Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಅಡ ಇಡುವವರೇ ಎಚ್ಚರ: ಹುಟ್ಟಿಕೊಂಡಿದೆ ಹೊಸ ವಂಚನೆ ಜಾಲ

ಮೈಕ್ರೋ ಫೈನಾನ್ಸ್ ಕಂಪನಿಗಳು ಬಡವರ ಜೀವ ಹಿಂಡುತ್ತಿದ್ದರೆ, ಮತ್ತೊಂದೆಡೆ ಗೋಲ್ಡ್ ಲೋನ್ ಹೆಸರಲ್ಲಿ ವಂಚನೆ ಮಾಡುವ ಕಂಪನಿಗಳು ತಲೆ ಎತ್ತಿವೆ. ಚಿನ್ನಾಭರಣ ಅಡವಿಟ್ಟರೆ ಕಡಿಮೆ ಬಡ್ಡಿಗೆ ಹೆಚ್ಚಿನ ಸಾಲ ಕೊಡುವ ಆಮಿಷವೊಡ್ಡಿ ಮೋಸ ಮಾಡುವ ದಂಧೆ ಶುರುವಾಗಿದೆ. ಸಂಕಷ್ಟದಲ್ಲಿರುವ ಅಮಾಯಕರನ್ನೇ ಗುರಿಯಾಗಿಸಿ ವಂಚನೆ ಎಸಗಲಾಗುತ್ತಿದೆ.

ಖಾಸಗಿ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಅಡ ಇಡುವವರೇ ಎಚ್ಚರ: ಹುಟ್ಟಿಕೊಂಡಿದೆ ಹೊಸ ವಂಚನೆ ಜಾಲ
ಸಾಂದರ್ಭಿಕ ಚಿತ್ರ
Follow us
ಪ್ರಶಾಂತ್​ ಬಿ.
| Updated By: Ganapathi Sharma

Updated on: Mar 12, 2025 | 8:56 AM

ಮಂಡ್ಯ, ಮಾರ್ಚ್ 12: ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಮೈಕ್ರೋ ಫೈನಾನ್ಸ್ (Microfinance) ಸಂಸ್ಥೆಗಳು ಬಡಜನರ ಜೀವ ಹಿಂಡುತ್ತಿದ್ದು, ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಈ ನಡುವೆ ಗೋಲ್ಡ್ ಲೋನ್ (Gold Loan) ಹೆಸರಿನಲ್ಲಿ ವಂಚನೆ ಮಾಡುವ ದಂಧೆ ಶುರುವಾಗಿದ್ದು, ಅಮಾಯಕರನ್ನೇ ಗುರಿಯಾಗಿಸಿ ಮಾಡಿ ಮೋಸದ ಜಾಲಕ್ಕೆ ಕೆಡವಲಾಗುತ್ತಿದೆ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಚಿನ್ನಾವರಣ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಸಕ್ರಿಯವಾಗಿದ್ದು, ಖಾಸಗಿ ಸಂಸ್ಥೆಯೊಂದರ ಮೋಸದ ಜಾಲಕ್ಕೆ ಸಿದ್ದಲಿಂಗಸ್ವಾಮಿ ಎಂಬುವರು ಸಿಲುಕಿ ಚಿನ್ನ ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆರ್ಥಿಕವಾಗಿ ಸಮಸ್ಯೆ ಎದುರಾಗಿದ್ದರಿಂದ ಸಿದ್ದಲಿಂಗಸ್ವಾಮಿ ತಮ್ಮ ಪತ್ನಿಯ 54 ಗ್ರಾಂ ಚಿನ್ನಾಭರಣಗಳನ್ನು 1.65 ಲಕ್ಷ ರೂ.ಗೆ ಕೆನರಾಬ್ಯಾಂಕ್​ನಲ್ಲಿ ಅಡವಿಟ್ಟಿದ್ದರು. ಇದಾದ ಕೆಲವು ತಿಂಗಳ ಬಳಿಕ ಸಿದ್ದಲಿಂಗಸ್ವಾಮಿಗೆ ‘ಅನಘಾ ಗೋಲ್ಡ್’ ಕಂಪನಿಯ ಸಿಬ್ಬಂದಿ ಫೋನ್ ಮಾಡಿ, ‘ನಿಮ್ಮ ಚಿನ್ನಾಭರಣಗಳನ್ನು ನಾವೇ ಬಿಡಿಸಿ, ಕಡಿಮೆ ಬಡ್ಡಿಗೆ ಅಡವಿಟ್ಟಿಕೊಳ್ಳುತ್ತೇವೆ. ಅಷ್ಟೇ ಅಲ್ಲ 6 ತಿಂಗಳು ಬಡ್ಡಿ ಇರುವುದಿಲ್ಲ’ ಎಂದು ಆಮಿಷ ತೋರಿದ್ದಾರೆ. ಕಡಿಮೆ ಬಡ್ಡಿ ಜೊತೆಗೆ 6 ತಿಂಗಳು ಬಡ್ಡಿ ಹಣ ಉಳಿದುಕೊಳ್ಳುತ್ತಲ್ಲ ಎಂದು ಕೆನರಾ ಬ್ಯಾಂಕ್​ನಿಂದ ಒಡವೆ ಬಿಡಿಸಿ ಅನಘಾ ಗೋಲ್ಡ್ ಕಂಪನಿಯಲ್ಲಿ ಅಡ ಇಟ್ಟಿದ್ದಾರೆ.

ಚಿನ್ನ ಬಿಡಿಸಿಕೊಳ್ಳಲು ಹೋದವರಿಗೆ ಪಂಗನಾಮ

6 ತಿಂಗಳ ಬಳಿಕ ಚಿನ್ನ ಬಿಡಿಸಿಕೊಳ್ಳಲು ಹೋದರೆ, ಹದಿನೈದು ದಿನ ಬಿಟ್ಟು ಬನ್ನಿ, ಮುಂದಿನ ತಿಂಗಳು ಕೊಡುತ್ತೇವೆ, ಇವತ್ತು ಮ್ಯಾನೇಜರ್ ಇಲ್ಲ ಎಂದು ಒಂದೊಂದದೇ ಸಬೂಬು ಹೇಳಿಕೊಂಡು ಸಾಗ ಹಾಕಿದ್ದರು. ಕೊನೆಗೆ ರೋಸಿಹೋದ ಸಿದ್ದಲಿಂಗಸ್ವಾಮಿ, ನ್ಯಾಯಕೊಡಿಸುವಂತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ
Image
ಮತ್ತೆ ಹೆಚ್ಚಾಗಲಿದೆ ಮದ್ಯದ ದರ: ಎಣ್ಣೆ ಪ್ರಿಯಕರಿಗೆ 3ನೇ ಬಾರಿಗೆ ಶಾಕ್​!
Image
ಕೇಂದ್ರ ಏಜೆನ್ಸಿ ಮಧ್ಯಪ್ರವೇಶ ಮಾಡಿದ್ದಕ್ಕೆ ರನ್ಯಾ ಪ್ರಕರಣ ಬೆಳಕಿಗೆ: ಶಾಸಕ
Image
ಬಿರು ಬಿಸಿಲಿನ ನಡುವೆಯೂ ಬೆಂಗಳೂರಿನಲ್ಲಿ ಮಳೆ, ವರುಣ ಸಿಂಚನದಿಂದ ಜನರು ಕೂಲ್
Image
ಚಿನ್ನ ಕಳ್ಳಸಾಗಣೆ: ರನ್ಯಾ ರಾವ್ ಪತಿಗೆ ಕೋರ್ಟ್ ರಿಲೀಫ್, ಬಂಧನದಿಂದ ಬಚಾವ್

ಪೊಲೀಸ್ ಮೆಟ್ಟಿಲೇರಿದ ಪ್ರಕರಣ

ಅನಘಾ ಗೋಲ್ಡ್ ಕಂಪನಿ ಸಿಬ್ಬಂದಿಯೊಬ್ಬ ಮಳವಳ್ಳಿಯಲ್ಲಿ ಮತ್ತೊಬ್ಬರ ಚಿನ್ನಾಭರಣ ಅಡಮಾನ ಇಡುವಂತೆ ಮಾಡಲು ಮುಂದಾಗಿದ್ದಾಗ ಸಿದ್ದಲಿಂಗಸ್ವಾಮಿ ಆತನನ್ನು ತರಾಟೆ ತೆಗೆದುಕೊಂಡು, ಬಳಿಕ ಪೊಲೀಸ್ ಠಾಣೆಗೆ ಕರೆದೋಯ್ದಿದ್ದರು. ಸಂಸ್ಥೆಯ ಮ್ಯಾನೇಜನರ್ ಬುಧವಾರ ಠಾಣೆಗೆ ಬರುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪೊಲೀಸರು ಸಿಬ್ಬಂದಿಯನ್ನ ಬಿಟ್ಟು ಕಳುಹಿಸಿದ್ದರು.

ವಂಚಕರ ವಿರುದ್ಧ ಕ್ರಮಕ್ಕೆ ಆಗ್ರಹ

ಮಳವಳ್ಳಿ ಮಾತ್ರವಲ್ಲದೆ ಮಂಡ್ಯ ಜಿಲ್ಲೆ ಹಾಗೂ ಮೈಸೂರು ಭಾಗದಲ್ಲಿ ಹತ್ತಾರು ಕಂಪನಿಗಳು ಗೋಲ್ಡ್ ಲೋನ್ ಹೆಸರಿನಲ್ಲಿ ವಂಚನೆ ಮಾಡುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೋರಾಟಗಾರ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ಮಹಿಳೆ ನಾಪತ್ತೆ: ದೂರು ಸ್ವೀಕರಿಸದ ಪೊಲೀಸರು

ಒಟ್ಟಾರೆಯಾಗಿ ಅಮಾಯಕರನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿರುವ ವಂಚಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮತ್ತೊಂದೆಡೆ, ಕಡಿಮೆ ಬಡ್ಡಿ ಸೇರಿದಂತೆ ಹಲವು ಆಮಿಷ ತೋರುವ ಕಂಪನಿಗಳಲ್ಲಿ ಚಿನ್ನಾಭರಣ ಅಡವಿಡುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ