ಬೀದರ್​: ಕನಿಷ್ಟ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿರುವ ಐತಿಹಾಸಿಕ ಸ್ಮಾರಕಗಳು; ಬೇಸತ್ತ ಪ್ರವಾಸಿಗರು

ಐತಿಹಾಸಿಕ ಸ್ಮಾರಕಗಳಿಂದ ರಾಷ್ಟ್ರದ ಗಮನ ಸೆಳೆದಿರುವ ಬೀದರ್ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಕನಿಷ್ಟ ಮೂಲ ಸೌಕರ್ಯಗಳಿಲ್ಲದೆ ಪ್ರವಾಸಿಗರು ಕಷ್ಟ ಪಡುವಂತಾಗಿದೆ. ಇಲ್ಲಿನ ಬಹುಮನಿ ಸುಲ್ತಾನರ ಕಾಲದ ರಾಜ ಮಹಾರಾಜರ ಘೋರಿಗಳು ಜಿಲ್ಲೆಯ ಗತವೈಭವವನ್ನ ಸಾರುತ್ತಿವೆ. ಆದರೆ ಇಂತಹ ಸ್ಥಳಗಳ ಬಗ್ಗೆ ಪ್ರವಾಸಿಗರಿಗೆ ವಿವರಿಸಲು ಇಲ್ಲಿ ಗೈಡ್​ಗಳು ಸಹ ಇಲ್ಲ.

ಬೀದರ್​: ಕನಿಷ್ಟ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿರುವ ಐತಿಹಾಸಿಕ ಸ್ಮಾರಕಗಳು; ಬೇಸತ್ತ ಪ್ರವಾಸಿಗರು
ಬೀದರ್​
Edited By:

Updated on: Dec 14, 2022 | 7:33 AM

ಬೀದರ್: ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನ ನೋಡಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಸೇರಿದಂತೆ ಶಾಲಾ ಕಾಲೇಜುಗಳಿಂದ ನೂರಾರು ಮಕ್ಕಳು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿನ ಸ್ಮಾರಕಗಳ ವಿಕ್ಷಣೆ ಮಾಡಲು ಬಂದ ಶಾಲಾ ಮಕ್ಕಳಿಗೆ ಇಲ್ಲಿನ ಇತಿಹಾಸವನ್ನ ಪರಿಚಯಿಸಲು ಗಾರ್ಡಗಳು ಇಲ್ಲ, ನೆಮ್ಮದಿಯಾಗಿ ಕುಳಿತುಕೊಂಡು ಊಟ ಮಾಡಲು ಸರಿಯಾದ ವ್ಯವಸ್ಥೆಯಿಲ್ಲದೆ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.

ಐತಿಹಾಸಿಕವಾಗಿ ಬೀದರ್​ ಜಿಲ್ಲೆಯಲ್ಲಿರುವ ಭವ್ಯ ಸ್ಮಾರಕಗಳಿಂದ ರಾಷ್ಟ್ರಮಟ್ಟದಲ್ಲಿ ತನ್ನ ಗಮನ ಸೆಳೆಯುತ್ತಿದೆ. ಜೊತೆಗೆ ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಲ್ಲಿಯೇ ವಿಸ್ತಾರವಾದ ಬೃಹತ್ತಾದ ಕೋಟೆಯು ಜಿಲ್ಲೆಗೆ ಕೀರಿಟದಂತಿದೆ. ಶತಮಾನಗಳ ಇತಿಹಾಸ ಹೊಂದಿರುವ ಐತಿಹಾಸಿಕ ಸ್ಥಳಗಳನ್ನ ನಿರ್ಲಕ್ಷ್ಯ ಮಾಡುತ್ತಿರುವ ಪುರಾತತ್ವ ಇಲಾಖೆ, ಸರಕಾರಗೋಲ್ ಗುಮ್ಮಜ್ ಮಾದರಿಯಲ್ಲಿರುವ 40 ಹೆಚ್ಚು ನವಾಬರ ಕಾಲದ ಸಮಾಧಿಗಳ ಬಗ್ಗೆ ವಿವರಿಸಲು ಗೈಡ್​ಗಳು ಇಲ್ಲ, ಕನಿಷ್ಟ ಮೂಲ ಸೌಕರ್ಯಗಳಾದ ಕುಡಿಯುವ ನೀರಿನಿಂದ ಹಿಡಿದು ಕುಳಿತುಕೊಂಡು ವಿಶ್ರಾಂತಿ ಪಡೆಯಲು ಆಸನಗಳು ಇಲ್ಲ.

ಇನ್ನು ಜಿಲ್ಲೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದ ಐತಿಹಾಸಿಕ ಸ್ಮಾರಕಗಳಿವೆ. ಕ್ರಿ.1472ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿದ್ದು, ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್​ನಂತಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳಿಂದಾಗಿ ಜಿಲ್ಲೆಯು ಪ್ರೇಕ್ಷಣೀಯ ಸ್ಥಳವಾಗಿ ಹೊರಹೊಮ್ಮಿದೆ. ನಗರದ ಹೃದಯಬಾಗದಲ್ಲಿರುವ ಶಬಲ್ ಬರೀದ್​ ಉದ್ಯಾನವನದಲ್ಲಿ ಸುಮಾರು ನೂರಕ್ಕು ಹೆಚ್ಚು ಸೂಫಿ ಸಂತರ, ರಾಜ ಮಹಾರಾಜರ ಸಮಾದಿಗಳಿವೆ.

ಇಂತಹ ಐತಿಹಾಸಿಕ ಸ್ಥಳಕ್ಕೆ ಭೇಟಿ ಕೊಡುವ ಕೆಲವರು ಇತಿಹಾಸ ಪ್ರಸಿದ್ಧ ಸಮಾಧಿಯ ಮೇಲೆ ಹೆಸರನ್ನ ಬರೆದು ಅದರ ಅಂಧವನ್ನ ಕೆಡಿಸುತ್ತಿದ್ದಾರೆ. ಹೀಗಾಗಿ ಈ ಪ್ರವಾಸಿ ತಾಣ ಮರೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಇಲ್ಲಿನ ಸ್ಮಾರಕ ರಕ್ಷಣೆಗೆ ಮುಂದಾಗಬೇಕೆಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಇನ್ನು ಇಂತಹ ಇತಿಹಾಸ ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ಭದ್ರತೆಯೂ ಇಲ್ಲ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ, ಹೀಗಾಗಿ ಪ್ರವಾಸೋದ್ಯಮ ಬೆಳೆಸುವ ಬಗ್ಗೆ ಜಿಲ್ಲಾಡಳಿತಕ್ಕೆ ಚಿಂತನೆಯೇ ಇಲ್ಲದಂತಾಗಿದೆ ಎಂದು ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಗಡಿ ಜಿಲ್ಲೆ ಬೀದರ್​ ಮತ್ತೊಂದು ಬಳ್ಳಾರಿಯಾಗುವತ್ತ ಸಾಗುತಿದೆ, ಇಲ್ಲಿ ಜೋರಾಗಿ ನಡೆಯುತ್ತಿದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ

ಈ ಪುರಾತನ ಸಮಾಧಿಗಳು ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್​ಮುಂದೆ ಬಿಚ್ಚಿಕೊಳ್ಳುತ್ತದೆ. ಸ್ಥಳೀಯರಿಗೆ ಇಲ್ಲಿನ ಭವ್ಯ ಸ್ಮಾರಕಗಳ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಇಷ್ಟು ವರ್ಷಗಳ ಕಾಲ ಇಲ್ಲಿನ ಸ್ಮಾರಕಗಳು ಉಳಿದಿರುವುದೇ ಸೂಜಿಗದ ಸಂಗತಿಯಾಗಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ