
ಬೀದರ್, ಅಕ್ಟೋಬರ್ 26: ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿ ಜೀವಗಳು (Couple) ಸಾವಿನಲ್ಲೂ (death) ಒಂದಾಗಿದ್ದಾರೆ. ಗುಂಡಪ್ಪ ಹೋಡಗೆ (85) ಲಕ್ಷ್ಮಿಬಾಯಿ ಹೋಡಗೆ (83) ಮೃತ ದಂಪತಿ. ಒಂದೇ ದಿನ ಇಹಲೋಕ ತ್ಯಜಿಸಿದ ದಂಪತಿಗಳ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಗುಂಡಪ್ಪ ಹೋಡಗೆ ಮತ್ತು ಲಕ್ಷ್ಮಿಬಾಯಿ ಹೋಡಗೆ ಆರೇಳು ದಶಕಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದರು. ಮೊದಲು ಪತ್ನಿ ಲಕ್ಷ್ಮಿಬಾಯಿ ಹೋಡಗೆ ಅವರು ನಿಧನರಾಗಿದ್ದು, ಆ ಸುದ್ದಿ ತಿಳಿದ ಬಳಿಕ ಪತಿ ಗುಂಡಪ್ಪ ಹೋಡಗೆ ಕೂಡ ಕೊನೆಯುಸಿರೆಳೆದಿದ್ದಾರೆ. ಸದ್ಯ ಈ ಹೃದಯವಿದ್ರಾವಕ ಘಟನೆ ಸಂಬಂಧಿಕರಿಗೆ ಮತ್ತು ಊರಿನವರಲ್ಲಿ ಕಣ್ಣೀರು ತರಿಸಿದೆ.
ಇದನ್ನೂ ಓದಿ: ಆನೇಕಲ್ನಲ್ಲಿ ಭೀಕರ ಅಪಘಾತ: ಕ್ರೇನ್ನಿಂದ ಮೃತದೇಹಗಳನ್ನ ಹೊರ ತೆಗೆದ ಪೊಲೀಸ್ರು
ನಾಲ್ವರು ಪುತ್ರಿಯರು, ಮೂವರು ಪುತ್ರರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ದಂಪತಿ ಅಗಲಿದ್ದಾರೆ. ಸಾವಿಗೆ ಬಂಧು-ಬಳಗ ಸುತ್ತಲಿನ ಗ್ರಾಮಸ್ಥರು ಮರುಗಿದ್ದಾರೆ. ಅವರಿಬ್ಬರ ದೇಹಗಳನ್ನು ಅಕ್ಕ-ಪಕ್ಕ ಇರಿಸಿ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇನ್ನು ಇತ್ತೀಚೆಗೆ ತಮ್ಮ ಅನಾರೋಗ್ಯದಿಂದ ಸಾವಿಗೀಡಾದ ಸುದ್ದಿ ತಿಳಿದು ಅಣ್ಣನಿಗೆ ಹೃದಯಾಘಾತವಾಗಿ ಆತನೂ ಮೃತಪಟ್ಟಿದ್ದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿತ್ತು. ಸಹೋದರರಿಬ್ಬರ ಸಾವು ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿತ್ತು. ಮಕ್ಕಳನ್ನು ಕಳೆದುಕೊಂಡ ಹೆತ್ತವರು ಒಂದು ಕ್ಷಣ ದಂಗಾಗಿ ಹೋಗಿದ್ದರು.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಸಾವಿನಲ್ಲೂ ಒಂದಾದ ತಾಯಿ-ಮಗ; ಅತ್ತ ಕೊಪ್ಪಳ, ದಾವಣಗೆರೆಯಲ್ಲಿ ಹೃದಯಾಘಾತ
ತಮ್ಮ ಸತೀಶ್ ಬಾಗನ್ನವರ್ (16) ಅನಾರೋಗ್ಯದಿಂದಾಗಿ ಮೃತಪಟ್ಟಿದ್ದ. ಆ ಸುದ್ದಿ ತಿಳಿದ ಅಣ್ಣ ಬಸವರಾಜ್ ಬಾಗನ್ನವರ್ (24)ಗೆ ಹೃದಯಘಾತ ಸಂಭವಿಸಿತ್ತು. ನಿಂತಲ್ಲಿಯೇ ಕುಸಿದು ಬಿದ್ದು, ಪ್ರಾಣಬಿಟ್ಟಿದ್ದ. ಹೆಗಲೆತ್ತರಕ್ಕೆ ಬೆಳೆದಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ನಿಜಕ್ಕೂ ಎರಡೆರಡು ಆಘಾತ ಎದುರಾಗಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.