ಬೀದರ್, ಜನವರಿ 22: ಬೀದರ್ನ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ಹೆರಿಗೆ ವೇಳೆಯಲ್ಲಿ ಎರಡು ಹಸುಗೂಸುಗಳ ಕಾಲಿನ ಮೂಳೆ ಮುರಿದಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದ ಶ್ರೀದೇವಿ ಎಂಬುವರು 2024 ರ ಡಿಸೆಂಬರ್ 28 ರಂದು ಹೆರಿಗೆಗೆ ದಾಖಲಾಗಿದ್ದರು. ಸಹಜ ಹೆರಿಗೆ ಆಗುತ್ತದೆಂದು ವೈದ್ಯರು ಹೇಳಿದ್ದರು. ಆದರೆ, ನಂತರ ಸಹಜ ಹೆರಿಗೆ ಕಷ್ಟ ಎಂದು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಆದ ನಂತರ ಎರಡು ಗಂಟೆ ಕಳೆದರೂ ಮಗು ಕಾಲು ಅಲ್ಲಾಡಿಸಲಾಗಿದೆ ಅಳುವುದಕ್ಕೆ ಪ್ರಾರಂಭಿಸಿದೆ. ಹಸುಗೂಸಿನ ಕುಟುಂಬದ ಸದಸ್ಯರು ಮಗು ಅಳುವುದನ್ನು ನೋಡಿ ವೈದ್ಯರಿಗೆ ತೋರಿಸಿದ್ದಾರೆ. ವೈದ್ಯರು ಸ್ಕ್ಯಾನ್ ಮಾಡಿಸಿದಾಗ ಮಗುವಿನ ಬಲಗಾಲಿನ ತೊಡೆಯ ಮೂಳೆ ಮುರಿದಿರುವುದು ಗೊತ್ತಾಗಿದೆ.
ಮೂಳೆ ಮುರಿದಿರುವ ಬಗ್ಗೆ ವೈದ್ಯರನ್ನು ಪ್ರಶ್ನಿಸಿದಾಗ, ಸಿಸೇರಿಯನ್ ಮಾಡುವಾಗ ಮೂಳೆ ಮುರಿದಿದೆ. ಇದೆಲ್ಲಾ ಸಹಜ ಎಂದು ಹೇಳಿ ಕುಟುಂಬಸ್ಥರನ್ನು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ, ನಮಗೆ ನ್ಯಾಯ ಬೇಕು ಎಂದು ಶ್ರೀದೇವಿ ಗಂಡ ರಾಜು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಬೀದರ್ ಮಂಗಲಪೇಟ್ ನಿವಾಸಿ ರೂಪಾರಾಣಿ ನಾಗೇಂದ್ರ ಮಡಿವಾಳ ಎಂಬುವರು ಡಿಸೆಂಬರ್ 14 ರಂದು ಬ್ರಿಮ್ಸ್ ಆಸ್ಪತ್ರೆಗೆ ಹೆಸರಿಗೆಗೆಂದು ತೆರಳಿದ್ದರು. ಬ್ರಿಮ್ಸ್ ವೈದ್ಯರು ಆಕೆಗೆ ನಾರ್ಮಲ್ ಹೆರಿಗೆ ಮಾಡಿಸಿದ್ದಾರೆ. ಇದೇ ವೇಳೆ ಮಗುವಿನ ಕಾಲು ಮುರಿದಿದ್ದಾರೆ.
ಎರಡು ವಾರದ ಅಂತರದಲ್ಲಿ ಎರಡು ಹಸೂಗೂಸುಗಳ ಕಾಲು ಮುರಿದಿದ್ದು, ಹಸುಗೂಸುಗಳ ಬದುಕಿನ ಜೊತೆ ಬ್ರಿಮ್ಸ್ ವೈದ್ಯರು ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನರ್ಸ್, ಟ್ರೈನಿ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಹಿರಿಯ ವೈದ್ಯರ ಮಾರ್ಗದರ್ಶನ ಪಡೆಯದೆಯೇ ಹೆರಿಗೆ ಮಾಡಿಸಿದ್ದಾರೆ. ಇದರ ಪರಿಣಾಮ ಎರಡು ಹಸುಗೂಸುಗಳ ಕಾಲಿನ ಮೂಳೆ ಮುರಿದಿದೆ. ಇದಕ್ಕೆ ಕಾರಣರಾದ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ. ಮುಂದೆ ಇಂತಹ ಅನಾಹುತಗಳು ಆಗದಂತೆ ನೋಡಿಕೊಳ್ಳಿ ಎಂದು ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಸಂತ್ರಸ್ತರು ಮನವಿ ಮಾಡಿದ್ದಾರೆ. ಆದರೆ, ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ. ಇದು ಸಹಜವಾಗಿಯೇ ಹಸುಗೂಸುಗಳ ಕುಟುಂಬಸ್ಥರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ.
ಇದನ್ನೂ ಓದಿ: ಸಚಿನ್ ಆತ್ಮಹತ್ಯೆ ಕೇಸ್: ಇಬ್ಬರಿಗೆ ಜಾಮೀನು, ಐವರಿಗೆ 14 ದಿನ ನ್ಯಾಯಾಂಗ ಬಂಧನ
ಒಟ್ಟಿನಲ್ಲಿ, ಹಿರಿಯ ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಿದ್ದು ಪುಟ್ಟಕಂದಮ್ಮಗಳ ಕಾಲಿನ ಮೂಳೆ ಮುರಿಯಲು ಕಾರಣವಾಗಿದೆ. ಹಸುಗೂಸುಗಳ ಮೂಳೆ ಮುರಿದಿದ್ದರಿಂದ ಅವರ ಭವಿಷ್ಯದ ಬಗ್ಗೆ ಪೋಷಕರಿಗೆ ಚಿಂತೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Wed, 22 January 25