
ಬೀದರ್, ಜನವರಿ 16: ನಗರದಲ್ಲಿ ನಡೆದಿದ್ದ ಸಿಎಂಸಿ (CMC) ವಾಹನ ದರೋಡೆ ಪ್ರಕರಣ (robbery case) ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿತ್ತು. ಬರೋಬ್ಬರಿ 83 ಲಕ್ಷ ರೂ ಹಣ ದರೋಡೆ ಮಾಡಿದವರು ಇನ್ನೂ ಪತ್ತೆಯಾಗಿಲ್ಲ. ಮೂರು ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಣ ಕದ್ದು ಹಂತಕರು ಪರಾರಿಯಾಗಿ ಇಂದಿಗೆ ಒಂದು ವರ್ಷವಾದರೂ ದರೋಡೆಕೋರರ ಗ್ಯಾಂಗ್ ಇನ್ನೂ ಪತ್ತೆಯಾಗಿಲ್ಲ. ಇತ್ತ ಗುಂಡಿನ ದಾಳಿಗೆ ಗಾಯಗೊಂಡಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುವುದೆಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಕೈ ಚೆಲ್ಲಿದ್ದು, ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಬೀದರ್‌ನಲ್ಲಿ 2025ರಲ್ಲಿ ಜನವರಿ 16ರ ಮುಂಜಾನೆ 11 ಗಂಟೆಗೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ. ಒಂದು ವರ್ಷ ಕಳೆದರೂ ಇನ್ನೂ ದರೋಡೆಕೋರರನ್ನ ಬಂಧಿಸಲು ಬೀದರ್ ಪೊಲೀಸರಿಗೆ ಸಾಧ್ಯವಾಗಿಲ್ಲ. ಬೀದರ್ ನಗರದ ಶಿವಾಜಿ ವೃತ್ತದ ಬಳಿಯಿರುವ ಎಸ್ಬಿಐ ಬ್ಯಾಂಕ್ ಎಟಿಎಂಗೆ ಎಸ್ಎಂಎಸ್ ವಾಹನದಲ್ಲಿ ಎಟಿಎಂಗೆ ಹಣ ತುಂಬಿಸಲು ಸಿಬ್ಬಂದಿ ಬಂದಿದ್ದರು. ಇದೇ ವೇಳೆ ಇಬ್ಬರು ದರೋಡೆಕೋರರು ತಮ್ಮ ಕೈಯಲ್ಲಿದ್ದ ಪಿಸ್ತೂಲ್ನಿಂದ ಸಿಬ್ಬಂದಿ ಇಬ್ಬರನ್ನ ಶೂಟ್ ಮಾಡಿ ಹಣ ಕದ್ದು ಪರಾರಿಯಾಗಿದ್ದರು. ಹಾಡುಹಗಲೇ ನಡೆದಿದ್ದ ಘಟನೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು.
ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್ ದರೋಡೆಕೋರರು ಎಸ್ಕೇಪ್
ದರೋಡೆಕೋರರು ಶೂಟ್ ಮಾಡಿದಾಗ ಬೀದರ್ನ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನೂ ಗಾಯಗೊಂಡಿದ್ದ ಶಿವಕುಮಾರ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೆ ಅವರಿಗೆ ಆರ್ಥಿಕ ಸಹಾಯ ಮಾಡುತ್ತೇನೆಂದು ಹೇಳಿದ್ದ ಜಿಲ್ಲಾಡಳಿತ ಕೈಚೆಲ್ಲಿದ್ದು ಕುಟುಂಬಸ್ಥರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಇನ್ನೂ ದರೋಡೆಯಲ್ಲಿ ಭಾಗವಹಿಸಿದ್ದ ಗ್ಯಾಂಗ್ ದರೋಡೆಗೂ ಮುನ್ನ ಪಕ್ಕಾಪ್ಲ್ಯಾನ್ ಮಾಡಿತ್ತು. ದರೋಡೆ ಮಾಡುವ ಎರಡು ದಿನದ ಮುಂಚೆ ಬೀದರ್‌ನಲ್ಲಿ ದರೋಡೆಕೋರರು ಉಳಿದುಕೊಂಡಿದ್ದರು. ದರೋಡೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಹೋಗಬೇಕು ಅನ್ನೋದನ್ನ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್, ತಾವು ಮಾಡಿದ ಪ್ಲ್ಯಾನ್ ಪ್ರಕಾರವೇ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಬೀದರ್ನ ಅಂಬೇಡ್ಕರ್ ವೃತ್ತದಿಂದ ಹರಳಯ್ಯ ಚೌಕ್, ಅಬಕಾರಿ ಕಚೇರಿ ರಸ್ತೆ, ಬೀದರ್ ಕೋರ್ಟ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ನೂರು ಬೆಡ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಗ್ರನರಸಿಂಹ ದೇವಸ್ಥಾನ, ಮಲ್ಕಾಪುರ, ಸುಲ್ತಾನಪುರ ಮಾರ್ಗವಾಗಿ ಹೈದರಾಬಾದ್ಗೆ ಬೈಕ್ ಮೂಲಕವೇ ಪ್ರಯಾಣ ಮಾಡಿದ್ದರು.
ಬೀದರ್‌ನಲ್ಲಿ ಮುಂಜಾನೆ 11 ಗಂಟೆಗೆ ದರೋಡೆ ಮಾಡಿಕೊಂಡು ಇಲ್ಲಿಂದ 18 ನಿಮಿಷದಲ್ಲಿ ತೆಲಂಗಾಣ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೈದರಾಬಾದ್ ತಲುಪಿ ಅಲ್ಲಿಂದ ಸಿಕಂದ್ರಬಾದ್ ತಲುಪಿದ್ದಾರೆ. ಸಿಕಂದ್ರಬಾದ್ನಿಂದ ರೈಲು ಮೂಲಕ ಜಾರ್ಖಂಡ್ಗೆ ಹೋಗಿದ್ದರು. ಉತ್ತರ ಪ್ರದೇಶದ ವಾರಣಾಸಿ, ಬಿಹಾರ್, ಜಾರ್ಖಂಡ್ನಲ್ಲಿ ಬೀದರ್ ಪೊಲೀಸರು ಬೀಡುಬಿಟ್ಟು ದರೋಡೆಕೋರರ ಹೆಡೆಮುರಿಕಟ್ಟು ತಯಾರಿ ನಡೆಸಿದ್ದರು. ಆದರೆ ದರೋಡೆಕೋರರು ಪೊಲೀಸರಿಗೆ ಕಳೆದೊಂದು ವರ್ಷದಿಂದ ಚಳ್ಳೆ ಹಣ್ಣು ತಿನ್ನಿಸಿ ಓಡಾಡುತ್ತಿದ್ದಾರೆ.
ಇತ್ತ ಗಾಯಾಳುವಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಇವರೆಗೆ ಕೊಟ್ಟಿಲ್ಲ. ನೀಡಿದ್ದ ನೌಕರಿ ಕೂಡ ಬೀದರ್ನಿಂದ 12 ಕಿ.ಮೀ ದೂರವಿತ್ತು. ಹೀಗಾಗಿ ನಾನು ಆ ಕೆಲಸಕ್ಕೆ ಹೋಗಿಲ್ಲ, ನನಗೆ ಬೀದರ್ನಲ್ಲಿಯೇ ಒಂದು ಗುತ್ತಿಗೆ ಆಧಾರದಲ್ಲಿ ನೌಕರಿ ಕೊಡಿ ಎಂದು ಗಾಯಾಳು ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು
ಬೀದರ್ ಸೇರಿದಂತೆ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಪ್ರಕರಣದ ದರೋಡೆಕಾರರನ್ನು ಹೆಡೆಮುರಿ ಕಟ್ಟಿ ಜನರು ಖಾಕಿ ಪಡೆಯ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Fri, 16 January 26