ಬೀದರ್, ಜೂ.30: ಕಳೆದ ವರ್ಷ ಮಳೆ ಕೊರತೆಯಿಂದಾಗಿ ಬರಗಾಲಕ್ಕೆ ತುತ್ತಾಗಿ ನಾಟೀ ಮಾಡಿದ ಯಾವುದೇ ಬೆಳೆ ರೈತನ (Farmer) ಕೈಗೆ ಬಾರದೆ ನಷ್ಟವನ್ನ ಅನುಭವಿಸಿದ್ದರು. ಈ ವರ್ಷ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿದ್ದು, ರೈತರು ಬಿತ್ತಿದ ಬೆಳೆ ಚೆನ್ನಾಗಿ ಫಸಲು ಬಂದಿದೆ. ಆದರೆ, ಆ ಬೆಳೆಗಳಿಗೆ ಈಗ ಜಿಂಕೆಗಳ ಕಾಟ ಜಾಸ್ತಿಯಾಗಿದ್ದು, ರೈತರು ಬೆಳೆದ ಬೆಳೆಯನ್ನ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸಬೇಕಾಗಿದೆ. ಹೌದು, ಬೀದರ್(Bidar) ಜಿಲ್ಲೆಯಲ್ಲಿ ಜಿಂಕೆ ಹಾಗೂ ಕೃಷ್ಣ ಮೃಗಗಳ ಸಂಖ್ಯೆ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಜಿಂಕೆ-ಕೃಷ್ಣಮೃಗಳಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯವಾಗಿದೆ.
ಇನ್ನು ಜಿಂಕೆಗಳು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿವೆ. ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗುವ ಈ ಕಾಡು ಪ್ರಾಣಿಗಳು ಎಕರೆಗಟ್ಟಲೇ ಬೆಳೆಯನ್ನ ತಿಂದು ನಾಶ ಮಾಡಿಹೋಗುತ್ತವೆ. ಆದರೆ, ರೈತರ ಸಮಸ್ಯೆಗೆ ಸ್ಫಂಧಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಮ್ಮ ನೋವನ್ನ ಯಾರಿಗೆ ಹೇಳಬೇಕೆಂದು ಇಲ್ಲಿನ ರೈತರ ಅಳಲಾಗಿದೆ. ಇದರ ಜೊತೆಗೆ ಜಿಂಕೆಯನ್ನ ಹೊಡೆಯಲು ಬಾರದೆ, ಅವುಗಳನ್ನ ಹೆದರಿಸಲು ಬಾರದಂತಹ ಸ್ಥಿತಿ ನಮ್ಮಲ್ಲಿದೆ, ಒಂದು ವೇಳೆ ಏನಾದರೂ ನಾವೂ ಜಿಂಕೆಯನ್ನ ಹೊಡೆದರೆ, ಇಲ್ಲ, ಅದು ಆಕಸ್ಮಿಕವಾಗಿ ಮರಣಹೊಂದಿದರು ಕೂಡ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆಯನ್ನ ಅರಣ್ಯ ಇಲಾಖೆಯವರು ಮಾಡುತ್ತಿದ್ದಾರೆ. ಜೊತೆಗೆ ಜಿಂಕೆಗಳು ನಮ್ಮ ಬೆಳೆಯನ್ನ ತಿಂದರೂ ಪರವಾಗಿಲ್ಲ, ನಮ್ಮ ಬೆಳೆನಾಶವಾದರೇ ಅದಕ್ಕೆ ಅರಣ್ಯ ಇಲಾಖೆಯವರು ಪರಿಹಾರ ಕೊಡಬೇಕು ಎಂದು ಇಲ್ಲಿನ ರೈತರು ಕೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ರಾಯಚೂರಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಗೆ ರೈತರು ಹೈರಾಣು: ರಾತ್ರಿ ವಿದ್ಯುತ್ ಸಮಸ್ಯೆ, ಗೃಹಿಣಿಯರು ಮಕ್ಕಳ ಪರದಾಟ
ಸುತ್ತಮುತ್ತಲೂ ಏನಿಲ್ಲವೆಂದರೂ ಒಂದೊಂದು ಗುಂಪಿನಲ್ಲಿ ಐನೂರರಿಂದ ಸಾವಿರದವರೆಗೆ ಜಿಂಕೆಗಳಿವೆ. ಒಂದು ಜಿಂಕೆಯ ಹಿಂಡು ರೈತನ ಹೊಲಕ್ಕೆ ನುಗ್ಗಿದರೆ ಸಾಕು ಅರ್ಧ ಗಂಟೆಯಲ್ಲಿ ರೈತನ ಬೆಳೆಯನ್ನೆಲ್ಲ ತಿಂದು ಬಿಡುತ್ತವೆ. ಈ ಗ್ರಾಮ ಅಷ್ಟೇ ಅಲ್ಲ, ಬೀದರ್ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಚಿಂಕೆಗಳ ಕಾಟ ಜಾಸ್ತಿಯಿದ್ದು, ರೈತರ ಬೆಳೆಯನ್ನೇಲ್ಲ ತಿಂದು ನಾಶ ಮಾಡುತ್ತಿದೆ. ಇನ್ನು ಪದೇ ಪದೇ ಬರಗಾಲದಿಂದ ತತ್ತರಿಸಿಹೋಗಿದ್ದ ನಾವು, ಈ ವರ್ಷ ಉತ್ತಮವಾಗಿ ಮಳೆಯಾಗಿದ್ರಿಂದ ಬೆಳೆ ಚನ್ನಾಗಿ ಬಂದಿದೆ. ಆದರೆ, ಜಿಂಕೆಗಳ ಕಾಟ ಜಾಸ್ತಿಯಾಗಿದೆ ಎಂದು ರೈತರು ತಮ್ಮ ಅಸಮಾದಾನ ತೋಡಿಕೊಳ್ಳುತ್ತಿದ್ದಾರೆ.
ಪ್ರತಿದಿನ ಹೊಲಕ್ಕೆ ಹೋದ್ರೆ ಸಾಕು ಜಿಂಕೆಗಳನ್ನ ಓಡಿಸುವುದೆ ಡ್ಯೂಟಿಯಾಗಿ ಪರಿಣಮಿಸಿದೆ. ಹೊಲಕ್ಕೆ ದಾಳಿ ಮಾಡುವ ಜಿಂಕೆಗಳು ಹೊಲದಲ್ಲಿ ಬೆಳೆದಿರುವ ಹೆಸರು, ಉದ್ದನ್ನ ಖಾಲಿ ಮಾಡುತ್ತಿವೆ. ರೈತರು ಇವುಗಳನ್ನ ಹೊಡೆಯಲು ಹೋದರೆ, ಅರಣ್ಯ ಇಲಾಖೆಯ ಅಧೀಕಾರಿಗಳು ಹೆದರಿಸುತ್ತಿದ್ದಾರೆ. ನಾವು ಏನು ಮಾಡಬೇಕು ನೀವೇ ಹೇಳಿ ಎಂದು ಇಲ್ಲಿನ ರೈತರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ರೈತರು ಸಾಲಸೋಲ ಮಾಡಿ ಬಿತ್ತಿದ್ದ ಬೆಳೆಯನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಹಾಗೂ ಅರಣ್ಯ ಇಲಾಖೆ ರೈತರ ಸಮಸ್ಯೆಗೆ ಸ್ಫಂದಿಸಿ ರೈತರ ಬೆಳೆಯನ್ನ ಜಿಂಕೆಯಿಂದ ಕಾಪಾಡಿ ಎಂದು ರೈತರು ಸರಕಾರಕ್ಕೆ ವಿನಂತಿಸಿದ್ದಾರೆ.
ಒಟ್ಟಾರೆ ಗಡಿ ಜಿಲ್ಲೆಯ ರೈತರ ಹೊಲದಲ್ಲಿ ಈಗ ಜಿಂಕೆಗಳದ್ದೆ ಕಾರುಬಾರು. ಜಿಂಕೆಯ ತುಂಟಾಟಕ್ಕೆ ರೈತರು ಕಂಗಾಲಾಗಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲಕ್ಕೆ ಬಂದು ಹೋಗೋ ಜಿಂಕೆಗಳು ರೈತರ ಬೆಳೆಯ ಬಂಪರ್ ಬೆಲೆಯ ಆಸೆಗೆ ತಣ್ಣೀರೆರಚಿವೆ. ಜಿಲ್ಲೆಯ ರೈತರು ಜಿಂಕೆಯ ಹಾವಳಿ ತಪ್ಪಿಸಿ ಎಂದು ಅರಣ್ಯ ಇಲಾಖೆಯ ಮೊರೆ ಹೋಗುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ರೈತರ ಮನವಿಗೆ ಸ್ಫಂಧಿಸುತ್ತಿಲ್ಲ ಎನ್ನುವುದು ಮಾತ್ರ ದುರದುಷ್ಟಕರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ