ಬೀದರ್: ರಾಜ್ಯದ ಕೆಲ ಕಡೆ ಸುರಿದಿದ್ದ ಭಾರಿ ಮಳೆಗೆ ರೈತರು ಕಂಗಾಲಾಗಿದ್ದರು. ಬೆಳೆಗಳು ಮಳೆ ನೀರಿಗೆ ಕೊಚ್ಚಿ ಹೋಗಿದ್ದವು, ಗದ್ದೆಗಳು ಕೆರೆಯಂತಾಗಿದ್ದವು. ಸದ್ಯ ಮಳೆ ನಿಂತಿದ್ದು ರೈತರು ನಿಟ್ಟುಸಿರು ಬಿಡುವುದರೊಳಗೆ ಈಗ ರೈತನೊಬ್ಬ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.
ಕಾಡು ಹಂದಿ ಮಂಗನ ಕಾಟಕ್ಕೆ ಪಪ್ಪಾಯಿ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಐದು ತಿಂಗಳ ಹಿಂದೆ ನಾಟಿ ಮಾಡಿದ್ದ ಇನ್ನೂರಕ್ಕೂ ಹೆಚ್ಚು ಪಪ್ಪಾಯಿ ಗಿಡಗಳನ್ನ ಕಾಡು ಹಂದಿ, ಮಂಗಗಳು ಹೂವು ಬಿಡುತ್ತಿದ್ದ ಪಪ್ಪಾಯಿ ಗಿಡಗಳನ್ನ ತಿಂದು ಅವುಗಳನ್ನ ಮುರಿದು ಹಾಕಿವೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಗ್ರಾಮದ ರೈತ ಸಂತೋಷ ಎಂಬುವರಿಗೆ ಸೇರಿದ ಹೊಲದಲ್ಲಿರುವ ಪಪ್ಪಾಯಿ ಗಿಡ ನಾಶಮಾಡಿವೆ.
ಕಾಡು ಪ್ರಾಣಿ ದಾಳಿಗೆ ನೆಲಕಚ್ಚಿದ ಬೆಳೆ
ರೈತ ತನಗಿರುವ ಮೂರು ಎಕರೆಗಳಷ್ಟು ಜಮೀನಿನಲ್ಲಿ 3 ಸಾವಿರ ಪಪ್ಪಾಯಿ ಸಸಿಗಳನ್ನ ನೆಟ್ಟಿದ್ದರು. ಅದರಲ್ಲಿ ಇನ್ನೂರಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು ನಾಶವಾಗಿವೆ. ಇದರಿಂದ ರೈತನಿಗೆ ಭಾರೀ ನಷ್ಟ ಉಂಟಾಗಿದೆ. ಒಂದು ಗಿಡದಲ್ಲಿ ಒಂದು ಕ್ವಿಂಟಾಲ್ ವರೆಗೂ ಹಣ್ಣು ಬರುವ ನಿರೀಕ್ಷೆ ಇತ್ತು. ಪಪ್ಪಾಯಿ ಗಿಡಗಳು ನಾಶವಾಗಿದ್ದರಿಂದ 1.50 ಲಕ್ಷದಷ್ಟು ನಷ್ಟ ರೈತನಿಗೆ ಸಂಭವಿಸಿದೆ. ಸಾಲ ಸೋಲಾ ಮಾಡಿ ಹನಿ ನೀರಾವರಿ ಮೂಲಕ ಬೆಳೆಸಿದ್ದ ಪಪ್ಪಾಯಿ ಹಾನಿಯಾಗಿದ್ದು ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಕಳೆದೆರಡು ದಿನದಿಂದ ನಿರಂತರವಾಗಿ ರಾತ್ರಿ ವೇಳೆ ತೋಟಕ್ಕೆ ದಾಳಿ ಮಾಡುತ್ತಿರುವ ಮಂಗಗಳು, ಕಾಡು ಹಂದಿ ಗಿಡಗಳನ್ನು ನೆಲಕ್ಕುರುಳಿಸಿವೆ.
ಬಹುತೇಕ ಗಿಡಗಳನ್ನ ತಿಂದು ಹಾಕಿದ್ದು ಅದರಲ್ಲಿನ ಹೂವುಗಳನ್ನ ಕೂಡಾ ಮಂಗಗಳು ತಿಂದಿವೆ ಇದರಿಂದ ಚನ್ನಾಗಿರುವ ಗಿಡಗಳು ಕೂಡಾ ಹೂವನ್ನು ತಿಂದಿದ್ದರಿಂದ ಅವುಗಳು ಕಾಯಿ ಬಿಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಪಪ್ಪಾಯಿ ಜೊತೆಗೆ ಅಂತರ ಬೆಳೆಯಾಗಿ ಬೆಳೆದ ಚಂಡು ಹೂವು ಕೂಡಾ ನಾಶವಾಗಿದೆ. ರೈತ ಹೊಲದಲ್ಲಿ ಇಲ್ಲದೆ ವೇಳೆಯಲ್ಲಿ ಹೊಲಕ್ಕೆ ನುಗ್ಗುವ ಮಂಗ ಕಾಡು ಹಂದಿಯ ಹಿಂಡು ಪಪ್ಪಾಯಿ ಗಡಿಗಳ ಜತೆ ಆಟ ಆಡಿ ನೆಲಕ್ಕುರುಳಿಸಿವೆ. ಪಕ್ಕದ ಹೊಲದ ರೈತರು ರಕ್ಷಣೆಗೆ ಹೋದರೆ ಅವರ ಮೇಲೂ ಮಂಗಗಳು ದಾಳಿಗೆ ಯತ್ನಿಸಿವೆ. ಹೀಗಾಗಿ ರೈತ ಸಂತೋಷ್ ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾನೆ. ಕಾಡು ಪ್ರಾಣಿಗಳು ಬೆಳೆ ಹಾನಿ ಮಾಡಿದರೆ ರೈತರಿಗೆ ಪರಿಹಾರ ಕೊಡಲು ಅವಕಾಶವಿದೆ. ಆದರೆ, ಸರ್ಕಾರದ ನಿಯಮಾವಳಿಯಲ್ಲಿ ಪಪ್ಪಾಯಿ ಬೆಳೆಗೆ ಅವಕಾಶವಿಲ್ಲ. ಇದು ಸಹಜವಾಗಿಯೇ ರೈತನಿಗೆ ಸಂಕಷ್ಟಕ್ಕೆ ಸಿಲುಕಿಸಿದೆ.
ಇದನ್ನೂ ಓದಿ: ‘ಜಂಗ್ಲಿ ಕುಲಪತಿಯ ಜಂಗೀಕಥೆ’- ಧಾರವಾಡದಲ್ಲಿ ಬಿಡುಗಡೆಯಾದ ವಿಭಿನ್ನ ಆತ್ಮಕಥೆ