ಬೀದರ್: ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ನೋಟಿಸ್!
ರಾಜ್ಯ ಸರ್ಕಾರ ಪರೋಕ್ಷವಾಗಿ RSSಗೆ ಅಂಕುಶ ಹಾಕೋದಕ್ಕೆ ಮುಂದಾಗಿತ್ತು. ಆದರೆ ಧಾರವಾಡ ಹೈಕೋರ್ಟ್ ಪೀಠ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇನ್ನು ಪಥಸಂಚಲನದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ಇದೀಗ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಲ್ವರು ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.

ಬೀದರ್, ಅಕ್ಟೋಬರ್ 29: ಆರ್ಎಸ್ಎಸ್ಗೆ (RSS) ಪರೋಕ್ಷವಾಗಿ ಅಂಕುಶ ಹಾಕಹೊರಟಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ಹೀಗಿರುವಾಗ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಔರಾದ್ ತಾಲೂಕಿನ ನಾಲ್ವರು ಶಿಕ್ಷಕರಿಗೆ (Teachers) ನೋಟಿಸ್ ನೀಡಲಾಗಿದೆ. ಕಾರಣ ಕೇಳಿ ನಾಲ್ವರಿಗೆ ಔರಾದ್ ಬಿಇಓ ಅವರಿಂದ ನೋಟಿಸ್ ಜಾರಿ ಮಾಡಲಾಗಿದೆ.
ಶಿಕ್ಷಕರ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಮುಖಂಡರ ಆಗ್ರಹ
ಅ. 7, 13ರಂದು ಔರಾದ್ನಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆದಿತ್ತು. ಶಿಕ್ಷಕರಾದ ಮಹದೇವ, ಶಾಲಿವಾನ್, ಪ್ರಕಾಶ್ ಮತ್ತು ಸತೀಶ್ ಭಾಗವಹಿಸಿದ್ದರು. ಈ ಬಗ್ಗೆ ಅಕ್ಟೋಬರ 27 ರಂದು ದಲಿತ ಸೇನೆಯ ಮುಖಂಡರು ಬಿಇಒಗೆ ದೂರು ನೀಡಿದ್ದರು. ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ದೂರು ಸಲಿಸಿದ ಮರುದಿನ ಅಂದರೆ ಮಂಗಳವಾರ ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ನಲ್ಲಿ ಏನಿದೆ?
ಬೀದರ ಜಿಲ್ಲೆಯ ಔರಾದ ಬಿ ತಾಲೂಕಿನಲ್ಲಿ ಅಕ್ಟೋಬರ್ 7 ಮತ್ತು 13 ರಂದು ನಡೆದ ಆರ್ಎಸ್ಎಸ್ ಪಥಸಂಚಲನದಲ್ಲಿ ತಾವುಗಳು ಭಾಗಿಯಾಗಿರುತ್ತಿರಿ. ಈ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿರುವ ದೃಶ್ಯಗಳು ಕಂಡು ಬಂದಿರುತ್ತವೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಪತ್ರ ಬೆನ್ನಲ್ಲೇ ಸಿಎಂ ಮಹತ್ವದ ಸೂಚನೆ: RSS ಚಟುವಟಿಕೆಗಳಿಗೆ ಬೀಳುತ್ತಾ ಬ್ರೇಕ್?
ತಾವುಗಳು ಸರಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವುಗಳು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ದವಾಗಿ ಕರ್ತವ್ಯ ಮಾಡಿರುವಿರಿ. ಈ ಪ್ರಯುಕ್ತ ತಾವುಗಳು ಈ ನೋಟಿಸ್ ತಲುಪಿದ ಬಳಿಕ ಕಾರಣ ಕೇಳುವ ನೋಟಿಸ್‌ಗೆ ಲಿಖಿತ ಹೇಳಿಕೆಯನ್ನು ನೀಡಿ ಖುದ್ದಾಗಿ ಬಂದು ಈ ಕಛೇರಿಗೆ ಸಲ್ಲಿಸುವುದು. ಇಲ್ಲವಾದಲ್ಲಿ ಏಕಪಕ್ಷಿಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ. ನಿಯಂಕ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುದೆಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:04 pm, Wed, 29 October 25




