ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು
ಬೀದರ್‌ನ ಹೃದಯ ಭಾಗದಲ್ಲಿ ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಗಳು ಹಣದ ಚೀಲದೊಂದಿಗೆ ಪರಾರಿಯಾಗಿದ್ದಾರೆ. ಆರೋಪಿಗಳನ್ನು ತಡೆಯಲು ಸ್ಥಳೀಯರು ಮಾಡಿದ ಸಾಹಸ ವ್ಯರ್ಥವಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
ಬೀದರ್, ಜನವರಿ 16: ಬೀದರ್‌ನ ಹೃದಯ ಭಾಗ ಶಿವಾಜಿ ಚೌಕ್ನಲ್ಲಿ ಗುರುವಾರ ಎಟಿಎಂಗೆ ಹಣ ತುಂಬಿಸುವ ವೇಳೆ ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಎಟಿಎಂಗೆ ಹಣ ತುಂಬುವ ವಾಹನದ ಹಿಂಭಾಗ ವ್ಯಕ್ತಿಯೊಬ್ಬನ ಶವ ಬಿದ್ದಿದ್ದರೆ, ಕ್ಷಣಮಾತ್ರದಲ್ಲೇ ಸಿನಿಮೀಯ ರೀತಿಯಲ್ಲಿ ಇಬ್ಬರು ದುರ್ಷರ್ಮಿಗಳು ಹಣ ಎಗರಿಸಿ ಪರಾರಿಯಾಗಿದ್ದಾರೆ.
ಬೀದರ್ ಶಿವಾಜಿ ಚೌಕ್ನಲ್ಲಿ ನಡೆದಿದ್ದೇನು?
ಅದು ಬೀದರ್‌ನ ಹೃದಯ ಭಾಗ ಶಿವಾಜಿ ಚೌಕ್. ಜನ ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಎಟಿಎಂಗಳಿಗೆ ಹಣ ತುಂಬುವ ವಾಹನವೊಂದು ಅಲ್ಲಿಗೆ ಬಂದಿದೆ. ಹಾಡಹಗಲೇ, ನೋಡ ನೋಡುತ್ತಿದ್ದಂತೆಯೇ ಏಕಾಏಕಿ ದುರ್ಷರ್ಮಿಗಳು ವಾಹನದ ಮೇಲೆ ಗುಂಡಿ ದಾಳಿ ನಡೆಸಿದ್ದಾರೆ. ವಾಹನದಲ್ಲಿದ್ದ ವ್ಯಕ್ತಿ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ದುಷ್ಕರ್ಮಿಗಳ ದಾಳಿಗೆ ಬಲಿಯಾದ ವ್ಯಕ್ತಿಯನ್ನು ಗಿರಿ ವೆಂಕಟೇಶ್ (ಎಟಿಎಂಗಳಿಗೆ ಹಣ ಹಾಕುವ ಸಿಎಂಎಸ್ ಏಜೆನ್ಸಿಯ ಸಿಬ್ಬಂದಿ) ಎಂದು ಗುರುತಿಸಲಾಗಿದೆ. ಎಂದಿನಂತೆ ಇವತ್ತು ಕೂಡ ಎಟಿಎಂಗಳಿಗೆ ಹಣ ಹಾಕಲು ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುರ್ಷರ್ಮಿಗಳು ಐದು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಿರಿ ವೆಂಕಟೇಶ್‌ಗೆ ಗುಂಡು ತಗುಲಿದೆ. ಸ್ಥಳದಲ್ಲೇ ಗಿರಿ ಮೃತಪಟ್ಟಿದ್ದಾರೆ.
ಖಾರದ ಪುಡಿ ಎರಚಿ ಗುಂಡಿನ ದಾಳಿ: ಹಣ ತುಂಬಿದ ಬಾಕ್ಸ್ ಜೊತೆ ಪರಾರಿ
ವಾಹನದಲ್ಲಿದ್ದವರಿಗೆ ಖಾರದ ಪುಡಿ ಎರಚಿದ ಇಬ್ಬರು ದುರ್ಷರ್ಮಿಗಳು, ನಂತರ ಗುಂಡಿನ ದಾಳಿ ನಡೆಸಿದ್ದಾರೆ. ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದಂತೆಯೇ ವಾಹನದಲ್ಲಿದ್ದ ಹಣದ ಬಾಕ್ಸ್ ಅನ್ನು ಬೈಕ್‌ನಲ್ಲಿ ಇಟ್ಟುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳೀಯರು ಕಲ್ಲು ತೂರಿ, ದುರ್ಷರ್ಮಿಗಳನ್ನು ತಡೆಯಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಶಿವಕುಮಾರ್ (26) ಅವರನ್ನು ಚಿಕಿತ್ಸೆಗಾಗಿ ಬೀದರ್‌ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಹ ಅಸುನೀಗಿದ್ದಾರೆ. ಸದ್ಯ ಆರೋಪಿಗಳಿಗಾಗಿ ಬೀದರ್ ಪೊಲೀಸರು ಬಲೆ ಬಿಸಿದ್ದಾರೆ. ಬೈಕ್ ವಾಹನದ ನಂಬರ್ ಟ್ರೇಸ್ ಮಾಡುತ್ತಿದ್ದಾರೆ.
ಎಟಿಎಂ ವಾಹನದಲ್ಲಿತ್ತು 87 ಲಕ್ಷ ರೂ. ನಗದು
ಎಟಿಎಂ ವಾಹನದಲ್ಲಿ ಒಟ್ಟು 87 ರೂ. ಲಕ್ಷ ಹಣ ಇದ್ದ ಬಗ್ಗೆ ಮಾಹಿತಿ ದೊರೆತಿದೆ. 5 ಲಕ್ಷ ರೂ. ನಗದು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. 83 ಲಕ್ಷ ರೂ. ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದರಿ ಕಲೆ ಅವಸಾನದತ್ತ!
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Thu, 16 January 25