ ಹೋಗುತ್ತಾರೆ.

ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದ್ದರೂ ಬಹಳಷ್ಟು ಕಡೆ ಪರಿಸ್ಥಿತಿ ತದ್ವಿರುದ್ದವಾಗಿದೆ. ಶಾಲೆಗಳಲ್ಲಿನ ಶೌಚಾಲಯ ಸೌಲಭ್ಯ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದೆ ವಿನಃ ಶಾಲೆಗಳಲ್ಲಿ ಶೌಚಾಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.

ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಕೆಲವು ಕಡೆ ಶೌಚಾಲಯಗಳಿದ್ದರೇ ಅದಕ್ಕೆ ನೀರಿನ ವ್ಯವಸ್ಥೆಯಿಲ್ಲ. ನೀರಿನ ವ್ಯವಸ್ಥೆಯಿದ್ದಲ್ಲಿ, ಶೌಚಾಲಯ ಇತರೆ ಕಾರಣಗಳಿಂದ ಬಳಕೆಗೆ ಯೋಗ್ಯವಾಗಿಲ್ಲ.

ಉದಾಹರಣೆಗೆ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿಯಿಂದ 8ನೇ ತರಗತಿಯವರೆಗೆ 160ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇಂತಹ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಲಾಯ ಕಟ್ಟಸಿಲ್ಲ. “ಶೌಚಕ್ಕಾಗಿ ಶಾಲೆಯಿಂದ ಮನೆಗೆ ಹೋಗಿ ಮೂತ್ರ ವಿರ್ಸಜನೆ ಮಾಡಿ ಬರುವಂತ ಸ್ಥಿತಿಯಿದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

ಇದನ್ನೂ ಓದಿ: ಹಿಂದುಳಿದಿದೆ ಬೀದರ್ ಪ್ರವಾಸೋದ್ಯಮ: ಕೋಟೆಗಳಿಗೆ ಬೇಕಿದೆ ಕಾಯಕಲ್ಪ

ಶಾಲೆಯ ಆವರಣದಲ್ಲಿ ಸ್ವಲ್ಪ ಮಳೆಯಾದರೆ ಸಾಕು ನೀರು ನಿಲ್ಲುತ್ತದೆ. ಇದರಿಂದಾಗಿ ಮಕ್ಕಳು ಶಾಲೆಗೆ ಬರಲು, ಹೋಗಲು ತೊಂದರೆಯಾಗುತ್ತಿದೆ. ಕೆಲವು ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವುಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇನ್ನುಳಿದ ಶಾಲೆಗಳಲ್ಲಿ ಶೌಚಾಲಯ ಸೌಕರ್ಯವೇ ಇಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇರದ ಕಾರಣ ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲಿಗೆ ಹೋಗಬೇಕಾದ ದಾರುಣ ಪರಿಸ್ಥಿತಿ ಇದೆ ಎಂದು ಶಿಕ್ಷಕರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಸರಿ ಸುಮಾರು ಒಂದು ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಮಕ್ಕಳು ಶೌಚಕ್ಕಾಗಿ ಬಯಲನ್ನೇ ನೆಚ್ಚಿಕೊಳ್ಳವ ಸ್ಥಿತಿ ಇದೆ. ಈ ವಿಚಾರ ಇಲ್ಲಿನ ಜನಪ್ರತಿನಿಧಿಗಳಿಗೆ, ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಯಾಕೆ ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:26 pm, Mon, 11 August 25