ಬೀದರ್‌ – ಬೆಂಗಳೂರು ನಡುವೆ ಮತ್ತೆ ವಿಮಾನ ಹಾರಾಟಕ್ಕೆ ದಿನಗಣನೆ: ಇಲ್ಲಿದೆ ವೇಳಾಪಟ್ಟಿ

| Updated By: Ganapathi Sharma

Updated on: Mar 12, 2025 | 12:13 PM

ಬೀದರ್​ನಿಂದ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಡಬೆಕೆಂಬುದು ಜಿಲ್ಲೆಯ ಜನರ ಕನಸಾಗಿತ್ತು. ನಾಗರಿಕರ ಕನಸಿನಂತೆ ಗಡಿ ಜಿಲ್ಲೆ ಬೀದರ್​ನಿಂದ ಬೆಂಗಳೂರಿಗೆ ವಿಮಾನ ಹಾರಾಟ ಕೂಡಾ ಆರಂಭವಾಗಿತ್ತು. ಆದರೆ ಕಳೆದೊಂದು ವರ್ಷದಿಂದ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಜನರ ಹೋರಾಟದ ಫಲವಾಗಿ ಮತ್ತೆ ವಿಮಾನ ಹಾರಾಟ ಶುರುವಾಗುತ್ತಿದೆ.

ಬೀದರ್‌ – ಬೆಂಗಳೂರು ನಡುವೆ ಮತ್ತೆ ವಿಮಾನ ಹಾರಾಟಕ್ಕೆ ದಿನಗಣನೆ: ಇಲ್ಲಿದೆ ವೇಳಾಪಟ್ಟಿ
ಬೀದರ್ ವಿಮಾನ ನಿಲ್ದಾಣ
Follow us on

ಬೀದರ್, ಮಾರ್ಚ್ 12: ಬೀದರ್‌ ಹಾಗೂ ಬೆಂಗಳೂರು ನಡುವೆ ಪುನಃ ವಿಮಾನ ಹಾರಾಟಕ್ಕೆ (Bidar Bengaluru Flight) ದಿನಗಣನೆ. ಆರಂಭವಾಗಿದೆ. ಏಪ್ರಿಲ್ 15 ರಿಂದ ಸ್ಟಾರ್ ಏರ್ ಜೆಟ್ (Star Air) ವಿಮಾನ ಮತ್ತೆ ಹಾರಾಟ ನಡೆಸಲಿದೆ. ಈಗಾಗಲೇ ಸ್ಟಾರ್‌ ಏರ್‌ಲೈನ್ಸ್‌ ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಈ ಹಿಂದೆ, ಬೀದರ್ ಹಾಗೂ ಬೆಂಗಳೂರು ಮಧ್ಯೆ 2020 ರ 7 ಫೆಬ್ರವರಿ 7 ರಂದು 72 ಸೀಟ್​ನ ಟ್ರೂಜೆಟ್ ವಿಮಾನದ ಹಾರಾಟ ಆರಂಭಿಸಿತ್ತು. ಆದರೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂಜೆಟ್ ವಿಮಾನ ಕೆಲವು ತಿಂಗಳಲ್ಲಿಯೇ ಹಾರಾಟ ನಿಲ್ಲಿಸಿತ್ತು. ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ಪ್ರಯಾಣಿಕರು ಹೈದರಾಬಾದ್​ಗೆ ಹೋಗಿ ಅಲ್ಲಿಂದ ವಿಮಾಣದ ಮೂಲಕ ಬೆಂಗಳೂರು ಅಥವಾ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಬೇಕಾಯಿತು. ಇದು ಪ್ರಯಾಣಿಕರಿಗೆ ಕಷ್ಟವಾಗತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ ಮತ್ತೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನ ತನ್ನ ಹಾರಾಟ ಆರಂಭಿಸಿತ್ತು. ಆದರೆ ಕಳೆದೊಂದು ವರ್ಷದಿಂದ ಅದು ಕೂಡಾ ಆರ್ಥಿಕ ನಷ್ಟದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಈಗ ಮತ್ತೆ ಬೆಂಗಳೂರು – ಬೀದರ್ ವಿಮಾನ ಹಾರಾಟ ಆರಂಭವಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮನವಿ ಮಾಡಿದ್ದಾರೆ.

ಆನ್​ಲೈನ್ ಟಿಕೆಟ್ ಬುಕಿಂಗ್ ಆರಂಭ

ವಿಮಾನ ಹಾರಾಟಕ್ಕೆ ಎದುರಾಗಿದ್ದ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ವಿಮಾನ ಸೇವೆ ಪುನರಾರಂಭಿಸಲು ಸ್ಟಾರ್‌ ಏರ್‌ಲೈನ್ಸ್‌ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸ್ಟಾರ್‌ ಏರ್‌ಲೈನ್ಸ್‌ ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್‌ ಬುಕ್ಕಿಂಗ್‌ ಕೂಡ ಆರಂಭಗೊಂಡಿದೆ.

ಇದನ್ನೂ ಓದಿ
ಮುಡಾ ಹಗರಣ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೇಂದ್ರಕ್ಕೆ ದೂರು
ಮುಡಾ ಕೇಸ್​ಗೆ ಟ್ವಿಸ್ಟ್: ಸ್ನೇಹಮಯಿ ಕೃಷ್ಣರಿಂದ ಮತ್ತೊಂದು ಗಂಭೀರ ಆರೋಪ
ಖಾಸಗಿ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಅಡ ಇಡುವವರೇ ಎಚ್ಚರ
ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಹಿಂದೆ ಖಾವಿ ಕೃಪೆ: ಸ್ವಾಮೀಜಿ ಶಾಮೀಲು

ಬೀದರ್ ಬೆಂಗಳೂರು ವಿಮಾನ ವೇಳಾಪಟ್ಟಿ

ಬೆಂಗಳೂರಿನಿಂದ ಬೆಳಗ್ಗೆ 7.45ಕ್ಕೆ ಬೀದರ್​​ಗೆ ವಿಮಾನ ಹೊರಡಲಿದೆ. ಅದೇ ದಿನ ಬೆಳಗ್ಗೆ 9.30ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಸಂಚರಿಸಲಿದೆ. ವಿಮಾನ ಸೇವೆ ಶುರುವಾಗುವ ವಿಷಯವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ‘ಟಿವಿ9’ಗೆ ಖಚಿತಪಡಿಸಿದ್ದಾರೆ.

ಇದನ್ನೂ ನೋಡಿ: ಅಮರೇಶ್ವರ ಜಾತ್ರೆಯಲ್ಲಿ ಪಶು ಲೋಕ ಅನಾವರಣ: ದೇವಣಿ ಸೇರಿ ನಾನಾ ಜಾತಿಯ ಪಶುಗಳನ್ನ ನೋಡಲು ಮುಗಿಬಿದ್ದ ಜನ

ವಿಮಾನ ಹಾರಾಟದ ಸಮಯ ಬದಲಿಸಿ ವಿಮಾನ ಸಂಚಾರ ಪುನರಾರಂಭಿಸಬೇಕೆಂದು ವಿವಿಧ ಸಂಘ ಸಂಸ್ಥೆಗಳು ಸರ್ಕಾರವನ್ನು ಆಗ್ರಹಿಸಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಮನವೊಲಿಸಿ, ವಿಮಾನ ಸೇವೆ ಆರಂಭಿಸುವುದಕ್ಕೆ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 13.48 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಪಡೆದಿದ್ದರು. ಸಚಿವ ಸಂಪುಟವೂ ಒಪ್ಪಿಗೆ ನೀಡಿತ್ತು. ಈಗ ವಿಮಾನ ಹಾರಾಟ ನಡೆಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ