ಮುಡಾ ಹಗರಣ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ಕೇಂದ್ರಕ್ಕೆ ದೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ತನಿಖೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸುಳ್ಳು ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಮೂವರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ಕೇಂದ್ರ ಜಾಗೃತಿ ಆಯೋಗಕ್ಕೆ ದೂರು ನೀಡಿದ್ದಾರೆ. ಸಾಕ್ಷ್ಯಾಧಾರಗಳನ್ನು ಮುಚ್ಚಿಹಾಕಿರುವ ಆರೋಪವಿದೆ. ಈ ತನಿಖೆ ವೇಳೆ ರಾಜಕೀಯ ಪ್ರಭಾವ ಬೀರಿರುವ ಆರೋವೂ ಕೇಳಿಬಂದಿದೆ.

ಮೈಸೂರು, ಮಾರ್ಚ್ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ (Mysore Lokayukta) ನಡೆಸಿದ್ದು, ಈಗಾಗಲೆ ಹೈಕೋರ್ಟ್ಗೆ ವರದಿ ಸಲ್ಲಿಕೆ ಮಾಡಿದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ಸಾಕ್ಷ್ಯಾಧಾರಗಳಿದ್ದರೂ ಸುಳ್ಳು ವರದಿ ಸಲ್ಲಿಕೆ ಮಾಡಿದ್ದಾರೆಂದು ಮೂವರು ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಲಿಖಿತ ದೂರು ನೀಡಿದ್ದಾರೆ.
ಮುಡಾ ಹಗರಣಕ್ಕೆ ತನಿಖೆಯಲ್ಲಿ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಕ್ರಮ ಕೈಗೊಂಡಿಲ್ಲ. ಸುಳ್ಳು ದಾಖಲೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖರ್ಬಿಕರ್, ಪೊಲೀಸ್ ಮಹಾ ನಿರೀಕ್ಷಕ ಸುಬ್ರಹ್ಮಣೇಶ್ವರರಾವ್, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ವಿರುದ್ಧ ದೂರು ನೀಡಿದ್ದಾರೆ.
ಭ್ರಷ್ಟ ರಾಜಕಾರಣಿ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯನವರ ಪ್ರಭಾವಕ್ಕೆ ಒಳಗಾಗಿ, ಸಾಮಾನ್ಯ ತಿಳುವಳಿಕೆ ಇಲ್ಲದವರಂತೆ ನಡೆದುಕೊಂಡಿರುವ ಬಗ್ಗೆ ವಿಚಾರಣೆ ನಡೆಸಿ, ಇವರಿಗೆ ನಿಜವಾಗಿಯೂ ಸಾಮಾನ್ಯ ಜ್ಞಾನ ಎಂಬುದು ಇಲ್ಲವೆ? ಅಥವಾ ಪ್ರಭಾವಕ್ಕೆ ಒಳಗಾಗಿ ತಮ್ಮ ಭೌದ್ಧಿಕತೆಯನ್ನು ಭ್ರಷ್ಟರಿಗೆ ಅರ್ಪಣೆ ಮಾಡಿರುತ್ತಾರೆಯೆ?ಇಂತಹವರಿಂದ ಭ್ರಷ್ಟಚಾರ, ಅಕ್ರಮ, ಅನ್ಯಾಯಗಳನ್ನು ತಡೆಯಲು ಸಾಧ್ಯವೆ? ಇಂತಹ ಅಧಿಕಾರಿಗಳು ಐ.ಪಿ.ಎಸ್.ಅಧಿಕಾರಿಗಳಾಗಿ ಮುಂದುವರೆಯುವುದು ಸೂಕ್ತವೆ? ಎಂಬುದನ್ನು ಖಚಿತಪಡಿಸಿಕೊಂಡು ಇವರುಗಳ ವಿರುದ್ದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಸ್ನೇಹಮಯಿ ಅರ್ಜಿ ವಜಾ
ಯತೀಂದ್ರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮುಡಾಗೆ ನೀಡಿರುವ ನಿವೇಶನಗಳನ್ನು ವಾಪಸ್ಸು ಪಡೆಯಲು ಕಾನೂನು ಹೋರಾಟ ಮಾಡುತ್ತೇವೆ ಎಂಬ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ದೂರುದಾರ ಸ್ನೇಹಮಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮುಡಾ ನಿವೇಶನ ವಾಪಸ್ಸು ಕೇಳಲು ಅವಮಾನವಾಗಬೇಕು. ನ್ಯಾಯಾಲಯದಲ್ಲಿ ಮೊದಲು ತೀರ್ಮಾನವಾಗಬೇಕು. ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ತಮ್ಮ ಮಗನಿಗೆ ಬುದ್ದಿ ಹೇಳಬೇಕು. ಸಿದ್ದರಾಮಯ್ಯ ಸಹಾ ವಕೀಲರು ಅವರಿಗೆ ಕಾನೂನು ಗೊತ್ತಿದೆ. ತಮ್ಮ ಮಗನಿಗೆ ಕಾನೂನಿನ ತಿಳುವಳಿಕೆ ನೀಡಬೇಕು. ಸದ್ಯ ನಿವೇಶನ ಯಾರ ಆಸ್ತಿಯೂ ಅಲ್ಲ. ವಾಪಸ್ಸು ಪಡೆಯಲು ಅದೇನು ಅವರ ಜಮೀನಾ? ಮೊದಲು ಅವರು ಅದನ್ನು ರುಜುವಾತು ಮಾಡಲಿ ಎಂದು ವಾಗ್ದಾಳಿ ಮಾಡಿದರು.