ಮಾಂಡೌಸ್​ ಚಂಡಮಾರುತ ಎಫೆಕ್ಟ್; ಹವಾಮಾನ ಬದಲಾವಣೆಯಿಂದ ಬೀದರ್​ನಲ್ಲಿ ಹೆಚ್ಚಾದ ಅನಾರೋಗ್ಯ

ಮಾಂಡೌಸ್​ ಚಂಡಮಾರುತ ಹಿನ್ನೆಲೆ ಹವಾಮಾನದಲ್ಲಿ ಬದಲಾವಣೆಯಿಂದಾಗಿ ಬೀದರ್​ ಜಿಲ್ಲೆಯಲ್ಲಿ ಮಕ್ಕಳು, ವಯಸ್ಕರಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

ಮಾಂಡೌಸ್​ ಚಂಡಮಾರುತ ಎಫೆಕ್ಟ್; ಹವಾಮಾನ ಬದಲಾವಣೆಯಿಂದ ಬೀದರ್​ನಲ್ಲಿ ಹೆಚ್ಚಾದ ಅನಾರೋಗ್ಯ
ಬೀದರ್​ನಲ್ಲಿ ಹೆಚ್ಚಾದ ಅನಾರೋಗ್ಯ; ಬೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
Follow us
| Updated By: Rakesh Nayak Manchi

Updated on:Dec 12, 2022 | 9:53 AM

ಬೀದರ್: ಆಗ್ನೇಯ ಬಂಗಾಳ ಕೊಲ್ಲಿ (Bay of Bengal)ಯಲ್ಲಿ ವಾಯುಭಾರ ಕುಸಿತವಾಗಿ ಮಾಂಡೌಸ್ ಚಂಡಮಾರುತ  (Mandous Cyclone)ದ ರೂಪ ತಳಿದ ಪರಿಣಾಮ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರಂತರ ಮಳೆ (Karnataka Rains)ಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಬೀದರ್​ ಜಿಲ್ಲೆಯಲ್ಲಿ ಹವಾಮಾನ ಬದಲಾವಣೆ (Climate change)ಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಶೇಕಡಾ 16ರ ಆಸುಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದೆ. ಮೈ ಕೊರೆಯೋ ಚಳಿಯಿಂದಾಗಿ ಜನರು ಮನೆಯಿಂದ ತಡವಾಗಿ ಹೊರಬರುತ್ತಿದ್ದು, ದೈನಂದಿನ ಕೆಲಸಕ್ಕೂ ಅಡ್ಡಿಯಾಗುತ್ತಿದೆ. ಅಷ್ಟೇ ಅಲ್ಲದೆ ಅನಾರೋಗ್ಯ ಸಮಸ್ಯೆ ಕಾಡಲು ಆರಂಭವಾಗಿದೆ. ಮಕ್ಕಳು, ವಯಸ್ಕರು ಕೆಮ್ಮು, ನೆಗಡಿಯಂತಹ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಬ್ರಿಮ್ಸ್​ ಆಸ್ಪತ್ರೆಗೆ ಒಂದೂವರೆ ಸಾವಿರಕ್ಕೂ ಅಧಿಕ ರೋಗಿಗಳು ಬರುತ್ತಿದ್ದಾರೆ. ಆ ಮೂಲಕ ಬ್ರೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ.

ಜಿಟಿಜಿಟಿ ಮಳೆಗೆ ಬೆಂಗಳೂರು ನಗರದ ಜನರು ಹೈರಾಣ

ಬೆಂಗಳೂರು: ಕಳೆದ 3 ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನರು ಹೈರಾಣರಾಗಿದ್ದಾರೆ. ವೀಕೆಂಡ್ ಮೋಜಿನಲ್ಲಿದ್ದ ಯುವ ಜನರನ್ನು ತುಂತುರು ಮಳೆಯು ಮನೆಯಲ್ಲೇ ಕೂರುವಂತೆ ಮಾಡಿದೆ. ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವ ಮಂದಿ ರೈನ್ ಕೋಟ್, ಜರ್ಕೀನ್ ಹಾಕಿಕೊಂಡೇ ಹೊರಬರುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯಿಂದಲೇ ಮತ್ತೆ ಅಲ್ಲಲ್ಲಿ ಮಳೆ ಆರಂಭಗೊಂಡಿದ್ದು, ರಸ್ತೆ, ಪಾರ್ಕ್​​ಗಳಲ್ಲಿ ವಾಕಿಂಗ್ ಮಾಡುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಇದನ್ನೂ ಓದಿ: Bengaluru Weather: ತಾಪಮಾನ ಇಳಿಕೆ, ಅಕಾಲಿಕ ಮಳೆ, ಚಳಿ: ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ, ಪೋಷಕರು ಕಂಗಾಲು

ವಿದ್ಯುತ್ ಕಂಬಗಳ ಮೇಲೆ ಬಿದ್ದ ಮರ

ಕೋಲಾರ: ಮಾಂಡೌಸ್ ಚಂಡಮಾರುತ ಹಿನ್ನಲೆ ಕೋಲಾರ ಜಿಲ್ಲೆಯಲ್ಲಿ ಮಳೆ ಮುಂದುವರಿದ್ದು, ಕೆಜಿಎಫ್​ನಲ್ಲಿರುವ ಬೆಮೆಲ್​ ಬಡಾವಣೆಯಲ್ಲಿ ಬೃಹತ್ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವಿದ್ಯುತ್ ಕಂಬ ಉರುಳಿಬಿದ್ದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.

ಶೀತಗಾಳಿ, ತುಂತುರು ಮಳೆ ಹಿನ್ನೆಲೆ ಮನೆಯಿಂದ ಹೊರಬಾರದ ಜನ

ಚಿಕ್ಕಮಗಳೂರು: ಮಾಂಡೌಸ್ ಚಂಡಮಾರುತ ಅಬ್ಬರಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂತುರು ಮಳೆ ಹಾಗೂ ಶೀತಗಾಳಿ ಬೀಸುತ್ತಿದ್ದು, ಜನರು ಮನೆಯಲ್ಲೇ ಕುಳಿತುಕೊಂಡಿದ್ದಾರೆ. ಅಲ್ಲದೆ ಸರಿಯಾಗಿ ಬಿಸಿಲು ಬೀಳದ ಹಿನ್ನೆಲೆ ಕಾಫಿಕೊಯ್ಲು ಮಾಡಲು ಕೂಡ ರೈತರತು ಹಿಂದೇಟು ಹಾಕುತ್ತಿದ್ದಾರೆ. ಕೊಯ್ಲು ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ, ಸುಮ್ಮನಿದ್ದರೂ ಕಷ್ಟ ಅನ್ನೋ ತ್ರಿಶಂಕು ಪರಿಸ್ಥಿತಿ ರೈತರದ್ದಾಗಿದೆ. ಅಲ್ಲದೆ ಬಿಸಿಲಿಲ್ಲದೇ ಕಾಫಿ ಫಸಲು ಹಾಳಾಗುತ್ತಿದ್ದು, ಹೀಗೇ ಮುಂದುವರೆದರೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುವುದಿಲ್ಲ ಎಂಬ ಆತಂಕದಲ್ಲಿ ಕಾಫಿ ಬೆಳೆಗಾರರಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಿದ ಮಳೆ; ಬಿಜೆಪಿ, ಜೆಡಿಎಸ್ ಕಾರ್ಯಕ್ರಮಗಳು ಮೂಂದೂಡಿಕೆ

ನಂದಿಗಿರಿಧಾಮದಲ್ಲಿ ತುಂತುರು ಮಳೆ, ಮಂಜು, ಚಳಿಗಾಳಿಯ ಜೊತೆ ಬೆಳ್ಳಿ ಮೋಡ

ಚಿಕ್ಕಬಳ್ಳಾಪುರ: ಮಾಂಡೌಸ್ ಚಂಡಮಾರುತದಿಂದ ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರಕೃತಿ ಸೊಬಗು ಮತ್ತಷ್ಟು ಹೆಚ್ಚಿದೆ. ನಂದಿಗಿರಿಧಾಮದಲ್ಲಿ ಸುರಿಯುತ್ತಿರುವ ತುಂತುರು ಮಳೆಯ ನಡುವೆ ಮಂಜು, ಚಳಿಗಾಳಿಯೊಂದಿಗೆ ಬೆಳ್ಳಿ ಮೋಡಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ತರಕಾರಿ ಮಾರ್ಕೆಟ್ ಸಂಪೂರ್ಣ ಖಾಲಿ ಖಾಲಿ

ಗದಗ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಚಂಡಮಾರುತವು ಗದಗ ಜಿಲ್ಲೆ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಶೀತಗಾಳಿ, ತುಂತುರು ಮಳೆಗೆ ಜನರ ಓಡಾಟ ಕಡಿಮೆಯಾಗಿದ್ದು, ನಗರದ ತರಕಾರಿ ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿದೆ. ನಿನ್ನೆಯಿಂದ ಗದಗ-ಬೆಟಗೇರಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಾರುಕಟ್ಟೆಗೆ ಗ್ರಾಹಕರು ಬಾರದ ಹಿನ್ನಲೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ರೈತರ ಸಂಖ್ಯೆಯೂ ತೀರ ಕಡಿಮೆಯಾಗಿದ್ದು, ತರಕಾರಿ ಮಾರಾಟವಾಗದೆ ಹಾಗೇ ಉಳಿದರೆ ಹಾಳಾಗುತ್ತದೆ ಎಂದು ವ್ಯಾಪಾರಿಗಳು ಚಿಂತೆಯಲ್ಲಿದ್ದಾರೆ.

ಚಳಿ ಮತ್ತು ಮಳೆಯ ಹಿನ್ನಲೆ ಸಾರ್ವಜನಿಕರ ಪರದಾಟ

ಶಿವಮೊಗ್ಗ: ಮಲೆನಾಡಿನಡು ಜಿಲ್ಲೆ ಮೇಲೂ ಚಂಡಮಾರುತದ ಪ್ರಭಾವ ಬೀರಿದೆ. ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆ ಆರಂಭವಾಗಿದೆ. ತುಂತುರು ಮಳೆಯ ನಡುವೆ ಚಳಿಯೂ ಜನರನ್ನು ನಲುಗಿಸಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:51 am, Mon, 12 December 22